ರೋಹಿತ್ vs ಕೊಹ್ಲಿ vs ಜಡೇಜಾ: ಪಾಕ್ ವಿರುದ್ಧ ಅತಿಹೆಚ್ಚು ಪಂದ್ಯ ಆಡಿದ ಅನುಭವಿ ಯಾರು?

ಇದೇ ತಿಂಗಳ 27ರಿಂದ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಯ ಹದಿನೈದನೇ ಆವೃತ್ತಿ ಆರಂಭವಾಗಲಿದ್ದು, ಪ್ರಥಮ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಪ್ರತೀ ಬಾರಿಯಂತೆ ಈ ಬಾರಿಯೂ ಸಹ ಏಷ್ಯಾಕಪ್ ಟೂರ್ನಿ ಸಾಕಷ್ಟು ದೊಡ್ಡಮಟ್ಟದ ನಿರೀಕ್ಷೆ ಹುಟ್ಟುಹಾಕಲು ಪ್ರಮುಖ ಕಾರಣ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ ಎಂಬ ಅಂಶ. ಹೌದು, ಐಸಿಸಿ ಟೂರ್ನಿಗಳನ್ನು ಹೊರತುಪಡಿಸಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿರುವ ಟೂರ್ನಿ ಎಂದರೆ ಅದು ಏಷ್ಯಾಕಪ್ ಮಾತ್ರ.
ಇನ್ನು ಈ ಬಾರಿಯ ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಎದುರಾಗಲಿದ್ದು, ಪಂದ್ಯ ಆಗಸ್ಟ್ 28ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಕೊನೆಯದಾಗಿ ಇದೇ ಕ್ರೀಡಾಂಗಣದಲ್ಲಿ ಕಳೆದ ಬಾರಿಯ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು ಮತ್ತು ಈ ಪಂದ್ಯದಲ್ಲಿ ಪಾಕ್ ಟೀಮ್ ಇಂಡಿಯಾ ವಿರುದ್ಧ ಯಾವುದೇ ವಿಕೆಟ್ ನಷ್ಟವಿಲ್ಲದೇ ಗೆದ್ದು ಭಾರತದ ವಿರುದ್ಧ ಅದೇ ಮೊದಲ ಬಾರಿಗೆ ವಿಶ್ವಕಪ್ ಗೆದ್ದ ದಾಖಲೆ ಬರೆದಿತ್ತು.
ಹೀಗೆ ಕಳೆದ ಬಾರಿ ಮುಖಭಂಗ ಅನುಭವಿಸಿದ್ದ ಅಂಗಳದಲ್ಲಿಯೇ ಭಾರತ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿನ ತನ್ನ ಪ್ರಥಮ ಪಂದ್ಯವನ್ನು ಪಾಕ್ ವಿರುದ್ಧ ಆಡಲಿದ್ದು, ಈ ಪಂದ್ಯಗಳ ಟಿಕೆಟ್ ಈಗಾಗಲೇ ಮಾರಾಟಗೊಂಡಿದೆ. ಇನ್ನು ಈ ಪಂದ್ಯದಲ್ಲಿ ಕಣಕ್ಕಿಳಿಯುವ ಪಾಕ್ ತಂಡದಲ್ಲಿ ಟೀಂ ಇಂಡಿಯಾ ವಿರುದ್ಧ ಹೆಚ್ಚು ಪಂದ್ಯಗಳನ್ನು ಆಡಿರುವ ಅನುಭವವಿರುವ ಆಟಗಾರರು ಹೆಚ್ಚೇನೂ ಇಲ್ಲ ಎಂದೇ ಹೇಳಬಹುದು. ಆದರೆ, ಟೀಂ ಇಂಡಿಯಾದಲ್ಲಿ ಪಾಕ್ ವಿರುದ್ಧ ಹಲವಾರು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅನುಭವವಿರುವ ನಾಲ್ವರು ಆಟಗಾರರು ಇರುವುದು ಗಮನಾರ್ಹ. ಹೌದು, ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗಿರುವ ಟೀಮ್ ಇಂಡಿಯಾದಲ್ಲಿ ಪಾಕ್ ವಿರುದ್ಧ ಇಪ್ಪತ್ತಕ್ಕೂ ಹೆಚ್ಚು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಇಬ್ಬರು ಆಟಗಾರರು ಹತ್ತಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಇಬ್ಬರು ಆಟಗಾರರಿದ್ದಾರೆ. ಹಾಗಿದ್ದರೆ ಆ ಆಟಗಾರರು ಯಾರು ಹಾಗೂ ಅವರು ಪಾಕ್ ವಿರುದ್ಧ ಒಟ್ಟು ಎಷ್ಟು ಪಂದ್ಯಗಳಲ್ಲಿ ಕಣಕ್ಕಿಳಿದ ಅನುಭವವನ್ನು ಹೊಂದಿದ್ದಾರೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

3. ಭುವನೇಶ್ವರ್ ಕುಮಾರ್ ಹಾಗೂ ರವೀಂದ್ರ ಜಡೇಜಾ
ಟೀಮ್ ಇಂಡಿಯಾದ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಹಾಗೂ ರವೀಂದ್ರ ಜಡೇಜಾ ಇಲ್ಲಿಯವರೆಗೂ ತಲಾ 14 ಪಂದ್ಯಗಳಲ್ಲಿ ಪಾಕಿಸ್ತಾನದ ವಿರುದ್ಧ ಆಡಿರುವ ಅನುಭವವನ್ನು ಹೊಂದಿದ್ದಾರೆ. ಭುವನೇಶ್ವರ್ ಕುಮಾರ್ ಪಾಕ್ ವಿರುದ್ಧ 4 ಟಿ ಟ್ವೆಂಟಿ ಹಾಗೂ 10 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರೆ, ರವೀಂದ್ರ ಜಡೇಜಾ 5 ಟಿ ಟ್ವೆಂಟಿ ಹಾಗೂ 9 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಇನ್ನು 2012-13ರಲ್ಲಿ ಪಾಕ್ ಭಾರತ ಪ್ರವಾಸ ಕೈಗೊಂಡಿದ್ದಾಗ ಭುವನೇಶ್ವರ್ ಕುಮಾರ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

2. ವಿರಾಟ್ ಕೊಹ್ಲಿ
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧ 13 ಏಕದಿನ ಹಾಗೂ 7 ಟಿ ಟ್ವೆಂಟಿ ಪಂದ್ಯಗಳಲ್ಲಿ ಕಣಕ್ಕಿಳಿದ ಅನುಭವವನ್ನು ಹೊಂದಿದ್ದು ಒಟ್ಟು 20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ಈ ಬಾರಿಯ ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗಿರುವ ತಂಡದಲ್ಲಿರುವ ಭಾರತೀಯರ ಪೈಕಿ ಪಾಕ್ ವಿರುದ್ಧ ಅತಿಹೆಚ್ಚು ಪಂದ್ಯಗಳನ್ನಾಡಿರುವ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

1. ರೋಹಿತ್ ಶರ್ಮಾ
2007ರಲ್ಲಿ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರೋಹಿತ್ ಶರ್ಮಾ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ಭಾರತೀಯರ ಪೈಕಿ ಪಾಕ್ ವಿರುದ್ಧ ಅತಿಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎನಿಸಿಕೊಂಡಿದ್ದಾರೆ. 2007ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿಯೂ ಪಾಕ್ ವಿರುದ್ಧ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಒಟ್ಟಾರೆ 24 ಪಂದ್ಯಗಳಲ್ಲಿ ಪಾಕ್ ವಿರುದ್ಧ ಕಣಕ್ಕಿಳಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications