
ಭಾರತದ ದಿಗ್ಗಜ ಆಟಗಾರ ಮದನ್ ಲಾಲ್ ಆಯ್ಕೆಗಾರರ ಒಂದು ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ. ಏಷ್ಯಾ ಕಪ್‌ಗೆ ಆಯ್ಕೆ ಮಾಡಿರುವ ತಂಡದಲ್ಲಿ ಅನುಭವಿ ಆಟಗಾರ ಮೊಹಮ್ಮದ್ ಶಮಿಯನ್ನು ಯಾವ ಕಾರಣಕ್ಕಾಗಿ ಆಯ್ಕೆ ಮಾಡಿಲ್ಲ ಎಂದು ಮದನ್ ಲಾಲ್ ಕಿಡಿ ಕಾರಿದ್ದಾರೆ.
ಕಳೆದ ವರ್ಷ ಟಿ20 ವಿಶ್ವಕಪ್‌ನ ಭಾಗವಾಗಿದ್ದರು ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ. ಆದರೆ ಅದಾದ ಬಳಿಕ ಚುಟುಕು ಮಾದರಿಯಲ್ಲಿ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಐಪಿಎಲ್‌ನಲ್ಲಿ ಈ ಬಾರಿ ಹೊಸದಾಗಿ ಸೇರ್ಪಡೆಯಾಗಿರುವ ಗುಜರಾತ್ ಟೈಟನ್ಸ್ ತಂಡದ ಭಾಗವಾಗಿದ್ದ ಶಮಿ ಉತ್ತಮ ಪ್ರದರ್ಶನ ನೀಡಿದ್ದರು. ಚೊಚ್ಚಲ ಆವೃತ್ತಿಯಲ್ಲಿಯೇ ಗುಜರಾತ್ ಟೈಟನ್ಸ್ ತಂಡ ಚಾಂಪಿಯನ್ ಆಗಲು ಮಿಒಹಮ್ಮದ್ ಶಮಿ ಕೂಡ ಬೌಲಿಂಗ್‌ನಲ್ಲಿ ಕಾರಣವಾಗಿದ್ದರು.
ಹಾಗಿದ್ದರು ಕೂಡ ಮೊಹಮ್ಮದ್ ಶಮಿಗೆ ಈ ಬಾರಿಯ ಏಷ್ಯಾ ಕಪ್‌ನ ತಂಡದಲ್ಲಿ ಸ್ಥಾನವನ್ನು ನೀಡಲು ಈ ಪ್ರದರ್ಶನ ಸಾಕಾಗಲಿಲ್ಲ. ಆವೇಶ್ ಖಾನ್, ಅರ್ಶದೀಪ್ ಸಿಂಗ್ ಹಾಗೂ ಭುವನೇಶ್ವರ್ ಕುಮಾರ್ ಅವರಿಗೆ ಏಷ್ಯಾ ಕಪ್‌ಗೆ ಆಡುವ ಬಳಗದಲ್ಲಿ ಅವಕಾಶ ದೊರೆತಿದ್ದು ಮೊಹಮ್ಮದ್ ಶಮಿ ಈ ಅವಕಾಶದಿಮದ ವಂಚಿತವಾಗಿದ್ದಾರೆ. ಆಯ್ಕೆ ಸಮಿತಿಯ ಈ ನಿರ್ಧಾರದ ಬಗ್ಗೆ ಸಾಕಷ್ಟು ಟೀಕೆಗಳು ಕೇಲಿ ಬಂದಿದ್ದು ಅನೇಕ ಮಾಜಿ ಕ್ರಿಕೆಟಿಗರು ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಜಸ್ಪ್ರಿತ್ ಬೂಮ್ರಾ ಅವರಂತಾ ಅನುಭವಿ ಆಟಗಾರರ ಅಲಭ್ಯತೆಯಲ್ಲಿ ಮೊಹಮ್ಮದ್ ಶಮಿ ತಂಡಕ್ಕೆ ಅಗತ್ಯವಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಸ್ಪೋರ್ಟ್ಸ್ ಕೀಡಾ ಜೊತೆಗೆ ಮಾತನಾಡಿರುವ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಮದನ್ ಲಾಲ್ ಈ ಬಾರಿಯ ವಿಶ್ವಕಪ್ ತಂಡದಲ್ಲಿ ಶಮಿಗೆ ಅವಕಾಶ ನೀಡಲೇಬೇಕು ಎಂದಿದ್ದಾರೆ. ಬೂಮ್ರಾ ಬಳಿಕ ಭಾರತದ ಅತ್ಯುತ್ತಮ ಬೌಲರ್ ಮೊಹಮ್ಮದ್ ಶಮಿ ಎಂದಿದ್ದಾರೆ ಮದನ್ ಲಾಲ್.
"ಟಿ20 ವಿಶ್ವಕಪ್‌ಗೆ ಶಮಿ ಖಂಡಿತಾ ತಂಡದಲ್ಲಿರಬೇಕು. ಬುಮ್ರಾ ನಂತರ ಅವರು ಭಾರತದ ಅತ್ಯುತ್ತಮ ಬೌಲರ್ ಆಗಿದ್ದಾರೆ. ನಾನು ವಿಕೆಟ್ ಪಡೆಯುವ ಬೌಲರ್‌ನನ್ನು ನೋಡುತ್ತಿದ್ದೇನೆ. ಕೇವಲ ರನ್‌ಗಳನ್ನು ನಿಯಂತ್ರಿಸಬಲ್ಲ ಬೌಲರ್ ನನಗೆ ಬೇಕಾಗಿಲ್ಲ. ಬ್ಯಾಟರ್‌ಗಳು ಈ ಮಾದರಿಯಲ್ಲಿ ರನ್‌ಗಳನ್ನು ಗಳಿಸುತ್ತಲೇ ಇರುತ್ತದೆ. ರನ್‌ಗಳ ಹರಿವನ್ನು ತಡೆಯುವ ಏಕೈಕ ಮಾರ್ಗವೆಂದರೆ ವಿಕೆಟ್‌ಗಳನ್ನು ಪಡೆಯುವುದು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಮದನ್ ಲಾಲ್.
ಅದು ದೊಡ್ಡ ತಪ್ಪಾಗುತ್ತದೆ: ಮುಮದುವರಿದು ಮಾತನಾಡಿದ ಮದನ್ ಲಾಲ್ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡದಿದ್ದರೆ ಆಯ್ಕೆಗಾರರು ದೊಡ್ಡ ತಪ್ಪೆಸಗಿದಂತಾಗುತ್ತದೆ. ಅಲ್ಲದೆ ಚುಟುಕು ಮಾದರಿಗೆ ಮೊಹಮ್ಮದ್ ಶಮಿ ಅವರನ್ನು ಯಾವ ಕಾರಣಕ್ಕಾಗಿ ಆಯ್ಕೆ ಮಾಡುತ್ತಿಲ್ಲ ಎಂಬುದು ನನಗೆ ಅರ್ಥವೇ ಆಗುತ್ತಿಲ್ಲ. ಈ ಶ್ರೇಷ್ಠ ಬೌಲರ್ ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿರುವ ಹಿನ್ನೆಲೆಯಿದೆ. ಈಗ ಆಡುತ್ತಿರುವ ಬೌಲರ್‌ಗಳ ಪೈಕಿ ಮೊಹಮ್ಮದ್ ಶಮಿ ಅತ್ಯುತ್ತಮ ಬೌಲರ್ ಆಗಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲರ್‌ಗಳ ಪೈಕಿ ಅವರು ಕುಡ ಒಬ್ಬರು" ಎಂದಿದ್ದಾರೆ ಮದನ್ ಲಾಲ್.