Asia Cup 2022 Super 4: ರೋಚಕವಾಗಿ ಗೆದ್ದು ಬೀಗಿದ ಶ್ರೀಲಂಕಾ; ಭಾರತದ ಫೈನಲ್ ಹಾದಿ ಬಹುತೇಕ ಅಂತ್ಯ

ಇಂದು (ಸೆಪ್ಟೆಂಬರ್ 6) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವಿನ ಸೂಪರ್ 4 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಶ್ರೀಲಂಕಾ 6 ವಿಕೆಟ್‌ಗಳ ರೋಚಕ ಗೆಲುವನ್ನು ಸಾಧಿಸಿದೆ. ಇದರಿಂದಾಗಿ ಭಾರತದ ಫೈನಲ್ ಹಾದಿ ಬಹುತೇಕ ಅಂತ್ಯವಾದಂತಿದ್ದು, ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಶ್ರೀಲಂಕಾ ತಂಡದ ಫೈನಲ್ ಹಾದಿ ಸುಗಮವಾಗಿದೆ.
ಪಂದ್ಯದಲ್ಲಿ ಟಾಸ್ ಸೋತು ಫೀಲ್ಡಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ, ಟೀಮ್ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 174 ರನ್‌ಗಳ ಗುರಿಯನ್ನು ನೀಡಿತ್ತು.

ಪಾತುಮ್ ನಿಸ್ಸಾಂಕ ಮತ್ತು ಕುಸಲ್ ಮೆಂಡಿಸ್ ಜೊತೆಯಾಟ
ಸವಾಲಿನ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ ಪಾತುಮ್ ನಿಸ್ಸಾಂಕ ಮತ್ತು ಕುಸಲ್ ಮೆಂಡಿಸ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 19.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿದ್ದು, 6 ವಿಕೆಟ್‌ಗಳ ರೋಚಕ ಗೆಲುವನ್ನು ಕಂಡಿತು.
ಟೀಮ್ ಇಂಡಿಯಾ ನೀಡಿದ ಸವಾಲಿನ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಪಾತುಮ್ ನಿಸ್ಸಾಂಕ (52) ಮತ್ತು ಕುಸಲ್ ಮೆಂಡಿಸ್ (57) ಜೋಡಿ 11.1 ಓವರ್‌ಗಳಲ್ಲಿ 97 ರನ್ ಕಲೆಹಾಕಿ ತಂಡದ ಪರ ಜವಾಬ್ದಾರಿಯುತ ಆಟವಾಡಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಗೆಲುವಿನ ಗಡಿ ದಾಟಿಸಿದ ಭಾನುಕ ರಾಜಪಕ್ಸ, ದಸುನ್ ಶನಕ
ಕೊನೆಯಲ್ಲಿ ಭಾನುಕ ರಾಜಪಕ್ಸ (25) ಮತ್ತು ನಾಯಕ ದಸುನ್ ಶನಕ (33) ಶ್ರೀಲಂಕಾವನ್ನು ಗೆಲುವಿನ ಗಡಿ ದಾಟಿಸಿದರು. ಅಂತಿಮ ಓವರ್‌ನಲ್ಲಿ 7 ರನ್‌ಗಳು ಬೇಕಿದ್ದಾಗ ರೋಚಕವಾಗಿ ಜಯ ಸಾಧಿಸಿತು.
ಟೀಮ್ ಇಂಡಿಯಾದ ಬ್ಯಾಟಿಂಗ್ ವೇಳೆ ಏಕಾಂಗಿ ಹೋರಾಟ ನಡೆಸಿದ ನಾಯಕ ರೋಹಿತ್ ಶರ್ಮಾ ರೋಹಿತ್ ಶರ್ಮಾ 41 ಎಸೆತಗಳಲ್ಲಿ 70 ರನ್ ಬಾರಿಸಿ ಆಪದ್ಬಾಂಧವನಾದರು. ಆದರೂ ನಿರ್ಣಾಯಕ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ರೋಹಿತ್ ಶರ್ಮಾ ಆಟ ಈ ಸೋಲಿನ ಮೂಲಕ ವ್ಯರ್ಥವಾಗಿದೆ.
ಭಾರತದ ಪರ ಬೌಲಿಂಗ್‌ನಲ್ಲಿ ಸ್ಪಿನ್ನರ್ ಯಜ್ವೇಂದ್ರ ಚಹಾಲ್ 4 ಓವರ್‌ಗಳಲ್ಲಿ 34 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ರವಿಚಂದ್ರನ್ ಅಶ್ವಿನ್ 4 ಓವರ್‌ಗಳಲ್ಲಿ 32 ರನ್ ನೀಡಿ 1 ವಿಕೆಟ್ ಪಡೆದರು.

ರೋಹಿತ್ ಶರ್ಮಾ ಆಟ ವ್ಯರ್ಥ
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಕಣಕ್ಕಿಳಿದರು. ಆದರೆ ತಂಡದ ಮೊತ್ತ 11 ರನ್‌ಗಳಾಗಿದ್ದಾಗ 6 ರನ್ ಗಳಿಸಿ ಆಡುತ್ತಿದ್ದ ಕೆಎಲ್ ರಾಹುಲ್ ಎಲ್‌ಬಿ ಬಲೆಗೆ ಬಿದ್ದರು. ನಂತರ ಬಂದ ವಿರಾಟ್ ಕೊಹ್ಲಿ ಯಾವುದೇ ರನ್ ಗಳಿಸಲು ವಿಫಲವಾಗಿ ಡಗ್ ಔಟ್ ಆದರು.
ಈ ವೇಳೆ ಭಾರತ 13 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ನಾಯಕ ರೋಹಿತ್ ಶರ್ಮಾ 41 ಎಸೆತಗಳಲ್ಲಿ 70 ರನ್ ಕಲೆಹಾಕಿ ಭಾರತದ ಇನ್ನಿಂಗ್ಸ್ ಕಟ್ಟಿದರು. ಸೂರ್ಯಕುಮಾರ್ ಯಾದವ್ ಜೊತೆ ಸೇರಿ 97 ರನ್‌ಗಳ ಜೊತೆಯಾಟ ನೀಡಿದರು. ನಂತರ ದೊಡ್ಡ ಹೊಡೆತ ಬಾರಿಸಲು ಹೋಗಿ ಕ್ಯಾಚ್ ನೀಡಿ ಔಟಾದರು.

ದಿಲ್ಶನ್ ಮಧುಶಂಕ 4 ಓವರ್‌ಗಳಲ್ಲಿ 3 ವಿಕೆಟ್
ಇನ್ನುಳಿದಂತೆ ಸೂರ್ಯಕುಮಾರ್ ಯಾದವ್ 34 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದಾಗ ವಿಕೆಟ್ ಒಪ್ಪಿಸಿದರೆ, ಹಾರ್ದಿಕ್ ಪಾಂಡ್ಯ 17 ರನ್ ಗಳಿಸಿ ವಿಕೆಟ್ ನೀಡಿದರು. ಅದೇ ರೀತಿ ರಿಷಭ್ ಪಂತ್ ಕೂಡಾ ಕೊನೆಯಲ್ಲಿ ಅಬ್ಬರಿಸಲು ಯತ್ನಿಸಿದರೂ 17 ರನ್ ಗಳಿಸಿದ್ದಾಗ ಬೌಂಡರಿ ಲೈನ್ ಬಳಿ ಕ್ಯಾಚ್ ನೀಡಿ ಹೊರನಡೆದರು. ಇನ್ನು ದೀಪಕ್ ಹೂಡಾ ಈ ಪಂದ್ಯದಲ್ಲೂ ಮಿಂಚಲು ವಿಫಲರಾಗಿ 3 ರನ್ ಗಳಿಸಿ ಔಟಾದರು. ಕೊನೆಯಲ್ಲಿ ರವಿಚಂದ್ರನ್ ಅಶ್ವಿನ್ 15 ರನ್ ಗಳಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು.
ಇನ್ನು ಬೌಲಿಂಗ್‌ನಲ್ಲಿ ಶ್ರೀಲಂಕಾ ತಂಡದ ಪರ ದಿಲ್ಶನ್ ಮಧುಶಂಕ 4 ಓವರ್‌ಗಳಲ್ಲಿ 24 ರನ್ ನೀಡಿ ಪ್ರಮುಖ 3 ವಿಕೆಟ್ ಗಳಿಸಿದರು. ಚಮಿಕಾ ಕರುಣಾರತ್ನೆ 4 ಓವರ್‌ಗಳಲ್ಲಿ 27 ರನ್ ನೀಡಿ 2 ವಿಕೆಟ್ ಪಡೆದರು. ನಾಯಕ ದಸುನ್ ಶನಕ 2 ಓವರ್‌ಗಳಲ್ಲಿ 26 ನೀಡಿ 2 ವಿಕೆಟ್ ಪಡೆದರು. ಮಹೀಶ್ ತೀಕ್ಷಣ ಒಂದು ವಿಕೆಟ್ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications