ಕೊಲಂಬೊದಲ್ಲಿ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ 2 ವಿಕೆತ್ ಗಳ ಸೋಲನ್ನು ಕಂಡಿತು. ಈ ಸೋಲಿನೊಂದಿಗೆ ಪಾಕಿಸ್ತಾನ ತಂಡ 2023ರ ಏಷ್ಯನ್ ಕಪ್ ನಿಂದ ಹೊರಬಿದ್ದಿದೆ. ಈ ಗೆಲುವಿನೊಂದಿಗೆ ಶ್ರೀಲಂಕಾ 11 ಬಾರಿಗೆ ಏಷ್ಯಾ ಕಪ್ ಫೈನಲ್ ಗೆ ಲಗ್ಗೆ ಇಟ್ಟ ಹಾಗಾಗಿದೆ.
ಈ ಸೋಲಿನ ಮೂಲಕ ಪಾಕ್ ಏಕದಿನ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಅದೇ ಸಮಯದಲ್ಲಿ, ಟೀಮ್ ಇಂಡಿಯಾ ಎರಡನೇ ಸ್ಥಾನಕ್ಕೆ ಜಿಗಿದಿದೆ. ಇತ್ತೀಚಿನ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಪಾಕಿಸ್ತಾನ ತಂಡ ಮೂರನೇ ಸ್ಥಾನಕ್ಕೆ ಇಳಿದಿದೆ. ಪಾಕ್ 3,102 ಅಂಕಗಳನ್ನು ಹೊಂದಿದ್ದು, 115 ರೇಟಿಂಗ್ ಪಾಯಿಂಟ್ ಹೊಂದಿದೆ.

ಟೀಂ ಇಂಡಿಯಾ ಎರಡನೇ ಸ್ಥಾನದಲ್ಲಿದ್ದು, ಭಾರತ 4,516 ಅಂಕಗಳು ಮತ್ತು 116 ರೇಟಿಂಗ್ ಹೊಂದಿದೆ. ಆಸ್ಟ್ರೇಲಿಯ ತಂಡ ಮೊದಲ ಸ್ಥಾನದಲ್ಲೇ ಮುಂದುವರೆದಿದೆ. ಆಸೀಸ್ 3,061 ಅಂಕಗಳನ್ನು ಹೊಂದಿದ್ದು ಅಗ್ರ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 118 ರೇಟಿಂಗ್ ಹೊಂದಿದೆ.
ಈ ಪಟ್ಟಿಯಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳೂ ಟಾಪ್ 5ರಲ್ಲಿವೆ. ಇಂಗ್ಲೆಂಡ್ ತಂಡ ನಾಲ್ಕನೇ ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ ತಂಡ ಐದನೇ ಸ್ಥಾನದಲ್ಲಿದೆ. ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ 252 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಈ ಟೂರ್ನಿಯಲ್ಲಿ ಪಾಕಿಸ್ತಾನ ಹಲವು ಏರಿಳಿತಗಳನ್ನು ಕಂಡಿದೆ. ಪಾಕಿಸ್ತಾನ ಮೊದಲ ಪಂದ್ಯದಲ್ಲಿ ನೇಪಾಳವನ್ನು 238 ರನ್ ಗಳಿಂದ ಸೋಲಿಸಿತ್ತು. ಇದಾದ ಬಳಿಕ ಭಾರತ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ 7 ವಿಕೆಟ್ ಗಳಿಂದ ಜಯಗಳಿಸಿತು. ಆದರೆ ಭಾರತ ವಿರುದ್ಧ ತಂಡ ಹೀನಾಯ ಸೋಲನ್ನು ಕಂಡಿತು.

ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕ್ ತಂಡವನ್ನು 228 ರನ್ ಗಳಿಂದ ಸೋಲಿಸಿತು. ಅಲ್ಲದೆ ಶ್ರೀಲಂಕಾ ವಿರುದ್ಧ ಸೋಲು ಕಂಡಿತ್ತು. ಈ ಬಾರಿಯ ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾ ಒಂದೇ ಒಂದು ಪಂದ್ಯವನ್ನು ಸೋತಿಲ್ಲ.
ಏಷ್ಯಾ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆಗೆ ಮಳೆ ಕಾಟ ನೀಡಿದ್ದರಿಂದ, ರದ್ದಾಯಿತು. ಇದಾದ ಬಳಿಕ ನೇಪಾಳ ವಿರುದ್ಧ 10 ವಿಕೆಟ್ ಗಳ ಜಯ ಸಾಧಿಸಿತ್ತು. ಟೀಂ ಇಂಡಿಯಾ ಈಗ ಬಾಂಗ್ಲಾ ದೇಶದೊಂದಿಗೆ ಪಂದ್ಯವನ್ನು ಆಡಲಿದೆ. ಭಾರತ ಫೈನಲ್ ನಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ.