ಪಾಕಿಸ್ತಾನ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿಗೆ ಇಂದು ಭಾರತ ತಂಡವನ್ನು ಪ್ರಕಟಿಸಲಾಗಿದೆ. 17 ಆಟಗಾರರ ತಂಡವನ್ನು ಪ್ರಕಟಿಸಲಾಗಿದ್ದು ಬಲಿಷ್ಠ ಪಡೆಯೊಂದಿಗೆ ಏಷ್ಯಾಕಪ್‌ನಲ್ಲಿ ಭಾರತ ಕಣಕ್ಕಿಳಿಯಲಿದೆ. ಈ ಮೂಲಕ ವಿಶ್ವಕಪ್ ಟೂರ್ನಿಗೂ ಭರ್ಜರಿ ಸಿದ್ಧತೆಯ ಹುಮ್ಮಸ್ಸಿನಲ್ಲಿದೆ.
ಇನ್ನು ಆಯ್ಕೆ ಸಮಿತಿ ಪ್ರಕಟಿಸಿರುವ ಭಾರತ ತಂಡದ ಆಟಗಾರರ ವಿಚಾರವಾಗಿ ಈಗ ಸಾಕಷ್ಟು ವಿಶ್ಲೇಷಣೆಗಳು ನಡೆಯುತ್ತಿದೆ. ಕೆಲ ಆಟಗಾರರ ಆಯ್ಕೆಯ ಅಭಿಮಾನಿಗಳು ಹಾಗೂ ವಿಶ್ಲೇಷಕರು ಪ್ರಶ್ನೆಗಳನ್ನು ಮಾಡುತ್ತಿದ್ದರೆ ಇನ್ನೂ ಕೆಲವರು ಆಯ್ಕೆಯಾಗದಿರುವ ಕೆಲ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಅರ್ಹರಾಗಿದ್ದರು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಈ ಬಾರಿಯ ಏಷ್ಯಾಕಪ್‌ನ ಈ ತಂಡದಲ್ಲಿ ಈ ನಾಲ್ವರು ಪ್ರಮುಖ ಆಟಗಾರರು ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ. ಆ ನಾಲ್ವರು ಆಟಗಾರರು ಯಾರು? ಮುಂದೆ ಓದಿ..
ಅನುಭವಿ ಸ್ಪಿನ್ನ್ ಯುಜುವೇಂದ್ರ ಚಾಹಲ್
33ರ ಹರೆಯದ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಈ ಬಾರಿಯ ಏಷ್ಯಾಕಪ್ ತಂಡಕ್ಕೆ ಆಯ್ಕೆಯಾಗಿಲ್ಲ. ಭಾರತ ತಂಡದಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರೂ ಏಷ್ಯಾ ಟೂರ್ನಿಗೆ ಆಯ್ಕೆಯಾಗದಿರುವುದು ಬಹುತೇಕ ಕ್ರಿಕೆಟ್ ಅಭಿಮಾಇಗಳಿಗೆ ಅಚ್ಚರಿ ಮೂಡಿಸಿದೆ. ಯುಜುವೇಂದ್ರ ಚಾಹಲ್ ಬದಲಿಗೆ ಕುಲ್‌ದೀಪ್ ಯಾದವ್‌ಗೆ ಅವಕಾಶ ನೀಡಲು ಆಯ್ಕೆಮಂಡಳಿ ನಿರ್ಧರಿಸಿದ್ದು ಇದರಿಂದಾಗಿ ಚಾಹಲ್‌ಗೆ ಅವಕಾಶ ದೊರೆತಿಲ್ಲ. 72 ಏಕದಿನ ಪಂದ್ಯಗಳನ್ನು ಆಡಿರುವ ಚಾಹಲ್ 121 ವಿಕೆಟ್ ಪಡೆದುಕೊಂಡಿದ್ದಾರೆ.
ಅರ್ಶ್‌ದೀಪ್ ಸಿಂಗ್
ಟೀಮ್ ಇಂಡಿಯಾದಲ್ಲಿ 4ನೇ ಕ್ರಮಾಂಕಕ್ಕೆ ನಡೆದ ಚರ್ಚೆಯ ಬಳಿಕ ಅತಿ ಹೆಚ್ಚು ಚರ್ಚೆಗೆ ಕಾರಣವಾದ ಮತ್ತೊಂದು ಸ್ಥಾನವೆಂದರೆ ಅದು ಎಡಗೈ ವೇಗದ ಬೌಲರ್ ಪಾತ್ರ. ಅರ್ಷದೀಪ್ ಸಿಂಗ್ ಟಿ20 ಮಾದರಿಯಲ್ಲಿ ನೀಡಿದ ಪ್ರದರ್ಶನದಿಂದಾಗಿ ಗಮನಸೆಳೆದಿದ್ದರು. ಆದರೆ ಇತ್ತೀಚೆಗೆ ಚುಟುಕು ಮಾದರಿಯಲ್ಲಿಯೂ ನಿರೀಕ್ಷಿತ ಪ್ರದರ್ಶನ ನೀಡಲು ಅರ್ಶ್‌ದೀಪ್ ಸಿಂಗ್ ವಿಫಲವಾಗಿದ್ದರು. ಇನ್ನು ಏಕದಿನ ಮಾದರಿಯಲ್ಲಿ ಅವರ ಪ್ರದರ್ಶನ ತೀರಾ ಸಾಮಾನ್ಯವಾಗಿದೆ. ಹೀಗಾಗಿ ಅರ್ಶ್‌ದೀಪ್ ಸಿಂಗ್ ಕೂಡ ಏಷ್ಯಾಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲವಾಗಿದ್ದಾರೆ.
ಉಮ್ರಾನ್ ಮಲಿಕ್
ಉಮ್ರಾನ್ ಮಲಿಕ್ ಅವರ ವೇಗದ ಬೌಲಿಂಗ್ ಅವರನ್ನು ಭಾರತ ತಂಡಕ್ಕೆ ವೇಗವಾಗಿ ಪ್ರವೇಶ ಪಡೆಯುವಂತೆ ಮಾಡಿತ್ತು. ಉಮ್ರಾನ್ ಈವರೆಗೆ ಭಾರತದ ಪರ ಟಿ20 ಮತ್ತು ಏಕದಿನ ಮಾದರಿಯಲ್ಲಿ ಆಡಿದ್ದಾರೆ. ಭಾರತ ಪರ ಆಡಿದ 10 ಪಂದ್ಯಗಳಲ್ಲಿ ಅವರು 13 ವಿಕೆಟ್ ಪಡೆದಿದ್ದರೂ ಏಷ್ಯಾಕಪ್‌ಗೆ ಆಯ್ಕೆ ಮಾಡಿರುವ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ.
ಅನುಭವಿ ರವಿಚಂದ್ರನ್ ಅಶ್ವಿನ್
ಭಾರತ ತಂಡದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾದ ಕಂಡ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಭಾರತ ತಂಡದ ಪರವಾಗಿ ಪ್ರತಿ ಭಾರಿ ಆಡಿದಾಗಲೂ ಅಶ್ವಿನ್ ಅದ್ಭುತ ಪ್ರದರ್ಶನ ನೀಡಿಕೊಂಡು ಬಂದಿದ್ದಾರೆ. ಅದರಲ್ಲೂ ಭಾರತ ಹಾಗೂ ಉಪಖಂಡದ ಪಿಚ್‌ಗಳಲ್ಲಿ ಆರ್ ಅಶ್ವಿನ್ ಅತ್ಯಂತ ಪರಿಣಾಮಕಾರಿ ಆಟಗಾರ ಎನ್ನುವುದನ್ನು ಈಗಾಗಲೇ ನಿರೂಪಿಸಿದ್ದಾರೆ. ಹೀಗಾಗಿ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರೆ ಅದು ತಂಡಕ್ಕೆ ಹೆಚ್ಚಿನ ಬಲ ನೀಡುತ್ತಿತ್ತು. ಆದರೆ ಈ ತಂಡದಲ್ಲಿ ಅವರಿಗೆ ಅವಕಾಶ ದೊರೆಯದಿರುವುದು ಕೆಲ ಅಭಿಮಾಣಿಗಳಿಗೆ ಬೇಸರ ಮೂಡಿಸಿರುವುದು ಸುಳ್ಳಲ್ಲ.
ಏಷ್ಯಾಕಪ್‌ಗೆ ಆಯ್ಕೆಯಾಗಿರುವ ಟೀಮ್ ಇಂಡಿಯಾ ಸ್ಕ್ವಾಡ್: ರೋಹಿತ್ ಶರ್ಮಾ, ಶುಬ್ಮನ್ ಗಿಲ್ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.