Asia Cup 2023: ವಿಶ್ವಕಪ್‌ಗೂ ಮುನ್ನ ಭಾರತ vs ಪಾಕಿಸ್ತಾನ ಪಂದ್ಯ; ಎಲ್ಲಿ? ಯಾವಾಗ?
2023ರ ಏಷ್ಯಾ ಕಪ್ ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಪಂದ್ಯಾವಳಿ ನಡೆಯಲಿದೆ.
ಏಷ್ಯಾ ಕಪ್ 2023ರ ಅಧಿಕೃತ ಆಯೋಜಕ ದೇಶ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ಕ್ರಿಕೆಟ್ ತಂಡ ನಿರಾಕರಿಸಿದ ನಂತರ, ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ. ಈ ಪ್ರಕಾರ, ಮೊದಲು ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳು ನಡೆದರೆ, ನಂತರ ಫೈನಲ್ ಹಾಗೂ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೇರಿದಂತೆ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ (ಪಿಸಿಬಿ) ಹೈಬ್ರಿಡ್ ಮಾದರಿ ಪಂದ್ಯಾವಳಿಗೆ ವಿಳಂಬವಾದ ಕಾರಣ, ಏಷ್ಯಾ ಕಪ್ 2023ರ ಸಂಪೂರ್ಣ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಲಾಗಿಲ್ಲ.

ಇನ್‌ಸೈಡ್‌ಸ್ಪೋರ್ಟ್ ವೆಬ್‌ಸೈಟ್ ವರದಿಯ ಪ್ರಕಾರ, ಎಸಿಸಿ ಇದೇ ವಾರ ವೇಳಾಪಟ್ಟಿಯನ್ನು ಪ್ರಕಟಿಸಲು ಸಿದ್ಧವಾಗಿದೆ. ಅಲ್ಲದೇ ಬಹು ನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವನ್ನು ಆಯೋಜಿಸಲು ಡಂಬುಲ್ಲಾ ನೆಚ್ಚಿನ ಸ್ಥಳವಾಗಿದೆ.
ಏಷ್ಯಾ ಕಪ್ 2023ರ ಪಂದ್ಯಗಳನ್ನು ನಡೆಸಲು ಕೊಲಂಬೊ ಆದ್ಯತೆಯ ಆಯ್ಕೆಯಾಗಿದ್ದರೂ, ಶ್ರೀಲಂಕಾದಲ್ಲಿ ಮಾನ್ಸೂನ್ ಋತುವಿನ ಕಾರಣದಿಂದಾಗಿ ಡಂಬುಲ್ಲಾವನ್ನು ಅಂತಿಮವಾಗಿ ಶ್ರೀಲಂಕಾದ ಸ್ಥಳವಾಗಿ ಆಯ್ಕೆ ಮಾಡಲಾಗಿದೆ. ಪಾಕಿಸ್ತಾನದ ಪಂದ್ಯಗಳು ಲಾಹೋರ್‌ನಲ್ಲಿ ನಡೆಯಲಿವೆ.
"ಕೆಲವು ಕೊನೆಯ ಹಂತದ ವಿವರಗಳನ್ನು ನೋಡಬೇಕಿದ್ದು, ತಾತ್ಕಾಲಿಕ ವೇಳಾಪಟ್ಟಿಯನ್ನು ಸದಸ್ಯರೊಂದಿಗೆ ಹಂಚಿಕೊಳ್ಳಲಾಗಿದೆ. ಈ ವಾರದೊಳಗೆ ಅದು ಹೊರಬರಬೇಕಿತ್ತು. ಆದರೆ ಮಳೆಗಾಲದ ಕಾರಣ ವಿಳಂಬವಾಗಿದೆ".
ಕೊಲಂಬೊದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯವನ್ನು ಆಯೋಜಿಸಲು ನಾವು ಕಾಯುತ್ತಿದ್ದೇವೆ. ಆದರೆ ಮಳೆಯು ಸಮಸ್ಯೆಯಾಗಬಹುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇನ್‌ಸೈಡ್‌ಸ್ಪೋರ್ಟ್ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.
ಶ್ರೀಲಂಕಾದ ಡಂಬುಲ್ಲಾದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನವನ್ನು ಎದುರಿಸಲಿದೆ ಎಂದು ವರದಿ ತಿಳಿಸಿದೆ.
ಶ್ರೀಲಂಕಾದಲ್ಲಿ ಪಂದ್ಯಾವಳಿ ನಡೆಯುವಾಗ ಆತಿಥೇಯ ಶ್ರೀಲಂಕಾ ವಿರುದ್ಧ ಭಾರತ ತಂಡ ತನ್ನ ಅಭಿಯಾನವನ್ನು ಸೆಪ್ಟೆಂಬರ್ 6ರಂದು ಪ್ರಾರಂಭಿಸಲಿದೆ. ಇದಾದ ಬಳಿಕ 2-3 ದಿನಗಳ ಅಂತರದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಂಭಾವ್ಯ ಅಧ್ಯಕ್ಷ ಝಾಕಾ ಅಶ್ರಫ್ ಅವರು ಎಸಿಸಿಯ ಹೈಬ್ರಿಡ್ ಮಾದರಿ ಪಂದ್ಯಾವಳಿಯನ್ನು ವಿರೋಧಿಸಿದರು. ಆದರೆ, ಇದನ್ನು ಹಿಂದಿನ ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ಅವರೇ ಪ್ರಸ್ತಾಪಿಸಿದ್ದರು.
"ಮೊದಲನೆಯದಾಗಿ ನಾನು ಹೈಬ್ರಿಡ್ ಮಾದರಿಯನ್ನು ಹಿಂದೆಯೇ ತಿರಸ್ಕರಿಸಿದ್ದೆ. ನಾನು ಅದನ್ನು ಒಪ್ಪುವುದಿಲ್ಲ. ಏಷ್ಯನ್ ಕ್ರಿಕೆಟ್ ಮಂಡಳಿಯು ಅದನ್ನು ಪಾಕಿಸ್ತಾನದಲ್ಲಿ ನಡೆಸಬೇಕು ಎಂದು ನಿರ್ಧರಿಸಿತ್ತು," ಎಂದು ಝಾಕಾ ಅಶ್ರಫ್ ಕಳೆದ ತಿಂಗಳು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಆದರೆ, ಏಷ್ಯಾ ಕಪ್ ಪಂದ್ಯಾವಳಿಯ ಯಾವುದೇ ಬದಲಾವಣೆಯನ್ನು ಎಸಿಸಿ ತಿರಸ್ಕರಿಸಿದ್ದು, "ಹೈಬ್ರಿಡ್ ಮಾದರಿಯನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಹೈಬ್ರಿಡ್ ಮಾದರಿಯನ್ನು ವಿನಂತಿಸಿದ್ದು, ಪಿಸಿಬಿಯೇ ಎಂದು ಮರೆಯಬೇಡಿ," ಎಂದು ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications