ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ನೇಪಾಳ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅಬ್ಬರಿಸಿರುವ ಪಾಕಿಸ್ತಾನ ತಂಡ ಬರೊಬ್ಬರಿ 238 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಏಷ್ಯಾಕಪ್ ಇತಿಹಾಸದಲ್ಲಿ ರನ್‌ಗಳ ಆಧಾರದಲ್ಲಿ ಎರಡನೇ ಅತಿ ದೊಡ್ಡ ಗೆಲುವು ಸಾಧಿಸಿದೆ.
ಪಾಕಿಸ್ತಾನ ನೀಡಿದ 343 ರನ್‌ಗಳ ಗುರಿ ಬೆನ್ನಟ್ಟಿದ ನೇಪಾಳ ತಂಡ ಯಾವ ಹಂತದಲ್ಲಿಯೂ ಪಾಕಿಸ್ತಾನ ತಂಡಕ್ಕೆ ಸವಾಲಾಗಲೇ ಇಲ್ಲ. ಮಧ್ಯಮ ಕ್ರಮಾಂಕದಲ್ಲಿ ಮೂವರು ಆಟಗಾರರು ಮಾತ್ರವೇ ಎರಡಂಕಿ ತಲುಪುವಲ್ಲಿ ಯಶಸ್ವಿಯಾಗಿದ್ದರು. ಉಳಿದಂತೆ ಎಲ್ಲಾ ಆಟಗಾರರು ಕೂಡ ಒಂದಂಕಿಗೆ ವಿಕೆಟ್ ಕಳೆದುಕೊಂಡಿದ್ದಾರೆ. ಶದಬ್ ಖಾನ್ 4 ವಿಕೆಟ್ ಕಬಳಿಸಿದರೆ ವೇಗಿಗಳಾದ ಶಹೀನ್ ಶಾ ಹಾಗೂ ಹ್ಯಾರಿಸ್ ರೌಫ್ ತಲಾ ಎರಡು ವಿಕೆಟ್ ಕಬಳಿಸಿದರು. ನಸೀಮ್ ಶಾ ಹಾಗೂ ಮೊಹಮ್ಮದ್ ನವಾಜ್ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡ ಆರಂಭದಲ್ಲಿ ಎರಡು ವಿಕೆಟ್‌ಗಳನ್ನು ಕಳದುಕೊಂಡು ಹಿನ್ನಡೆ ಅನುಭವಿಸಿತ್ತು. ಫಕಾರ್ ಜಮಾನ್ ಹಾಗೂ ಇಮಾಮ್ ಉಲ್ ಹಕ್ ತಂಡದ ಮೊತ್ತ 25 ರನ್‌ಗಳಾಗುವಷ್ಟರಲ್ಲಿಯೇ ವಿಕೆಟ್ ಕಳೆದುಕೊಂಡಿದ್ದರು. ಆದರೆ ನಂತರ ಬಂದ ನಾಯಕ ಬಾಬರ್ ಅಜಂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ರಿಜ್ವಾನ್ ಅವರಿಗೆ ಸಾಥ್ ನೀಡಿದ್ದು ನಂತರ ಇಫ್ತಿಕಾರ್ ಅಹ್ಮದ್ ಕೂಡ ಸ್ಮರಣೀಯ ಇನ್ನಿಂಗ್ಸ್ ಕಟ್ಟಿದರು.
ಈ ಪಂದ್ಯದಲ್ಲಿ ಬಾಬರ್ ಅಜಂ 131 ಎಸೆಗಳಲ್ಲಿ 151 ರನ್‌ಗಳನ್ನು ಬಾರಿಸಿದರೆ ಇಫ್ತಿಕಾರ್ ಅಹ್ಮದ್ ತಮ್ಮ ಚೊಚ್ಚಲ ಏಕದಿನ ಶತಕವನ್ನು ಬಾರಿಸಿದರು. 71 ಎಸೆತಗಳನ್ನು ಎದುರಿಸಿದ ಇಫ್ತಿಕಾರ್ ಅಹ್ಮದ್ 109 ರನ್‌ಗಳನ್ನು ಕಲೆಹಾಕಿದ್ದಾರೆ. ಈ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ ಪಾಕಿಸ್ತಾನ ತಂಡ ಈ ಪಂದ್ಯದಲ್ಲಿ 342 ರನ್‌ಗಳನ್ನು ಕಲೆಹಾಕಿದೆ.
ನೇಪಾಳ (ಪ್ಲೇಯಿಂಗ್ XI): ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಆರಿಫ್ ಶೇಖ್, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸೋಂಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಮಿಚಾನೆ, ಲಲಿತ್ ರಾಜಬನ್ಶಿ
ಪಾಕಿಸ್ತಾನ (ಪ್ಲೇಯಿಂಗ್ XI): ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್(ಸಿ), ಮೊಹಮ್ಮದ್ ರಿಜ್ವಾನ್(ಡಬ್ಲ್ಯೂ), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್