Asia Cup 2022: ಈ ಬಾರಿ ಆಡಲಿರುವ 5 ತಂಡಗಳಲ್ಲಿ ಭಾರತಕ್ಕಿಂತ ಬಲಿಷ್ಠ ತಂಡ ಯಾವುದು?

ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಮೆಂಟ್ ನಾಳೆಯಿಂದ ( ಆಗಸ್ಟ್ 27 ) ಶುರುವಾಗುತ್ತಿದೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ಶ್ರೀಲಂಕಾ ಮತ್ತು ಅಫ್ಗಾನಿಸ್ತಾನ ತಂಡಗಳ ನಡುವೆ ಟೂರ್ನಿಯ ಉದ್ಘಾಟನಾ ಪಂದ್ಯ ನಡೆಯಲಿದೆ.
ಟೂರ್ನಿಯ ಎರಡನೇ ದಿನ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಾಡುವ ಮೂಲಕ ಟೀಮ್ ಇಂಡಿಯಾ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ತನ್ನ ಪಯಣವನ್ನು ಆರಂಭಿಸಲಿದೆ. ಟೀಮ್ ಇಂಡಿಯಾ ಇರುವ ಎ ಗುಂಪಿನಲ್ಲಿ ಪಾಕಿಸ್ತಾನದ ಜತೆ ಇತ್ತೀಚೆಗಷ್ಟೇ ಏಷ್ಯಾಕಪ್ ಅರ್ಹತೆ ಪಡೆದುಕೊಂಡ ಹಾಂಗ್‌ಕಾಂಗ್ ಈ 2 ತಂಡಗಳಿದ್ದು, ಭಾರತ ಆಗಸ್ಟ್ 31ರಂದು ಹಾಂಗ್ ಕಾಂಗ್ ವಿರುದ್ಧ ಸೆಣಸಾಟ ನಡೆಸಲಿದೆ.
ಗ್ರೂಪ್ ಹಂತದ ಪಂದ್ಯಗಳಲ್ಲಿ ಎರಡೂ ಗುಂಪಿನಲ್ಲಿ ಟಾಪ್ 2 ಸ್ಥಾನಗಳನ್ನು ಪಡೆದ ತಂಡಗಳು ಸೂಪರ್ 4 ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿವೆ. ಈ ಸುತ್ತಿನಲ್ಲಿ ಅತಿ ಹೆಚ್ಚು ಪಂದ್ಯ ಗೆಲ್ಲುವ 2 ತಂಡಗಳು ಫೈನಲ್ ಪಂದ್ಯಕ್ಕೆ ಲಗ್ಗೆ ಇಡಲಿವೆ. ಇನ್ನು ಗ್ರೂಪ್ ಹಂತದಲ್ಲಿ ಗುಂಪಿನಲ್ಲಿರುವ ತಂಡಗಳ ಜತೆ ಭಾರತ ಸೆಣಸಾಟ ನಡೆಸಿದರೆ ಸೂಪರ್ 4 ಹಂತದಲ್ಲಿ ಇತರೆ ತಂಡಗಳ ಜೊತೆಗೂ ಕೂಡ ಕಣಕ್ಕಿಳಿಯಲಿದೆ. ಹಾಗಿದ್ದರೆ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಉಳಿದ ತಂಡಗಳ ಜತೆ ಟೀಮ್ ಇಂಡಿಯಾ ಏಷ್ಯಾಕಪ್ ಟೂರ್ನಿಯಲ್ಲಿ ಎಷ್ಟು ಪಂದ್ಯಗಳನ್ನಾಡಿದೆ ಹಾಗೂ ಈ ಪೈಕಿ ಎಷ್ಟು ಪಂದ್ಯಗಳಲ್ಲಿ ಗೆದ್ದಿದೆ ಎಂಬುದರ ಕುರಿತಾದ ಮಾಹಿತಿ ಕೆಳಕಂಡಂತಿದೆ.

ಭಾರತ vs ಪಾಕಿಸ್ತಾನ
ಭಾರತ ಮತ್ತು ಪಾಕಿಸ್ತಾನ ತಂಡಗಳು ಇಲ್ಲಿಯವರೆಗೂ ಒಟ್ಟು 15 ಏಷ್ಯಾ ಕಪ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 8 ಪಂದ್ಯಗಳಲ್ಲಿ ಜಯ ಸಾಧಿಸಿದೆ ಹಾಗೂ ಪಾಕಿಸ್ತಾನ 5 ಪಂದ್ಯಗಳಲ್ಲಿ ಗೆದ್ದಿದೆ ಮತ್ತು ಉಳಿದೆರಡು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಈ ಮೂಲಕ ಉಭಯ ತಂಡಗಳ ನಡುವಿನ ಏಷ್ಯಾಕಪ್ ಮುಖಾಮುಖಿಯಲ್ಲಿ ಭಾರತ ಮೇಲುಗೈ ಸಾಧಿಸಿದೆ.

ಭಾರತ vs ಶ್ರೀಲಂಕಾ
ಭಾರತ ಮತ್ತು ಶ್ರೀಲಂಕಾ ತಂಡಗಳು ಏಷ್ಯಾ ಕಪ್ ಇತಿಹಾಸದಲ್ಲಿ ಒಟ್ಟು 20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಉಭಯ ತಂಡಗಳು ತಲಾ 10 ಪಂದ್ಯಗಳಲ್ಲಿ ಜಯ ಸಾಧಿಸಿವೆ. ಈ ಮೂಲಕ ಏಷ್ಯಾಕಪ್ ಮುಖಾಮುಖಿಯಲ್ಲಿ ಭಾರತ ಮತ್ತು ಶ್ರೀಲಂಕಾ ಎರಡೂ ತಂಡಗಳು ಸಮಬಲ ಸಾಧಿಸಿವೆ.

ಭಾರತ vs ಬಾಂಗ್ಲಾದೇಶ
ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಏಷ್ಯಾ ಕಪ್ ಇತಿಹಾಸದಲ್ಲಿ ಒಟ್ಟು 14 ಪಂದ್ಯಗಳು ಜರುಗಿದ್ದು, ಈ ಪೈಕಿ ಭಾರತ 13 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಉಳಿದೊಂದು ಪಂದ್ಯದಲ್ಲಿ ಬಾಂಗ್ಲಾದೇಶ ಜಯ ಸಾಧಿಸಿದೆ. ಈ ಮೂಲಕ ಉಭಯ ತಂಡಗಳ ನಡುವಿನ ಏಷ್ಯಾಕಪ್ ಮುಖಾಮುಖಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ಸ್ಪಷ್ಟ ಮೇಲುಗೈ ಸಾಧಿಸಿದೆ.

ಭಾರತ vs ಅಫ್ಘಾನಿಸ್ತಾನ
ಭಾರತ ಮತ್ತು ಆಫ್ಘಾನಿಸ್ತಾನ ತಂಡಗಳು ಏಷ್ಯಾ ಕಪ್ ಇತಿಹಾಸದಲ್ಲಿ ಒಟ್ಟು 2 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಈ ಪೈಕಿ ಟೀಮ್ ಇಂಡಿಯಾ 1 ಪಂದ್ಯದಲ್ಲಿ ಜಯಗಳಿಸಿದರೆ ಉಳಿದೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.

ಭಾರತ vs ಹಾಂಗ್‌ಕಾಂಗ್
ಭಾರತ ಮತ್ತು ಹಾಂಗ್‌ಕಾಂಗ್ ತಂಡಗಳು ಏಷ್ಯಾ ಕಪ್ ಇತಿಹಾಸದಲ್ಲಿ ಇಲ್ಲಿಯವರೆಗೂ ಒಟ್ಟು 2 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಹಾಗೂ ಈ ಎರಡೂ ಪಂದ್ಯಗಳಲ್ಲಿಯೂ ಸಹ ಭಾರತ ಹಾಂಗ್‌ಕಾಂಗ್ ವಿರುದ್ಧ ಭರ್ಜರಿ ಜಯ ಸಾಧಿಸಿ ಸ್ಪಷ್ಟ ಮೇಲುಗೈ ಸಾಧಿಸಿದೆ.
ಈ ಮೂಲಕ ಏಷ್ಯಾ ಕಪ್ ಇತಿಹಾಸದ ಮುಖಾಮುಖಿಯಲ್ಲಿ ಭಾರತದ ಮೇಲೆ ಹಿಡಿತ ಸಾಧಿಸಿರುವ ತಂಡ ಯಾವುದೂ ಕೂಡ ಇಲ್ಲ ಎಂಬುದು ಸ್ಪಷ್ಟವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications