
ನಾಲ್ಕು ವರ್ಷಗಳಿಂದ ಕಾಯುತ್ತಿದ್ದ ಏಷ್ಯಾ ಕಪ್ 2022 ಟೂರ್ನಿ ಬಹುತೇಕ ಸನಿಹಗೊಂಡಿದೆ. ಈ ಮೆಗಾ ಟೂರ್ನಮೆಂಟ್ ಆಗಸ್ಟ್ 27 ರಿಂದ ಯುಎಇನಲ್ಲಿ ಆರಂಭವಾಗಲಿದೆ. ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಟೂರ್ನಿಯನ್ನು ಲಂಕಾ ಆಯೋಜಿಸಲು ವಿಫಲಗೊಂಡ ಕಾರಣ ಮೆಗಾ ಟೂರ್ನಿಗೆ ಯುಎಇಗೆ ಶಿಫ್ಟ್ ಆಗಿದೆ. ಶ್ರೀಲಂಕಾದಲ್ಲಿ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಚಿಂತಾಜನಕ ಪರಿಸ್ಥಿತಿಯಲ್ಲಿದ್ದು, ಈ ಕಾರಣದಿಂದ ಟೂರ್ನಿ ನಡೆಯಲು ಹಿಂದೆ ಸರಿದಿದೆ.
ಒಟ್ಟು 6 ತಂಡಗಳು ಭಾಗವಹಿಸಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಈಗಾಗಲೇ ಅರ್ಹತೆ ಪಡೆದಿದ್ದು, ಆರನೇ ಸ್ಥಾನಕ್ಕಾಗಿ ಅರ್ಹತಾ ಸುತ್ತಿನಲ್ಲಿ ಹಾಂಕಾಂಗ್, ಸಿಂಗಾಪುರ, ಕುವೈತ್ ಮತ್ತು ಯುಎಇ ತಂಡಗಳು ಪೈಪೋಟಿ ನಡೆಸಲಿವೆ. ಪೂರ್ವ ನಿಗದಿತ ವೇಳಾಪಟ್ಟಿಯಂತೆ, ಈ ಪಂದ್ಯಾವಳಿಯನ್ನು ಶ್ರೀಲಂಕಾದಲ್ಲಿ ನಡೆಸಬೇಕಾಗಿತ್ತು ಆದರೆ ಅಲ್ಲಿನ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯಿಂದಾಗಿ, ಅದನ್ನು ಮರುಭೂಮಿ ದೇಶವಾದ ಯುಎಇಗೆ ಸ್ಥಳಾಂತರಿಸಲಾಯಿತು.
ಟಿ20 ವಿಶ್ವಕಪ್‌ಗೂ ಮುನ್ನ ಮಿನಿ ವಿಶ್ವಕಪ್‌ನಂತೆ ನಡೆಯಲಿರುವ ಈ ಟೂರ್ನಿಯ ಮೇಲೆ ಭಾರಿ ನಿರೀಕ್ಷೆಗಳಿವೆ. ಈ ನಿರೀಕ್ಷೆಗಳನ್ನು ದ್ವಿಗುಣಗೊಳಿಸಿ, ಅಧಿಕೃತ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಇತ್ತೀಚೆಗೆ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಸ್ಟಾರ್ ಸ್ಪೋರ್ಟ್ಸ್ ಈ ವೀಡಿಯೊವನ್ನು ಟ್ವಿಟರ್‌ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ ಮತ್ತು "ಏಷ್ಯಾದಲ್ಲಿ ಪ್ರಾಬಲ್ಯಕ್ಕಾಗಿ ಯುದ್ಧ" ಎಂಬ ಶೀರ್ಷಿಕೆಯನ್ನು ಸೇರಿಸಿದೆ. ಈ ವೀಡಿಯೋ ನೆಟಿಜನ್‌ಗಳ ಮನಗೆದ್ದಿದೆ. ಈ ಪ್ರೋಮೋ 45 ಸೆಕೆಂಡುಗಳ ಕಾಲ ಇದ್ದು, ಭಾರತದ ಯಶಸ್ಸಿಗೆ ಹಾರೈಸುವ ಹಾಡಿನೊಂದಿಗೆ ಮಾಡಲಾಗಿದೆ.
ಇದರಲ್ಲಿ 'ಮಾ ಭಾರತ್ ನಂಬರ್ ಒನ್. ಈಗ ನಾವು ಏಷ್ಯಾ (ಏಷ್ಯಾ ಕಪ್) ಗೆಲ್ಲುತ್ತೇವೆ. ನಮ್ಮ ನೆರೆಹೊರೆಯವರು ಕೂಡ ಈ ಪಂದ್ಯಾವಳಿಯನ್ನು ಗೆಲ್ಲಲು ಉತ್ಸುಕರಾಗಿದ್ದಾರೆ. ಆದರೆ ಹೆಮ್ಮೆಯಿಂದ ಹಾರಾಡುತ್ತಿರುವ ತ್ರಿಕೋನ ಬಾವುಟದ ಸಾಕ್ಷಿಯಾಗಿ ನಾವು ಗೆಲ್ಲಲು ಇಲ್ಲಿಗೆ ಬಂದಿದ್ದೇವೆ ಎಂದು ಎದುರಾಳಿಗಳಿಗೆ ಹೇಳುತ್ತಿದ್ದೇವೆ' ಎಂಬುದು ವೀಡೀಯೋ ಸಾರಾಂಶವಾಗಿದೆ. ಈ ವಿಡಿಯೋದಲ್ಲಿ ಭಾರತದ ಬಹುತೇಕ ಆಟಗಾರರು ಕಾಣಿಸಿಕೊಂಡಿದ್ದಾರೆ.
ಭಾರತದ ಆಟಗಾರರು ಅಷ್ಟೇ ಅಲ್ಲದೆ ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಶಾಹೀನ್ ಅಫ್ರಿದಿ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮತ್ತು ಅಫ್ಘಾನಿಸ್ತಾನದ ರಶೀದ್ ಖಾನ್‌ರನ್ನ ಕಾಣಬಹುದು.
ಈ ಟೂರ್ನಿಯ ಗ್ರೂಪ್ ಹಂತದಲ್ಲಿ ಆಗಸ್ಟ್ 28ರಂದು ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಹಿಂದಿನ ಎರಡು ಟೂರ್ನಮೆಂಟ್ 2016ರಲ್ಲಿ ಟಿ20 ಫಾರ್ಮೆಟ್ ಹಾಗೂ 2018ರಲ್ಲಿ ಏಕದಿನ ಫಾರ್ಮೆಟ್‌ನಲ್ಲಿ ನಡೆದ ಏಷ್ಯಾಕಪ್ ಅನ್ನು ಭಾರತ ತಂಡ ಗೆದ್ದಿತ್ತು. ಈ ಟೂರ್ನಿಯಲ್ಲಿ ಯಶಸ್ವಿ ತಂಡವೂ ಟೀಂ ಇಂಡಿಯಾವೇ ಎಂಬುದು ಗಮನಾರ್ಹ.
1984 ರಿಂದ ಈ ಪಂದ್ಯಾವಳಿಯನ್ನು ಆಯೋಜಿಸುತ್ತಿರುವಾಗ, ಇದುವರೆಗೆ ಭಾರತ ತಂಡ ಏಳು ಬಾರಿ ಟ್ರೋಫಿ ಗೆದ್ದಿದೆ. ಶ್ರೀಲಂಕಾ ಐದು ಬಾರಿ ಗೆದ್ದರೆ, ಪಾಕಿಸ್ತಾನ ಎರಡು ಬಾರಿ ಮಾತ್ರ ಗೆದ್ದಿದೆ. ಈ ಬಾರಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.