Asia Cup 2022: ಮತ್ತೆ ಮುಖಾಮುಖಿಯಾಗಲಿವೆ ಭಾರತ ಮತ್ತು ಪಾಕ್! ಪಂದ್ಯ ಯಾವತ್ತು? ಇಲ್ಲಿದೆ ಮಾಹಿತಿ

ಸದ್ಯ ಯುಎಇಯಲ್ಲಿ ಏಷ್ಯಾಕಪ್ ಟೂರ್ನಿಯ ಪಂದ್ಯಗಳು ಜರುಗುತ್ತಿದ್ದು, ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹಣಾಹಣಿ ಆಗಸ್ಟ್ 28ರ ಭಾನುವಾರದಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡ 19.5 ಓವರ್‌ಗಳಲ್ಲಿ 147 ರನ್ ಕಲೆಹಾಕಿ ಆಲ್ ಔಟ್ ಆಗಿ ಟೀಮ್ ಇಂಡಿಯಾಗೆ ಗೆಲ್ಲಲು 148 ರನ್ ಗುರಿ ನೀಡಿತ್ತು. ಈ ಗುರಿಯನ್ನು ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಬೆನ್ನತ್ತಿದ ಟೀಮ್ ಇಂಡಿಯಾ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಕಲೆಹಾಕಿ 5 ವಿಕೆಟ್‍ಗಳ ರೋಚಕ ಗೆಲುವನ್ನು ಕಂಡಿತು.
ಟೀಮ್ ಇಂಡಿಯಾ ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಖಾತೆಯನ್ನು ತೆರೆದಿದ್ದು ಸೂಪರ್ 4 ಸುತ್ತಿಗೆ ಪ್ರವೇಶ ಪಡೆಯಲು ಆಗಸ್ಟ್ 31ರಂದು ನಡೆಯುವ ಹಾಂಗ್ ಕಾಂಗ್ ವಿರುದ್ಧದ ಪಂದ್ಯವನ್ನು ಗೆಲ್ಲಬೇಕಿದೆ. ಅತ್ತ ಟೀಮ್ ಇಂಡಿಯಾ ವಿರುದ್ಧ ಸೋತಿರುವ ಪಾಕಿಸ್ತಾನ ಸೂಪರ್ 4 ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಬೇಕಾದರೆ ಸೆಪ್ಟೆಂಬರ್ 2ರಂದು ಹಾಂಗ್‌ಕಾಂಗ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಕಡ್ಡಾಯವಾಗಿ ಗೆಲ್ಲಲೇಬೇಕಿದೆ. ಹೀಗೆ ಭಾರತ ಮತ್ತು ಪಾಕಿಸ್ತಾನ ತಂಡಗಳೆರಡೂ ತಮ್ಮ ಮುಂದಿನ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ ಕಣಕ್ಕಿಳಿಯಲಿದ್ದು, ಎರಡೂ ತಂಡಗಳು ಹಾಂಕ್ ಕಾಂಗ್ ವಿರುದ್ಧ ಜಯ ಸಾಧಿಸಿದರೆ ಅಂಕಪಟ್ಟಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದುಕೊಂಡು ಸೂಪರ್ 4 ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿವೆ.
ಹೀಗೆ ಹಾಂಗ್ ಕಾಂಗ್ ತಂಡ ಭಾರತದ ವಿರುದ್ಧ ಹಾಗೂ ಪಾಕಿಸ್ತಾನದ ವಿರುದ್ಧ ಸೋಲುಂಡರೆ, ಸೂಪರ್ 4 ಸುತ್ತಿಗೆ ಪ್ರವೇಶಿಸಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಹಾಗಿದ್ದರೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಯಾವ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ ಹಾಗೂ ಈ ಪಂದ್ಯ ಎಂದು ನಡೆಯಲಿದೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ.

ಭಾರತ ಮತ್ತು ಪಾಕ್ ಸೂಪರ್ 4 ಸುತ್ತಿಗೆ ಪ್ರವೇಶಿಸಿದರೆ ಮತ್ತೆ ಮುಖಾಮುಖಿ
ಹೀಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಎ ಗುಂಪಿನ ಅಂಕಪಟ್ಟಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡರೆ ಸೂಪರ್ 4 ಸುತ್ತಿನ A1 vs A2 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಹೌದು, ಎ ಗುಂಪಿನ ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನ ಪಡೆದುಕೊಳ್ಳುವ ತಂಡಗಳು ಮತ್ತೆ ಮುಖಾಮುಖಿಯಾಗಲಿದ್ದು, ಭಾರತ ಮತ್ತು ಪಾಕ್ ನಡುವಿನ ಈ ಪಂದ್ಯ ಸೆಪ್ಟೆಂಬರ್ 4ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಒಂದುವೇಳೆ ಹಾಂಗ್‌ಕಾಂಗ್ ಗೆದ್ದರೆ?
ಇನ್ನು ಹಾಂಗ್‌ಕಾಂಗ್ ತಂಡ ಟೀಮ್ ಇಂಡಿಯಾ ವಿರುದ್ಧ ಗೆದ್ದು ಪಾಕಿಸ್ತಾನ ವಿರುದ್ಧ ಸೋತರೆ 3 ತಂಡಗಳಲ್ಲಿ ಅತಿಹೆಚ್ಚು ನೆಟ್ ರನ್ ರೇಟ್ ಹೊಂದಿರುವ 2 ತಂಡಗಳು ಸೂಪರ್ 4 ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿವೆ. ಹಾಗೂ ಪಾಕಿಸ್ತಾನ ಹಾಂಗ್ ಕಾಂಗ್ ವಿರುದ್ಧ ಸೋಲನ್ನು ಅನುಭವಿಸಿದರೆ ಹಾಂಗ್ ಕಾಂಗ್ ಟೀಮ್ ಇಂಡಿಯಾ ಜತೆ ಮುಂದಿನ ಸುತ್ತಿಗೆ ಪ್ರವೇಶಿಸಲಿದ್ದು ಪಾಕಿಸ್ತಾನ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.

ಫೈನಲ್ ಪಂದ್ಯದಲ್ಲಿಯೂ ಮುಖಾಮುಖಿಯಾಗುವ ಸಾಧ್ಯತೆ
ಇನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳು ಸೂಪರ್ 4 ಮಾತ್ರವಲ್ಲದೆ ಫೈನಲ್ ಪಂದ್ಯದಲ್ಲಿಯೂ ಕೂಡ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಸೂಪರ್ 4 ಸುತ್ತಿನಲ್ಲಿ ಸೆಣಸಾಡಲಿರುವ 4 ತಂಡಗಳ ಪೈಕಿ ಟಾಪ್ 2 ಸ್ಥಾನಗಳನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳು ಪಡೆದುಕೊಂಡರೆ ಫೈನಲ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದು ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಈ ರೀತಿ ನಡೆದರೆ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಟ್ಟು 3 ಬಾರಿ ಮುಖಾಮುಖಿಯಾದಂತಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications