Asia Cup 2023: ಬಾಂಗ್ಲಾದೇಶ ತಂಡಕ್ಕೆ ಭಾರೀ ಹಿನ್ನಡೆ; ಪಂದ್ಯಾವಳಿಯಿಂದ ಸ್ಟಾರ್ ಬ್ಯಾಟರ್ ಔಟ್!
ಇಂದು (ಬುಧವಾರ, ಆಗಸ್ಟ್ 30) ಮುಲ್ತಾನ್‌ನಲ್ಲಿ ಆರಂಭವಾಗುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಮತ್ತು ಪ್ರವಾಸಿ ನೇಪಾಳ ತಂಡಗಳು ಮುಖಾಮುಖಿಯಾಗಲಿವೆ.
ಇದೇ ವೇಳೆ 2023ರ ಏಷ್ಯಾ ಕಪ್ ಪಂದ್ಯಾವಳಿ ಆರಂಭಕ್ಕೂ ಒಂದು ದಿನದ ಮುನ್ನ ಬಾಂಗ್ಲಾದೇಶ ತಂಡ ದೊಡ್ಡ ಹಿನ್ನಡೆ ಅನುಭವಿಸಿದೆ. ವೈರಲ್ ಜ್ವರದಿಂದ ಚೇತರಿಸಿಕೊಳ್ಳಲು ವಿಫಲವಾದ ನಂತರ ಸ್ಟಾರ್ ಬ್ಯಾಟರ್ ಲಿಟ್ಟನ್ ದಾಸ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

ಬಾಂಗ್ಲಾದೇಶ ತಂಡದ ಪ್ರಮುಖ ಆಟಗಾರ ಲಿಟ್ಟನ್ ದಾಸ್ ಅವರು 2023ರ ಏಷ್ಯಾ ಕಪ್‌ನಿಂದ ಹೊರಗುಳಿದ ಕಾರಣ, ಎಸಿಸಿ ಟೂರ್ನಿಗಾಗಿ ತಂಡದೊಂದಿಗೆ ಶ್ರೀಲಂಕಾಕ್ಕೆ ಪ್ರಯಾಣಿಸಲಿಲ್ಲ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಆಯ್ಕೆ ಸಮಿತಿಯು ಲಿಟ್ಟನ್ ದಾಸ್ ಅವರನ್ನು ತಂಡದಿಂದ ಹೊರಗಿಡುವುದನ್ನು ಖಚಿತಪಡಿಸಿತು ಮತ್ತು ಅವರ ಸ್ಥಾನಕ್ಕೆ ಬದಲಿ ಆಟಗಾರನನ್ನು ಪ್ರಕಟಿಸಿತು.
ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಅನಾಮುಲ್ ಹಕ್ ಬಿಜೋಯ್ ಬದಲಿ ಆಟಗಾರನಾಗಿ ಬಾಂಗ್ಲಾದೇಶ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇಂದು (ಆಗಸ್ಟ್ 30ರ ಬುಧವಾರ) ದ್ವೀಪ ರಾಷ್ಟ್ರಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ.

ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾದ ಮಿನ್ಹಾಜುಲ್ ಅಬೆದಿನ್ ಅವರು ಬದಲಿ ಆಟಗಾರನ ಕುರಿತು ಮತನಾಡಿ, ತಂಡದಲ್ಲಿ ಸ್ಥಾನ ಪಡೆಯಲು ಅನಾಮುಲ್ ಹಕ್ ಯಾವಾಗಲೂ ತಯಾರಿಯಲ್ಲಿದ್ದಾರೆ ಎಂದು ಹೇಳಿದರು.
"ಅನಾಮುಲ್ ಹಕ್ ಬಿಜೋಯ್ ದೇಶೀಯ ಕ್ರಿಕೆಟ್‌ನಲ್ಲಿ ರನ್ ಗಳಿಸಿದ್ದಾರೆ ಮತ್ತು ನಾವು ಬಾಂಗ್ಲಾದೇಶ ಟೈಗರ್ಸ್ ಕಾರ್ಯಕ್ರಮದಲ್ಲಿ ಅವರನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದ್ದೇವೆ. ಅವರು ಯಾವಾಗಲೂ ನಮ್ಮ ಪರಿಗಣನೆಯಲ್ಲಿರುತ್ತಿದ್ದರು".
"ಲಿಟ್ಟನ್ ದಾಸ್ ಅವರ ಅಲಭ್ಯತೆಯಿಂದಾಗಿ, ನಮಗೆ ವಿಕೆಟ್ ಕೀಪಿಂಗ್ ಮಾಡುವ ಅಗ್ರ ಕ್ರಮಾಂಕದ ಬ್ಯಾಟರ್ ಅಗತ್ಯವಿದೆ ಮತ್ತು ಅನಾಮುಲ್ ಹಕ್ ಅವರು ಸ್ಥಾನ ಪಡೆದರು," ಎಂದು ಐಸಿಸಿ ಉಲ್ಲೇಖಿಸಿದಂತೆ ಬಾಂಗ್ಲಾದೇಶ ಆಯ್ಕೆ ಸಮಿತಿ ಅಧ್ಯಕ್ಷ ಮಿನ್ಹಾಜುಲ್ ಅಬೆದಿನ್ ಹೇಳಿದರು.
ಅನಾಮುಲ್ ಹಕ್ ಬಿಜೋಯ್ 44 ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು 30.58ರ ಸರಾಸರಿಯಲ್ಲಿ ಐದು ಅರ್ಧಶತಕಗಳು ಮತ್ತು ಮೂರು ಶತಕಗಳೊಂದಿಗೆ 1254 ರನ್ ಗಳಿಸಿದ್ದಾರೆ. ಆದರೆ, ಅವರು ತಮ್ಮ ಕೊನೆಯ ಪಂದ್ಯವನ್ನು 2022ರಲ್ಲಿ ಆಡಿದ್ದರು ಮತ್ತು ಆ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ 7 ಎಸೆತಗಳಲ್ಲಿ 8 ರನ್ ಗಳಿಸಿದ್ದರು.
ಇದಕ್ಕೂ ಮೊದಲು, ಜುಲೈನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾದ ವೇಗಿ ಎಬಾಡೋಟ್ ಹೊಸೈನ್ ಏಷ್ಯಾ ಕಪ್ ಪಂದ್ಯಾವಳಿಯಿಂದ ಹೊರಗುಳಿದರು.
ಅಕ್ಟೋಬರ್ 5ರಿಂದ ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ಗೆ ವೇಳೆಗೆ ಚೇತರಿಸಿಕೊಳ್ಳುವ ಸಲುವಾಗಿ ಎಬಾಡೋಟ್‌ಗೆ ಬದಲಿಯಾಗಿ 20 ವರ್ಷದ ವೇಗದ ಬೌಲರ್ ತಂಜಿಮ್ ಹಸನ್ ಅವರನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿ ನಿರ್ಧರಿಸಿತು.
ಬಾಂಗ್ಲಾದೇಶ ತಂಡ ತಮ್ಮ ಏಷ್ಯಾ ಕಪ್ ಪಂದ್ಯಾವಳಿಯ ಅಭಿಯಾನವನ್ನು ಸಹ-ಆತಿಥೇಯ ಶ್ರೀಲಂಕಾ ವಿರುದ್ಧ ಗುರುವಾರ, ಆಗಸ್ಟ್ 31ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭಿಸಲಿದೆ.
2023ರ ಏಷ್ಯಾ ಕಪ್‌ಗೆ ನವೀಕರಿಸಿದ ಬಾಂಗ್ಲಾದೇಶ ತಂಡ
ಶಕೀಬ್ ಅಲ್ ಹಸನ್ (ನಾಯಕ), ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದೋಯ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಅಫೀಫ್ ಹೊಸೈನ್ ಧ್ರುಬೊ, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ, ನಸುಮ್ ಅಹ್ಮದ್, ಶಾಕ್ ಮಹೇದಿ ಹಸನ್, ನಯಿಮ್ ಶೇಖ್, ಶಮೀಮ್ ಹೊಸೈನ್, ತಂಝಿದ್ ಹಸನ್ ತಮೀಮ್, ತಂಜಿಮ್ ಹಸನ್ ಸಾಕಿಬ್, ಅನಾಮುಲ್ ಹಕ್ ಬಿಜೋಯ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications