
ಏಷ್ಯಾ ಕಪ್ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಪೈಪೋಟಿಯ ಕದನಕ್ಕೆ ಸಾಕ್ಷಿಯಾಗಲು ಅಭಿಮಾನಿಗಳು ಕಾತರರಾಗಿದ್ದಾರೆ. ಟೂರ್ನಿಯಲ್ಲಿ ಭಾಗವಹಿಸಲು ಭಾರತೀಯ ತಂಡ ಈಗಾಗಲೇ ಯುಎಇ ತಲುಪಿದ್ದು ಅಭ್ಯಾಸದಲ್ಲಿ ನಿರತವಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ಪ್ರತಿಕ್ರಿಯೆ ನೀಡಿದ್ದು ಏಷ್ಯಾ ಕಪ್ ಟ್ರೋಫಿ ಗೆಲ್ಲುವ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್‌ಸೈಡ್ ಸ್ಪೋರ್ಟ್‌ಗೆ ವಿವಿಎಸ್ ಲಕ್ಷ್ಮಣ್ ಪ್ರತಿಕ್ರಿಯೆ ನೀಡಿದ್ದು ಭಾರತ ತಂಡ ಸಂಪೂರ್ಣವಾಗಿ ಸಜ್ಜಾಗಿದ್ದು ಟ್ರೋಫಿ ಗೆಲ್ಲಲು ಸಿದ್ಧವಾಗಿದ್ದೇವೆ ಎಂದಿದ್ದಾರೆ. "ಏಷ್ಯಾಕಪ್ ಟ್ರೋಫಿ ಎತ್ತಿ ಹಿಡಿಯಲು ಭಾರತ ತಂಡ ಸಜ್ಜಾಗಿದೆ. ನಾವು ತಂಡದಲ್ಲಿ ಪ್ರತಿ ಕ್ರಮಾಂಕಕ್ಕೂ ಪ್ರಬಲ ಪೈಪೋಟಿ ಹೊಂದಿದ್ದೇವೆ. ಟಿ20 ವಿಶ್ವಕಪ್‌ಗೂ ಮುನ್ನ ನಾವು ಇಂತಹ ಸ್ಪರ್ಧಾತ್ಮಕ ಟೂರ್ನಿಯಲ್ಲಿ ಆಡುವುದು ಬಹಳ ಉತ್ತಮ" ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಮುಖಾಮುಖಿಯೊಂದಿಗೆ ಟೀಂ ಇಂಡಿಯಾ ಏಷ್ಯಾಕಪ್ ಅಭಿಯಾನವನ್ನು ಆರಂಭಿಸಲಿದೆ. ಆಗಸ್ಟ್ 28 ರಂದು ದುಬೈನಲ್ಲಿ ನಡೆಯಲಿರುವ ಈ ಕದನಕ್ಕೆ ಸಾಕ್ಷಿಯಾಗಲು ಅಭಿಮಾನಿಗಳು ಕಾತರವಾಗಿದ್ದಾರೆ. ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ ಅಂತಿಮ ಮುಖಾಮುಖಿಯಲ್ಲಿ ಭಾರತ ತಂಡವನ್ನು ಸೋಲಿಸಿತು. ಈ ಸೋಲಿಗೆ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ ರೋಹಿತ್ ನೇತೃತ್ವದ ಭಾರತ ತಂಡ.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಮುಂದಿನ ಎರಡು ವಾರಗಳಲ್ಲಿ ಮೂರು ಬಾರಿ ಪಾಕಿಸ್ತಾನ ತಂಡವನ್ನು ಎದುರಿಸುವ ಅವಕಾಶವಿದೆ. ಈ ಹಣಾಹಣಿಯಲ್ಲಿ ಸೋಲಿಸಿ ಏಷ್ಯಾಕಪ್ ಪ್ರಶಸ್ತಿಯನ್ನು ಎತ್ತುವುದು ಭಾರತದ ಪ್ರಮುಖ ಗುರಿಯಾಗಿದೆ. 2018ರಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿಯೇ ಕಣಕ್ಕಿಳಿದಿದ್ದ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹೀಗಾಗಿ ಈ ಬಾರಿ ಟೂರ್ನಿಗೆ ಹಾಲಿ ಚಾಂಪಿಯನ್ ಆಗಿ ಭಾರತ ತಂಡ ಕಣಕ್ಕಿಳಿಯುತ್ತಿದೆ. ಹಂಗಾಮಿ ಕೋಚ್ ವಿವಿಎಸ್ ಲಕ್ಷ್ಮಣ್ ಭಾರತ ಈ ಬಾರಿ ದಾಖಲೆಯ 8ನೇ ಬಾರಿಗೆ ಏಷ್ಯಾ ಕಪ್ ಟೂರ್ನಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಸ್ಕ್ವಾಡ್
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್,
ಪಾಕಿಸ್ತಾನ್: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಶಹನವಾಜ್ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನೈನ್