Ind vs Pak: ಪಂದ್ಯದ ಆರಂಭಕ್ಕೂ ಮುನ್ನ ತೆಗೆದುಕೊಂಡ ಆ ನಿರ್ಧಾರವೇ ಸೋಲಿಗೆ ಕಾರಣ ಎಂದ ಗವಾಸ್ಕರ್!

ಏಷ್ಯಾಕಪ್ 2022 ಟೂರ್ನಿ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಸೂಪರ್ 4 ಹಂತದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸುವ ಮೂಲಕ ಟೂರ್ನಿಯಲ್ಲಿ ಹಿನ್ನಡೆ ಅನುಭವಿಸಿದ್ದು ಮುಂದಿನ ಪಂದ್ಯಗಳು ಕುತೂಹಲ ಮೂಡಿಸಿದೆ. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಕಾರಣ ಭಾರತ ತಂಡ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಾದ ಒತ್ತಡದಲ್ಲಿದೆ. ಹಾಗಿದ್ದರೆ ಮಾತ್ರವೇ ಫೈನಲ್ ಹಾದಿ ಸಾಧ್ಯ.
ಈ ಮಧ್ಯೆ ಪಾಕಿಸ್ತಾನದ ವಿರುದ್ಧದ ಭಾರತದ ಸೋಲಿನ ಕುರಿತಾಗಿ ಸಾಕಷ್ಟು ವಿಶ್ಲೇಷಣೆಗಳು ನಡೆಯುತ್ತಿದೆ. ಭಾರತ ತಂಡ ಈ ನಿರ್ಣಾಯಕ ಪಂದ್ಯದಲ್ಲಿ ಸೋಲು ಅನುಭವಿಸಲು ಕಾರಣವಾದ ಅಂಶಗಳೇನು ಎಂಬುದರ ಕುರಿತಾಗಿಯಾಗಿ ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲಲು ಕಾರಣವಾದ ಪ್ರಮುಖ ಅಂಶವನ್ನು ಸುನಿಲ್ ಗವಾಸ್ಕರ್ ಉಲ್ಲೇಖಿಸಿದ್ದು ಆ ನಿರ್ಧಾರ ಯಾಕೆ ಎಂಬುದೇ ಅರ್ಥವಾಗಿಲ್ಲ ಎಂದಿದ್ದಾರೆ.

DKಯನ್ನು ಹೊರಗಿಟ್ಟ ಕಾರಣವೇ ಅರ್ಥವಾಗುತ್ತಿಲ್ಲ
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದ ಬಳಿಕ ಮಾತನಾಡಿದ ಸುನಿಲ್ ಗವಾಸ್ಕರ್ ಪಾಕ್ ವಿರುದ್ಧದ ಈ ಮಹತ್ವದ ಪಂದ್ಯದಲ್ಲಿ ಭಾರತದ ಆಡುವ ಬಳಗದಲ್ಲಿ ಮಾಡಿದ ಎಡವಟ್ಟೊಂದನ್ನು ಬೊಟ್ಟು ಮಾಡಿದ್ದಾರೆ. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಆಡುವ ಬಳಗದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಹೊರಗಿಟ್ಟು ರಿಷಭ್ ಪಂತ್‌ಗೆ ಅವಕಾಶವನ್ನು ನೀಡಿತ್ತು. ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಈ ನಿರ್ಧಾರವನ್ನು ಯಾವ ಕಾರಣಕ್ಕಾಗಿ ತೆಗೆದುಕೊಂಡಿತು ಎಂಬುದು ಅರ್ಥವೇ ಆಗುತ್ತಿಲ್ಲ ಎಂದಿದ್ದಾರೆ.

ತಂಡದ ಸಂಯೋಜನೆಗೆ ಹೊಡೆತಬಿದ್ದ ಜಡ್ಡು ಅಲಭ್ಯತೆ
ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡದ ಪ್ರಮುಖ ಆಲ್‌ರೌಂಡರ್ ರವೀಂದ್ರ ಜಡೇಜಾ ಗಾಯದ ಕಾರಣದಿಂದಾಗಿ ಟೂರ್ನಿಯಿಂದಲೇ ಹೊರಬಿದ್ದರು. ಹೀಗಾಗಿ ಭಾರತದ ಆಡುವ ಬಳಗದ ಸಂಯೋಜನೆ ಮೇಲೆ ಹೊಡೆತಬಿತ್ತು. ಈ ಕಾರಣದಿಂದಾಗಿ ದಿನೇಶ್ ಕಾರ್ತಿಕ್ ಬದಲಿಗೆ ರಿಷಭ್ ಪಂತ್‌ಗೆ ಅವಕಾಶ ನೀಡಲಾಗಿತ್ತು. ಭಾರತದ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ರವೀಂದ್ರ ಜಡೇಜಾ ಒಬ್ಬರೇ ಎಡಗೈ ಆಟಗಾರನಾಗಿದ್ದ ಕಾರಣ ಎಡಗೈ ಬ್ಯಾಟರ್‌ನ ಅನಿವಾರ್ಯತೆಯಿತ್ತು. ಹೀಗಾಗಿ ಪಂತ್‌ಗೆ ಅವಕಾಶವನ್ನು ನೀಡಲಾಗಿತ್ತು.

ಡಿಕೆಯನ್ನು ಸೇರಿಸಿಕೊಂಡಿರುವುದೇ ಫಿನಿಷರ್ ಆಗಿ
ಈ ಬಗ್ಗೆ ಮಾತನಾಡಿರುವ ಸುನಿಲ್ ಗವಾಸ್ಕರ್, "ದಿನೇಶ್ ಕಾರ್ತಿಕ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ಅರ್ಥವೇ ಆಗುತ್ತಿಲ್ಲ. ಫಿನಿಷರ್ ಎಂಬ ಕಾರಣಕ್ಕಾಗಿ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದ್ದೀರಿ. ಆದರೆ ಇಂಥಾ ದೊಡ್ಡ ಪಂದ್ಯದಲ್ಲಿಯೇ ಅವರನ್ನು ತಂಡದಿಂದ ಹೊರಗಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದುವೇ ನನಗೆ ಹೆಚ್ಚು ಆಶ್ಚರ್ಯ ಮೂಡಿಸಿದೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್.

ಮತ್ತೆ ವೈಫಲ್ಯ ಅನುಭವಿಸಿದ ಪಂತ್
ಈ ಮಧ್ಯೆ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದ ರಿಷಭ್ ಪಂತ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ್ದಾರೆ. ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಲು ವಿಫಲವಾದ ಪಂತ್ 12 ಎಸೆತಗಳಲ್ಲಿ 14 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾದರು. ಶದಬ್ ಖಾನ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಬಾರಿಸಲು ಮುಂದಾದ ಪಂತ್ ವಿಕೆಟ್ ಕಳೆದುಕೊಂಡರು. ಈ ಮೂಲಕ ಮತ್ತೊಮ್ಮೆ ಚುಟುಕು ಮಾದರಿಯಲ್ಲಿ ಪಂತ್ ಪರಿಣಾಮಕಾರಿ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications