ಕೆಲ ಪಾಠಗಳು ಅಗತ್ಯವಾಗಿತ್ತು: ಏಷ್ಯಾ ಕಪ್ ಸತತ ಸೋಲಿನ ಬಳಿಕ ರೋಹಿತ್ ಶರ್ಮಾ ಹೇಳಿಕೆ

ಏಷ್ಯಾ ಕಪ್‌ನ ಸೂಪರ್ 4 ಹಂತದಲ್ಲಿ ಭಾರತ ಸತತ ಎರಡನೇ ಸೋಲು ಅನುಭವಿಸಿದೆ. ಶ್ರೀಲಂಕಾ ವಿರುದ್ಧ ಗೆಲ್ಲಲೇಬೇಕಾಗಿದ್ದ ಪಂದ್ಯವನ್ನು ಭಾರತ ಕಳೆದುಕೊಂಡ ಬಳಿಕ ಫೈನಲ್‌ಗೇರುವ ಅವಕಾಶ ಕ್ಷೀಣಿಸಿದೆ. ಈ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ಏಷ್ಯಾಕಪ್‌ನಂತಾ ಟೂರ್ನಿಯಲ್ಲಿ ಭಾರತ ಒತ್ತಡದ ಸಂದರ್ಭವನ್ನು ಎದುರಿಸಲು ಬಯಸಿತ್ತು ಎಂದಿದ್ದಾರೆ.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಭಾರತ ಆರಂಭಿಕ ಎರಡು ವಿಕೆಟ್‌ಗಳನ್ನು ಶೀಘ್ರವಾಗಿ ಕಳೆದುಕೊಂಡ ಬಳಿಕ ಚೇತರಿಕೆ ಕಂಡು ಮೊದಲ ಹತ್ತು ಓವರ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿತು. ಆದರೆ ಭಾರತ ನಂತರ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿತ್ತು. ಹೀಗಾಗಿ ಅಂದುಕೊಂಡಿದ್ದ ಗುರಿಯನ್ನು ನಿಗದಿಪಡಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಬಳಿಕ ಬೌಲಿಂಗ್‌ನಲ್ಲಿಯೂ ಶ್ರೀಲಂಕಾ ಅದ್ಭುತ ಆರಂಭವನ್ನು ಪಡೆದ ಬಳಿಕ ಕಮ್‌ಬ್ಯಾಕ್ ಮಾಡಿದ ಭಾರತೀಯ ಬೌಲರ್‌ಗಳು ಅದನ್ನು ಕೊನೆಯವರೆಗೂ ಮುಂದುವರಿಸಿಕೊಂಡು ಹೋಗಲು ವಿಫಲವಾದರು. ಹೀಗಾಗಿ ಭಾರತ ಅಂತಿಮ ಓವರ್‌ನಲ್ಲಿ ಸೋಲು ಅನುಭವಿಸಿದೆ.

10-15 ರನ್ ಕಡಿಮೆಯಾಯಿತು
ಸೋಲಿನ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಕೆಲ ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. "ಮೊದಲಾರ್ಧದಲ್ಲಿ ಬ್ಯಾಟಿಂಗ್‌ನಲ್ಲಿ ಪಡೆದ ಮೇಲುಗೈಯನ್ನು ಮುನ್ನಡೆಸಿಕೊಂಡು ಹೋಗಲು ವಿಫಲವಾದೆವು. ಈ ಕಾರಣದಿಂದಾಗಿಯೇ 10-15 ರನ್‌ಗಳು ನಮಗೆ ಕೊರತೆಯಾದವು. ದ್ವಿತಿಯಾರ್ಧ ನಮ್ಮ ಪಾಲಿಗೆ ಉತ್ತಮವಾಗಿರಲಿಲ್ಲ. ವಿಕೆಟ್ ಕಳೆದುಕೊಂಡ ಆಟಗಾರರು ಯಾವ ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಅರ್ಥ ಮಾಡುಕೊಳ್ಳುತ್ತಾರೆ. ಸೋಲುಗಳು ತಂಡಕ್ಕೆ ಯಾವೆಲ್ಲಾ ನಿರ್ಧಾರಗಳು ಸಹಾಯವಾಗುತ್ತವೆ ಎಂಬುದನ್ನು ತಿಳಿಸುತ್ತದೆ" ಎಂದಿದ್ದಾರೆ ನಾಯಕ ರೋಹಿತ್ ಶರ್ಮಾ.
ನಿರ್ಣಾಯಕ ಪಂದ್ಯದಲ್ಲಿ ರವಿ ಬಿಷ್ಣೋಯ್‌ನನ್ನು ಕೈಬಿಟ್ಟ ಭಾರತ: ಭಾರೀ ಟೀಕೆಗೆ ಗುರಿ

ಬೌಲಿಂಗ್‌ನಲ್ಲಿ ಯೋಜನೆಗಳು ಫಲ ನೀಡಲಿಲ್ಲ
ಇನ್ನು ಬೌಲಿಂಗ್‌ನಲ್ಲಿ ಭಾರತ ತಂಡ ಎಡವಿದ್ದು ಎಲ್ಲಿ ಎಂಬುದನ್ನು ಕೂಡ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ. "ಅವರು ಪಡೆದ ಆರಂಭವನ್ನು ಪಡೆದ ನೋಡಿದರೆ ಈ ಪಂದ್ಯವನ್ನು ಅಂತಿಮ ಓವರ್‌ವರೆಗೆ ತೆಗೆದುಕೊಂಡು ಹೋಗಿದ್ದು ಉತ್ತಮವಾದ ಪ್ರಯತ್ನವಾಗಿದೆ. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಆಕ್ರಮಣಕಾರಿಯಾಗಿ ಆಡಿ ವಿಕೆಟ್‌ಗಳನ್ನು ಪಡೆದುಕೊಂಡರು. ಹಾಗಿದ್ದರೂ ಶ್ರೀಲಂಕಾ ಹಿಡಿತವನ್ನು ಸಡಿಲಿಸಲಿಲ್ಲ. ದೊಡ್ಡ ಬೌಂಡರಿಗಳು ಇದ್ದ ಕಾರಣ ಸ್ಪಿನ್ನರ್‌ಗಳನ್ನು ಉತ್ತಮವಾಗಿ ಬಳಸಿಕೊಳ್ಳಬಹುದು ಎನಿಸಿದ್ದೆವು. ಆದರೆ ಆ ಯೋಜನೆ ಫಲ ನೀಡಲಿಲ್ಲ. ದೊಡ್ಡ ಬೌಂಡರಿ ಇರುವ ಕಾರಣ ಹೂಡಾ ಅವರನ್ನು ಬಳಸಬಹುದು ಎಂದುಕೊಂಡಿದ್ದೆ. ಆದರೆ ಮೂವರು ವೇಗಿಗಳಿಗೆ ನಾನು ತೃಪ್ತನಾದೆ" ಎಂದಿದ್ದಾರೆ.

ಸೋಲು ಪಾಠಗಳನ್ನು ಹೇಳಿಕೊಡುತ್ತದೆ
ವಿಶ್ವಕಪ್‌ಗೆ ಮುನ್ನ ಮೂವರು ವೇಗಿಗಳೊಂದಿಗೆ ಪ್ರಯೋಗಗಳನ್ನು ಮಾಡಲು ಬಯಸಿದ್ದೆವು. ತಂಡವಾಗಿ ಕೆಲ ಉತ್ತರಗಳು ನಮಗೆ ಬೇಕಾಗಿತ್ತು. ಈ ಸಂಯೋಜನೆಯಲ್ಲಿ ನಾವು ಎಲ್ಲಿರುತ್ತೇವೆ ಎಂಬುದು ಈಗ ತಿಳಿದಿದೆ. ಸತತ ಎರಡು ಪಂದ್ಯಗಳನ್ನಷ್ಟೇ ಸೋತಿದ್ದೇವೆ. ಹಾಗಾಗಿ ಆತಂಕಪಡುವ ಅಗತ್ಯವೇನಿಲ್ಲ. ಕಳೆದ ವಿಶ್ವಕಪ್‌ನ ಬಳೀಕ ನಾವು ಹೆಚ್ಚಿನ ಪಂದ್ಯಗಳನ್ನು ಸೋತಿಲ್ಲ. ಈ ಪಂದ್ಯಗಳೂ ನಮಗೆ ಪಾಠಗಳನ್ನು ಹೇಳಿಕೊಡುತ್ತವೆ. ಏಷ್ಯಾ ಕಪ್‌ನಲ್ಲಿ ನಾವು ಒತ್ತಡದ ಸಂದರ್ಭಕ್ಕೆ ಒಳಗಾಗಲು ಬಯಸಿದ್ದೆವು. ನಾವಿನ್ನು ಕೂಡ ಕೆಲ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬೇಕಿದೆ. ಎರಡು ಕೂಡ ಬಹಳ ಪೈಪೋಟಿಯ ಪಂದ್ಯಗಳಾಗಿದ್ದವು. ಈ ಹಂತದಲ್ಲಿ ಅರ್ಶದೀಪ್ ಅವರಿಗೆ ಶ್ರೇಯಸ್ಸನ್ನು ನೀಡಲೇಬೇಕಿದೆ. ಚಾಹಲ್ ಹಾಗೂ ಭುವನೇಶ್ವರ್ ಕುಮಾರ್ ಅನುಭವಿಗಳಾಗಿದ್ದು ಈ ಹಿಂದೆ ಇಂಥಾ ಸಂದರ್ಭವನ್ನು ಎದುರಿಸಿದ್ದಾರೆ. ಆದರೆ ಯುವ ಆಟಗಾರನಿಂದ ನಾನು ಇಂಥಾ ಪ್ರದರ್ಶನವನ್ನು ಬಯಸಿದ್ದೆ" ಎಂದಿದ್ದಾರೆ ರೋಹಿತ್ ಶರ್ಮಾ.

ರೋಹಿತ್ ನಾಯಕತ್ವದಲ್ಲಿ ಮೊದಲ ಸತತ ಸೋಲು
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಅದ್ಭುತ ಪ್ರದರ್ಶನವನ್ನು ನೀಡಿಕೊಂಡು ಬಂದಿದೆ. ಆದರೆ ಏಷ್ಯಾ ಕಪ್‌ನಲ್ಲಿ ನೀಡಿರುವ ಪ್ರದರ್ಶನ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಪಂದ್ಯದಲ್ಲಿ ಭಾರತ ಸೋಲು ಅನುಭವಿಸುವ ಮೂಲಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮೊದಲ ಬಾರಿಗೆ ಸತತ ಎರಡು ಪಂದ್ಯಗಳಲ್ಲಿ ಭಾರತ ಟಿ20 ಪಂದ್ಯದಲ್ಲಿ ಸೋಲು ಅನುಭವಿಸಿದಂತಾಗಿದೆ.
ಟೀಮ್ ಇಂಡಿಯಾ ಪ್ಲೇಯಿಂಗ್ XI: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್
ಬೆಂಚ್: ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಅವೇಶ್ ಖಾನ್, ರವಿ ಬಿಷ್ಣೋಯ್
ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ
ಬೆಂಚ್: ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ಜೆಫ್ರಿ ವಾಂಡರ್ಸೆ, ಅಶೆನ್ ಬಂಡಾರ, ಪ್ರವೀಣ್ ಜಯವಿಕ್ರಮ, ನುವಾನಿಡು ಫೆರ್ನಾಂಡೋ, ಪ್ರಮೋದ್ ಮದುಶನ್, ನುವಾನ್ ತುಷಾರ, ಮತೀಶ ಪತಿರಾನ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications