ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಹೊಸ ಹೈಬ್ರಿಡ್ ಮಾದರಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಒಪ್ಪಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಮುಂಬರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಲೀಗ್ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದರೆ, ನಂತರ ನಾಕೌಟ್ ಪಂದ್ಯಗಳಿಗಾಗಿ ಶ್ರೀಲಂಕಾಕ್ಕೆ ಸ್ಥಳಾಂತರಗೊಳ್ಳಲಿದೆ.
ವರದಿಗಳ ಪ್ರಕಾರ, ಪಾಕಿಸ್ತಾನ 13 ಪಂದ್ಯಗಳಲ್ಲಿ ನಾಲ್ಕರಿಂದ ಐದು ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಯಿದೆ. ಆ ಬಳಿಕ ಫೈನಲ್ ಸೇರಿದಂತೆ ಭಾರತ ತಂಡದ ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಲಿದೆ. ಪಿಸಿಬಿ ಮತ್ತು ಎಸಿಸಿ ಒಪ್ಪಿ ಸೂಚಿರುವುದರಿಂದ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.

2023ರ ಏಷ್ಯಾ ಕಪ್ ಪಂದ್ಯಾವಳಿಯು ಸೆಪ್ಟೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಈ ಮೇಲೆ ತಿಳಿಸಿದಂತೆ ಮುಂದುವರಿಯುತ್ತದೆ.
ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ತಮ್ಮ ತಂಡವನ್ನು ಅಂತಿಮಗೊಳಿಸಲು ಏಷ್ಯಾದ ಎಲ್ಲಾ ತಂಡಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಪಂದ್ಯಾವಳಿಯ ನಂತರ, ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19 ರವರೆಗೆ ಐಸಿಸಿ ಪಂದ್ಯಾವಳಿ ನಡೆಯಲಿದೆ.
ಇನ್ನು 2023ರ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ತಂಡ ತನ್ನ ಎಲ್ಲಾ ಪಂದ್ಯಗಳನ್ನು ಲಾಹೋರ್‌ನಲ್ಲಿ ಆಡುವ ಸಾಧ್ಯತೆಯಿದೆ. ಶ್ರೀಲಂಕಾದ ಕ್ಯಾಂಡಿ ಮತ್ತು ಗಾಲೆ ಉಳಿದ ಪಂದ್ಯಗಳಿಗೆ ಆತಿಥ್ಯ ವಹಿಸುವ ನೆಚ್ಚಿನ ಸ್ಥಳಗಳಾಗಲಿವೆ.

ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ಪ್ರಕಾರ, ಪಾಕಿಸ್ತಾನವು 2023ರ ಏಷ್ಯಾ ಕಪ್ ನಡೆಸಲು ಯುಎಇಯನ್ನು ತಮ್ಮ ಸಹ ಆಯೋಜಕ ಎಂದು ಬಯಸಿತ್ತು. ಆದರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಸೆಪ್ಟೆಂಬರ್‌ನಲ್ಲಿ ಗಲ್ಫ್ ರಾಷ್ಟ್ರದಲ್ಲಿನ ಹವಾಮಾನ ವೈಪರೀತ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿತು. ಹೀಗಾಗಿ ಮುಂಬರುವ ಏಷ್ಯಾ ಕಪ್‌ಗೆ ಆತಿಥ್ಯ ವಹಿಸಲು ಪಾಕಿಸ್ತಾನವು ಶ್ರೀಲಂಕಾದೊಂದಿಗೆ ಕೈಜೋಡಿಸಲು ಒಪ್ಪಿಕೊಂಡಿದೆ.
2023ರ ಏಷ್ಯಾ ಕಪ್ ಪಂದ್ಯಾವಳಿಗಾಗಿ ಪಾಕಿಸ್ತಾನಕ್ಕೆ ತೆರಳಲು ಭಾರತ ನಿರಾಕರಿಸಿದ ನಂತರ ಹೈಬ್ರಿಡ್ ಮಾದರಿಯನ್ನು ಪ್ರಸ್ತಾಪಿಸಲಾಯಿತು. ನಜಮ್ ಸೇಥಿ ನೇತೃತ್ವದ ಪಿಸಿಬಿಯು ಬಿಸಿಸಿಐ ನಿರ್ಧಾರವನ್ನು ಟೀಕಿಸಿತು ಮತ್ತು ಮುಂಬರುವ ಏಕದಿನ ವಿಶ್ವಕಪ್‌ಗಾಗಿ ಬಾಬರ್ ಅಜಂ ನಾಯಕತ್ವದ ತಂಡವು ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ಬೆದರಿಕೆ ಹಾಕಿತ್ತು.
ಆದಾಗ್ಯೂ, ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ಪಾಕಿಸ್ತಾನ ತಂಡವು ಭಾರತಕ್ಕೆ ಬರಲಿದೆ ಎಂದು ವರದಿಗಳು ಬಂದ ನಂತರ, ವಿಷಯಗಳು ತಣ್ಣಗಾಗಿವೆ.

ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ಒಂದೆರಡು ವಾರಗಳ ಹಿಂದೆ ದುಬೈನಲ್ಲಿ ನಡೆದ ಸಭೆಯಲ್ಲಿ ಓಮನ್ ಕ್ರಿಕೆಟ್ ಮುಖ್ಯಸ್ಥ ಮತ್ತು ಎಸಿಸಿ ಉಪಾಧ್ಯಕ್ಷ ಪಂಕಜ್ ಖಿಮ್ಜಿ ಅವರಿಗೆ ಹೈಬ್ರಿಡ್ ಮಾದರಿಯ ವಿವರಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇದು ಅಂತಿಮವಾಗಿ ಅನುಮೋದನೆ ಪಡೆದ ನಂತರ ಅದನ್ನು ಎಸಿಸಿಯ ಇತರ ಸದಸ್ಯರಿಗೆ ತಿಳಿಸಿದರು ಮತ್ತು ಶೀಘ್ರದಲ್ಲೇ ಅಧಿಕೃತ ಹೇಳಿಕೆಯ ನಂತರ ಎಲ್ಲಾ ವಿವರಗಳು ದೃಢವಾಗಲಿವೆ.