IND vs PAK: ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದ ಜಡೇಜಾ ಸ್ಥಾನಕ್ಕಾಗಿ ಮೂವರ ನಡುವೆ ಪೈಪೋಟಿ!

ಸದ್ಯ ಯುಎಇ ನೆಲದಲ್ಲಿ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಎಲ್ಲಾ ಪಂದ್ಯಗಳು ಮುಕ್ತಾಯವಾಗಿದ್ದು, ಇಂದಿನಿಂದ ( ಸೆಪ್ಟೆಂಬರ್ 3 ) ಸೂಪರ್ 4 ಹಂತದ ಪಂದ್ಯಗಳು ಆರಂಭವಾಗಿವೆ.
ಗ್ರೂಪ್ ಹಂತದಲ್ಲಿನ ಎಲ್ಲಾ 2 ಪಂದ್ಯಗಳಲ್ಲಿ ಜಯ ಸಾಧಿಸಿ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದುಕೊಂಡಿರುವ ಟೀಮ್ ಇಂಡಿಯಾ ಸೆಪ್ಟೆಂಬರ್ 4ರ ಭಾನುವಾರದಂದು ನಡೆಯಲಿರುವ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಟವನ್ನು ನಡೆಸಲಿದೆ. ಇದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಈ ಬಾರಿಯ ಏಷ್ಯಾಕಪ್ ಟೂರ್ನಿಯ ಎರಡನೇ ಮುಖಾಮುಖಿಯಾಗಿದ್ದು, ಗ್ರೂಪ್ ಹಂತದಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆದಾಗ ಕಣಕ್ಕಿಳಿದಿದ್ದ ಎರಡೂ ತಂಡಗಳ ಆಡುವ ಬಳಗಕ್ಕೆ ಹೋಲಿಸಿದರೆ ಈ ಬಾರಿ ಸಾಕಷ್ಟು ಬದಲಾವಣೆಯಾಗಲಿವೆ.
ಹೌದು, ಪಾಕಿಸ್ತಾನದ ಬೌಲರ್ ಶಹನವಾಜ್ ದಹಾನಿ ಭಾರತ ವಿರುದ್ಧದ ಈ ಸೂಪರ್ 4 ಪಂದ್ಯದಿಂದ ಹೊರ ಬಿದ್ದಿದ್ದು, ಟೀಮ್ ಇಂಡಿಯಾದ ಪ್ರಮುಖ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದಾಗಿ ಇಡೀ ಏಷ್ಯಾಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗೆ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಪ್ರಮುಖ ಆಟಗಾರನಾಗಿದ್ದ ರವೀಂದ್ರ ಜಡೇಜಾ ಬದಲಾಗಿ ಪಾಕ್ ವಿರುದ್ಧದ ಪಂದ್ಯದಲ್ಲಿ ಮತ್ತು ಉಳಿದ ಸೂಪರ್ 4 ಹಂತದ ಪಂದ್ಯಗಳಲ್ಲಿ ಯಾವ ಆಟಗಾರ ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆ ಎದ್ದಿದೆ. ಇನ್ನು ರವೀಂದ್ರ ಜಡೇಜಾ ಹೊರಬಿದ್ದ ನಂತರ ಟೂರ್ನಿಗೆ ಮೀಸಲು ಆಟಗಾರನಾಗಿ ಪ್ರಕಟಗೊಂಡಿದ್ದ ಅಕ್ಷರ್ ಪಟೇಲ್ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದು, ಆಡುವ ಬಳಗದಲ್ಲಿ ರವೀಂದ್ರ ಜಡೇಜಾ ಸ್ಥಾನ ತುಂಬಲು ಅಕ್ಷರ್ ಪಟೇಲ್ ಸೇರಿದಂತೆ ಒಟ್ಟು ಮೂವರ ನಡುವೆ ಪೈಪೋಟಿ ಏರ್ಪಟ್ಟಿದೆ.

ಈ ಮೂವರಲ್ಲಿ ಯಾರಿಗೆ ಸ್ಥಾನ?
ರವೀಂದ್ರ ಜಡೇಜಾ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಜಡೇಜಾ ಸ್ಥಾನ ತುಂಬಲು ಅಕ್ಷರ್ ಪಟೇಲ್, ರಿಷಭ್ ಪಂತ್ ಹಾಗೂ ದೀಪಕ್ ಹೂಡಾ ನಡುವೆ ಪೈಪೋಟಿ ಏರ್ಪಟ್ಟಿದೆ. ಅಕ್ಷರ್ ಪಟೇಲ್ ರವೀಂದ್ರ ಜಡೇಜಾ ರೀತಿಯೇ ಎಡಗೈ ಆಲ್ ರೌಂಡರ್ ಆಟಗಾರನಾಗಿದ್ದು ಟಿ ಟ್ವೆಂಟಿಯಲ್ಲಿ ಸ್ಫೋಟಕ ಆಟವನ್ನಾಡುವ ಆಟಗಾರನಾಗಿರುವ ಕಾರಣ ಜಡೇಜಾ ಬದಲಿ ಆಟಗಾರನಾಗಿ ಕಣಕ್ಕಿಳಿಯಲು ಸರಿಯಾದ ಆಯ್ಕೆ ಎನಿಸಿಕೊಂಡಿದ್ದರೆ, ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ಈ ರೇಸ್‌ನಲ್ಲಿದ್ದಾರೆ. ಇನ್ನು ಈ ಇಬ್ಬರು ಮಾತ್ರವಲ್ಲದೇ ಇತ್ತೀಚಿನ ದಿನಗಳಲ್ಲಿ ನಡೆದ ಪಂದ್ಯಗಳಲ್ಲಿ ಉತ್ತಮ ಆಲ್ ರೌಂಡರ್ ಪ್ರದರ್ಶನ ನೀಡಿರುವ ದೀಪಕ್ ಹೂಡಾ ಕೂಡ ಜಡೇಜಾ ಸ್ಥಾನ ತುಂಬಲು ಸಿದ್ಧರಿದ್ದಾರೆ. ಹೀಗೆ ಲಭ್ಯವಿರುವ ಈ ಮೂವರಲ್ಲಿ ಯಾರಿಗೆ ಜಡೇಜಾ ಬದಲಿ ಆಟಗಾರನಾಗಿ ತಂಡದ ಆಡುವ ಬಳಗದಲ್ಲಿ ಸ್ಥಾನ ಸಿಗಲಿದೆ ಎಂಬುದು ಇದೀಗ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಜಡೇಜಾ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಿಂದಲೂ ಔಟ್
ಇನ್ನು ಸದ್ಯ ಗಾಯದ ಸಮಸ್ಯೆಯಿಂದಾಗಿ ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯಿಂದ ಹೊರಬಿದ್ದಿರುವ ರವೀಂದ್ರ ಜಡೇಜಾ ಮುಂಬರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೂ ಸಹ ಅಲಭ್ಯರಾಗಲಿದ್ದಾರೆ ಎಂಬ ಬೇಸರದ ಸುದ್ದಿ ಇದೀಗ ಹೊರಬಿದ್ದಿದೆ. ಹೀಗಾಗಿ ಟೀಮ್ ಇಂಡಿಯಾ ರವೀಂದ್ರ ಜಡೇಜಾ ಬದಲಾಗಿ ಈ ಬೃಹತ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಸರೆಯಾಗಬಲ್ಲ ಆಲ್ ರೌಂಡರ್ ಆಟಗಾರನನ್ನು ಸಿದ್ಧಪಡಿಸಬೇಕಿದೆ.

ಭಾರತ ಮತ್ತು ಪಾಕಿಸ್ತಾನ ಸ್ಕ್ವಾಡ್
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್, ದೀಪಕ್ ಚಹಾರ್.
ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದಾಗಿ ಏಷ್ಯಾಕಪ್‌ನಿಂದ ಹೊರಬಿದ್ದಿದ್ದು ಅಕ್ಷರ್ ಪಟೇಲ್ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಶಹನವಾಜ್ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸನೈನ್, ಹಸನ್ ಅಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications