Asia Cup 2022:14 ವರ್ಷಗಳಲ್ಲಿ ಕೇವಲ 2 ಬಾರಿ ಭಾರತ vs ಹಾಂಗ್‌ಕಾಂಗ್ ಪಂದ್ಯ; ಅಂದು 256 ರನ್ ಜಯ!

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ನಾಲ್ಕನೇ ಪಂದ್ಯದಲ್ಲಿ ಇಂದು ( ಆಗಸ್ಟ್ 31 ) ಭಾರತ ಮತ್ತು ಹಾಂಗ್ ಕಾಂಗ್ ತಂಡಗಳು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ಇನ್ನು ಟೀಮ್ ಇಂಡಿಯಾ ಆಗಸ್ಟ್ 28ರಂದು ನಡೆದ ಟೂರ್ನಿಯ ಗ್ರೂಪ್ ಹಂತದ ಎರಡನೇ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 5 ವಿಕೆಟ್‍ಗಳ ರೋಚಕ ಜಯವನ್ನು ಸಾಧಿಸುವುದರ ಮೂಲಕ ಅಂಕಪಟ್ಟಿಯಲ್ಲಿ ಖಾತೆಯನ್ನು ತೆರೆದಿತ್ತು. ಈ ಮೂಲಕ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾ ಸೂಪರ್ 4 ಸುತ್ತಿಗೆ ಅಧಿಕೃತವಾಗಿ ಪ್ರವೇಶ ಪಡೆದುಕೊಳ್ಳಬೇಕೆಂದರೆ ಇಂದು ಹಾಂಗ್ ಕಾಂಗ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಕಡ್ಡಾಯವಾಗಿ ಜಯ ಸಾಧಿಸಲೇಬೇಕಾಗಿದೆ.
ಒಂದುವೇಳೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಂಕಾಂಗ್ ವಿರುದ್ಧ ಸೋತರೆ ಸೆಪ್ಟೆಂಬರ್ 2ರಂದು ನಡೆಯಲಿರುವ ಪಾಕಿಸ್ತಾನ ಮತ್ತು ಹಾಂಕಾಂಗ್ ತಂಡಗಳ ನಡುವಿನ ಪಂದ್ಯದ ಫಲಿತಾಂಶದ ಮೇಲೆ ಟೀಮ್ ಇಂಡಿಯಾದ ಸೂಪರ್ 4 ಸುತ್ತಿನ ಪ್ರವೇಶ ನಿರ್ಧಾರವಾಗಲಿದೆ. ಹೀಗಾಗಿ ಟೀಮ್ ಇಂಡಿಯಾ ನೆಟ್ ರನ್ ರೇಟ್ ಸಮಸ್ಯೆಗೆ ಒಳಗಾಗದೇ ನೇರವಾಗಿ ಸೂಪರ್ 4 ತಲುಪಲು ಹಾಂಗ್ ಕಾಂಗ್ ವಿರುದ್ಧ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಇನ್ನು ಟೀಮ್ ಇಂಡಿಯಾ ಹಾಂಗ್ ಕಾಂಗ್ ತಂಡವನ್ನು ಏಷ್ಯಾ ಕಪ್ ಟೂರ್ನಿಯಲ್ಲಿ 3ನೇ ಬಾರಿಗೆ ಎದುರಿಸುತ್ತಿದ್ದು, ಇತ್ತಂಡಗಳ ನಡುವಿನ ಏಷ್ಯಾಕಪ್ ಬಲಾಬಲ ಹೇಗಿದೆ ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

ಉಭಯ ತಂಡಗಳ ನಡುವಿನ ಏಷ್ಯಾಕಪ್ ಪಂದ್ಯ 2 ಬಾರಿ
ಇನ್ನು ಭಾರತ ಮತ್ತು ಹಾಂಗ್ ಕಾಂಗ್ ತಂಡಗಳು ಏಷ್ಯಾ ಕಪ್ ಇತಿಹಾಸದಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಮುಖಾಮುಖಿಯಾಗಿವೆ. ಹೌದು, 2008ರ ಏಷ್ಯಾಕಪ್ ಟೂರ್ನಿಯಲ್ಲಿ ಕ್ವಾಲಿಫೈಯರ್ ಗೆದ್ದು ಅರ್ಹತೆ ಗಿಟ್ಟಿಸಿಕೊಂಡಿದ್ದ ಹಾಂಗ್ ಕಾಂಗ್ ಟೀಮ್ ಇಂಡಿಯಾ ವಿರುದ್ಧ ಸೆಣಸಾಟ ನಡೆಸಿತ್ತು. ಇದು ಉಭಯ ತಂಡಗಳ ನಡುವೆ ನಡೆದಿದ್ದ ಮೊದಲ ಏಷ್ಯಾಕಪ್ ಮುಖಾಮುಖಿ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 256 ರನ್‌ಗಳ ಗೆಲುವು ಕಂಡಿತ್ತು. ಹಾಗೂ 2018ರ ನಂತರ ಮತ್ತೆ ಮುಖಾಮುಖಿಯಾದಾಗ ಭಾರತ 26 ರನ್‌ಗಳ ಗೆಲುವು ಕಂಡಿತ್ತು.

ಚೊಚ್ಚಲ ಪಂದ್ಯದಲ್ಲಿ 256 ರನ್‌ಗಳ ಭರ್ಜರಿ ಜಯ ಕಂಡಿದ್ದ ಭಾರತ
2008ರ ಜೂನ್ 25ರಂದು ಕರಾಚಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಮತ್ತು ಹಾಂಗ್‌ಕಾಂಗ್ ನಡುವಿನ ಮೊದಲ ಏಷ್ಯಾ ಕಪ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ಎಂಎಸ್ ಧೋನಿ ಹಾಗೂ ಸುರೇಶ್ ರೈನಾ ಅವರ ಆಕರ್ಷಕ ಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 374 ರನ್ ಕಲೆ ಹಾಕಿ ಎದುರಾಳಿ ಹಾಂಗ್ ಕಾಂಗ್ ತಂಡಕ್ಕೆ ಗೆಲ್ಲಲು ಬರೋಬ್ಬರಿ 375 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಅತ್ತ ಈ ಗುರಿಯನ್ನು ಬೆನ್ನಟ್ಟಲು ಮುಂದಾದ ಹಾಂಗ್ ಕಾಂಗ್ ತಂಡವನ್ನು ಪಿಯೂಷ್ ಚಾವ್ಲಾ ಹಾಗೂ ವಿರೇಂದ್ರ ಸೆಹ್ವಾಗ್ ಸ್ಪಿನ್ ದಾಳಿ ಕಟ್ಟಿಹಾಕಿತ್ತು. 36.5 ಓವರ್‌ಗಳಲ್ಲಿ 118 ರನ್ ಕಲೆಹಾಕಿ ಆಲ್ ಔಟ್ ಆಗಿದ್ದ ಹಾಂಗ್ ಕಾಂಗ್ 256 ರನ್‌ಗಳ ಅಂತರದ ಹೀನಾಯ ಸೋಲನ್ನು ಕಂಡಿತ್ತು.

ಅಬ್ಬರದ ಶತಕ ಸಿಡಿಸಿದ ರೈನಾ
ಇನ್ನು ಆ ಪಂದ್ಯದಲ್ಲಿ ಎಂಎಸ್ ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು 96 ಎಸೆತಗಳಲ್ಲಿ ಅಜೇಯ 109 ರನ್ ಕಲೆಹಾಕಿದರೆ, ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸುರೇಶ್ ರೈನಾ 68 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 101 ರನ್ ಕಲೆಹಾಕಿ ಅಬ್ಬರಿಸಿದ್ದರು. ಇನ್ನುಳಿದಂತೆ ಆರಂಭಿಕರಾದ ಗೌತಮ್ ಗಂಭೀರ್ 51 ಹಾಗೂ ವಿರೇಂದ್ರ ಸೆಹ್ವಾಗ್ 78 ರನ್ ಕಲೆಹಾಕಿದ್ದರು ಮತ್ತು ರೋಹಿತ್ ಶರ್ಮಾ 11, ರಾಬಿನ್ ಉತ್ತಪ್ಪ ಅಜೇಯ 15 ರನ್ ಗಳಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications