
ಐವರು ವೇಗಿಗಳನ್ನು ಆಯ್ಕೆ ಮಾಡದಿರುವುದೇ ಹಿನ್ನಡೆ
ಭಾರತ ತಂಡ ಏಷ್ಯಾ ಕಪ್ ಟೂರ್ನಿಯಲ್ಲಿ ಹಿನ್ನಡೆಯನ್ನು ಅನುಭವಿಸಲು ಪ್ರಮುಖ ಕಾರಣ ಟೂರ್ನಿಯಲ್ಲಿ ಭಾರತ ಐವರಯು ವೇಗದ ಬೌಲರ್‌ಗಳನ್ನು ಹೊಂದುವ ಬದಲಾಗಿ ಕೇವಲ ನಾಲ್ವರು ವೇಗಿಗಳನ್ನು ಹೊಂದಿತ್ತು. ಈ ಕಾರಣದಿಂದಾಗಿಯೇ ಭಾರತಕ್ಕೆ ಗೆಲುವು ಸಾಧ್ಯವಾಗಲಿಲ್ಲ ಎಂದು ರವಿ ಶಾಸ್ತ್ರಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಏಷ್ಯಾ ಕಪ್‌ನ ಭಾರತ ತಂಡದಲ್ಲಿ ಭುವನೇಶ್ವರ್ ಕುಮಾರ್, ಅರ್ಶದೀಪ್ ಸಿಂಗ್, ಆವೇಶ್ ಖಾನ್ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವೇಗಿಗಳಾಗಿ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದರು. ಅದರಲ್ಲೂ ಆವೇಶ್ ಖಾನ್ ಅನಾರೋಗ್ಯದ ಕಾರಣದಿಂದಾಗಿ ಕಳೆದ ಎರಡು ಪಂದ್ಯಗಳಿಂದಲೂ ಹೊರಗುಳಿದಿದ್ದರು. ಈಗ ಅವರ ಬದಲಿಗೆ ದೀಪಕ್ ಚಾಹರ್‌ಗೆ ಸ್ಕ್ವಾಡ್‌ನಲ್ಲಿ ಅವಕಾಶ ನೀಡಲಾಗಿದೆ.

ಶಮಿಯನ್ನು ಆಯ್ಕೆ ಮಾಡದಿರುವುದಕ್ಕೆ ಭಾರತ ಬೆಲೆ ತೆತ್ತಿತು
ಪಂದ್ಯ ಮುಕ್ತಾಯದ ಬಳಿಕ ಸ್ಟಾರ್ ಸ್ಪೋರ್ಟ್ಸ್ ಜೊತೆಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ರವಿ ಶಾಸ್ತ್ರಿ ಭಾರತ ತಂಡದ ಆಯ್ಕೆಯ ವಿಚಾರವಾಗಿ ಮಹತ್ವದ ಹೇಳಿಕೆ ನೀಡಿದ್ದಾರೆ. ಬಿಸಿಸಿಐ ಏಷ್ಯಾ ಕಪ್ ಟೂರ್ನಿಗೆ ತನ್ನ ಆಯ್ಕೆಯನ್ನು ಉತ್ತಮವಾಗಿ ಮಾಡಬಹುದಾಗಿತ್ತು ಎಂದಿದ್ದು ಓರ್ವ ಆಟಗಾರನ ಕೊರತೆ ತಂಡಕ್ಕೆ ಬಹುವಾಗಿ ಕಾಡುತ್ತಿದೆ ಎಂದಿದ್ದಾರೆ. ಭಾರತ ಹೆಚ್ಚುವರ ವೇಗಿಯನ್ನು ಹೊಂದುವುದು ಅಗತ್ಯವಾಗಿತ್ತು ಎಂದ ರವಿ ಶಾಸ್ತ್ರಿ ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ತಂಡದಲ್ಲಿ ಸೇರ್ಪಡೆ ಮಾಡದಿರುವುದಕ್ಕೆ ಭಾರತ ದೊಡ್ಡ ಬೆಲೆಯನ್ನೇ ತೆರಬೇಕಾಯಿತು ಎಂದಿದ್ದಾರೆ.

ಚಾಟಿ ಬೀಸಿದ ರವಿ ಶಾಸ್ತ್ರಿ
"ಗೆಲ್ಲಲೇ ಬೇಕಾಗಿರುವಂತಾ ಪರಿಸ್ಥಿತಿಗಳಲ್ಲಿ ನೀವು ಸಿದ್ಧತೆಗಳನ್ನು ಚೆನ್ನಾಗಿ ಮಾಡಿಕೊಳ್ಳಬೇಕಾಗಿತ್ತು. ಆಯ್ಕೆಯಲ್ಲಿ ಇನ್ನೂ ಉತ್ತಮವಾಗಿ ಮಾಡಬಹುದಾಗಿತ್ತು. ಇಲ್ಲಿನ ಪರಿಸ್ಥಿತಿ ಗೊತ್ತಿರುವ ಕಾರಣ ವೇಗದ ಬೌಲಿಂಗ್ ವಿಭಾಗದ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗಿತ್ತು. ಇಲ್ಲಿ ಸ್ಪಿನ್ನರ್‌ಗಳು ಹೆಚ್ಚು ನೆರವಾಗುವುದಿಲ್ಲ. ಇಂಥಾ ಪರಿಸ್ಥಿತಿಯಲ್ಲಿ ಕೇವಲ ನಾಲ್ವರು ವೇಗಿಗಳನ್ನು ಹೊಂದಿರುವುದು ನನಗೆ ಆಶ್ಚರ್ಯ ಮೂಡಿಸಿತ್ತು. ಓರ್ವ ಹೆಚ್ಚುವರಿ ವೇಗಿಯ ಅಗತ್ಯವಿತ್ತು. ಮೊಹಮ್ಮದ್ ಶಮಿಯಂತಾ ಆಟಗಾರ ಮನೆಯಲ್ಲಿ ಕುತಿರುವುದು ನೋಡಲು ಸಾಧ್ಯವಾಗುತ್ತಿಲ್ಲ" ಎಂದಿದ್ದಾರೆ ರವಿ ಶಾಸ್ತ್ರಿ.

ಆಡುವ ಬಳಗ ಹೀಗಿದೆ
ಟೀಮ್ ಇಂಡಿಯಾ ಪ್ಲೇಯಿಂಗ್ XI: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್
ಬೆಂಚ್: ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ಅವೇಶ್ ಖಾನ್, ರವಿ ಬಿಷ್ಣೋಯ್
ಶ್ರೀಲಂಕಾ ತಂಡ: ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ, ದನುಷ್ಕ ಗುಣತಿಲಕ, ಭಾನುಕ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ
ಬೆಂಚ್: ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ಜೆಫ್ರಿ ವಾಂಡರ್ಸೆ, ಅಶೆನ್ ಬಂಡಾರ, ಪ್ರವೀಣ್ ಜಯವಿಕ್ರಮ, ನುವಾನಿಡು ಫೆರ್ನಾಂಡೋ, ಪ್ರಮೋದ್ ಮದುಶನ್, ನುವಾನ್ ತುಷಾರ, ಮತೀಶ ಪತಿರಾನ


Click it and Unblock the Notifications












