ಟೀಮ್ ಇಂಡಿಯಾ ಆಯ್ಕೆ ಸಮಿತಿ ಕುತೂಹಲಕಾರಿ ನಿರ್ಧಾರವೊಂದನ್ನು ತೆಗೆದುಕೊಂಡಂತಿದೆ. ಟೀಮ್ ಇಂಡಿಯಾದ ವೈಟ್‌ಬಾಲ್ ಉಪನಾಯಕನ ಹೊಣೆಗಾರಿಗೆ ವೇಗಿ ಜಸ್ಪ್ರೀತ್ ಬೂಮ್ರಾ ಹೆಗಲೇರುವ ಸಾಧ್ಯತೆಯಿದೆ ಎನ್ನಲಾಗಿದೆ. ಏಷ್ಯಾಕಪ್‌ಗೆ ಟೀಮ್ ಇಂಡಿಯಾ ತಂಡವನ್ನು ಆಯ್ಕೆ ಮಾಡುವ ಸಭೆ ಆರಂಭವಾಗಿದ್ದು ಇಲ್ಲಿ ಈ ವಿಚಾರವಾಗಿ ಬೆಳವಣಿಗೆಗಳು ನಡೆದಿದೆ ಎನ್ನಲಾಗಿದೆ.
ವಿಶ್ವಕಪ್‌ಗೂ ಮುನ್ನ ನಡೆಯಲಿರುವ ಏಕದಿನ ಮಾದರಿಯ ಏಷ್ಯಾ ಕಪ್ ಟೂರ್ನಿ ಸಾಕಷ್ಟು ಕುತೂಹಲ ಮೂಡಿಸಿದೆ. ಹೀಗಾಗಿ ಈ ಪ್ರತಿಷ್ಠಿತ ಟೂರ್ನಿಗೆ ಆಯ್ಕೆಯಾಗುವ ತಂಡದ ಮೇಲೆ ಸಾಕಷ್ಟು ಕುತೂಹಲ ಕೆರಳಿಸಿದೆ. ಕೆಲ ಸ್ಟಾರ್ ಆಟಗಾರರು ಗಾಯಗೊಂಡಿರುವ ಕಾರಣ ಅವರು ಈ ಟೂರ್ನಿಯಲ್ಲಿ ಆಯ್ಕೆಯಾಗುತ್ತಾರೆಯೇ ಎನ್ನುವುದು ಪ್ರಶ್ನೆಯಾಗಿತ್ತು. ಆದರೆ ಇದರ ಮಧ್ಯೆ ಈಗ ತಮಡದ ಉಪನಾಯಕತ್ವ ಬದಲಾವಣೆಯಾಗುವ ಸಾಧ್ಯತೆಗಳು ಕಂಡುಬಂದಿದೆ.

ಟೈಮ್ಸ್ ಆಫ್ ಇಂಡಿಯಾ ಬಿಸಿಸಿಐ ಮೂಲಗಳ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದ್ದು ಕುತೂಹಲ ಮೂಡಿಸಿದೆ. "ನಾಯಕತ್ವದ ಹಿರಿತನದ ಆಧಾರದಲ್ಲಿಯೂ ಹಾರ್ದಿಕ್ ಪಾಂಡ್ಯ ಅವರಿಗಿಂತ ಜಸ್ಪ್ರಿತ್ ಬೂಮ್ರಾ ಸೀನಿಯರ್ ಆಗಿದ್ದು 2022ರಲ್ಲಿ ಅವರು ಟೆಸ್ಟ್ ತಂಡವನ್ನು ಮುನ್ನಡೆಸಿದ್ದರು. ಇನ್ನು ಹಾರ್ದಿಕ್ ಪಾಂಡ್ಯ ಅವರಿಗಿಂತ ಮುನ್ನವೇ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಏಕದಿನ ಸರಣಿಯಲ್ಲಿ ಉಪನಾಯಕನ ಜವಾಬ್ಧಾರಿಯನ್ನು ಬೂಮ್ರಾ ವಹಿಸಿಕೊಂಡಿದ್ದರು. ಹಾಗಾಗಿ ಏಷ್ಯಾಕಪ್ ಹಾಗೂ ವಿಶ್ವಕಪ್‌ಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಉಪನಾಯಕನಾಗಿ ಬೂಮ್ರಾ ನೇಮಕವಾದರೆ ಅಚ್ಚರಿಯಿಲ್ಲ" ಎಂದು ಬಿಸಿಸಿಐ ಮೂಲಗಳು ಹೇಳಿಕೆ ನೀಡಿದೆ.
ಇಂದು ಮಧ್ಯಾಹ್ನ 12 ಗಂಟೆಯ ಸಂದರ್ಭದಲ್ಲಿ ಅಜಿತ್ ಅಗರ್ರ್ ನೇತೃತ್ವದ ಆಯ್ಕೆ ಸಮಿತಿ ಹಾಗೂ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಜೊತೆಗೆ ಸಭೆ ನಡೆಸಲಿದೆ. ಈ ಸಭೆಯ ಬಳಿಕ ಮಧ್ಯಾಹ್ನ 1:30ಕ್ಕೆ ಮಾಧ್ಯಮಗೋಷ್ಠಿ ನಡೆಸಲಿದ್ದು ಅಲ್ಲಿ 17 ಆಟಗಾರರನ್ನು ಒಳಗೊಂಡ ಟೀಮ್ ಇಂಡಿಯಾ ಬಳಗವನ್ನು ಪ್ರಕಟಿಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಇನ್ನು ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾದ ಆಯ್ಕೆ ವಿಚಾರವಾಗಿ ಪ್ರಮುಖವಾಗಿರುವ ಕುತೂಹಲವೆಂದರೆ ಗಾಯಗೊಂಡಿರುವ ಸ್ಟಾರ್ ಆಟಗಾರರ ಕಮ್‌ಬ್ಯಾಕ್. ಜಸ್ಪ್ರೀತ್ ಬೂಮ್ರಾ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗುವ ಮೂಲಕ ತಾನು ಫಿಟ್ ಎಂದು ಸಾಬೀತುಪಡಿಸಿದ್ದರೆ ಇತ್ತ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ವಿಚಾರವಾಗಿ ಪ್ರಶ್ನೆಗಳು ಮುಂದುವರಿದೇ ಇದೆ. ಅವರಿಬ್ಬರ ಲಭ್ಯತೆಯೇ ಈಗ ಕುತೂಹಲ ಮೂಡಿಸಿದೆ.
ಇನ್ನು ವರದಿಗಳ ಆಧಾರದಲ್ಲಿ ಏಷ್ಯಾಕಪ್ ಟೂರ್ನಿಗೆ ಕೆಎಲ್ ರಾಹುಲ್ ಲಭ್ಯವಾಗುವ ಆಶಾವಾದ ಮೂಡಿಸಿದೆ. ಆದರೆ ಶ್ರೇಯಸ್ ಐಯ್ಯರ್ ಅವರ ಚೇತರಿಕೆ ನಿರೀಕ್ಷಿತ ಮಟ್ಟದ ವೇಗದಲ್ಲಿಲ್ಲದ ಕಾರಣ ಅವರು ಟೂರ್ನಿಗೆ ಆಯ್ಕೆಯಾಗುವುದು ಬಹುತೇಕ ಅನುಮಾನ ಎನ್ನಲಾಗಿದೆ. ಗಮನಾರ್ಹ ಅಂಶವೆದರೆ ಕೆಎಲ್ ರಾಹುಲ್ ಸ್ಥಾನಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಅವಕಾಶಕ್ಕಾಗಿ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಎದುರುನೋಡುತ್ತಿದ್ದಾರೆ. ಆದರೆ ಶ್ರೇಯಸ್ ಐಯ್ಯರ್ ಅವರ ನಾಲ್ಕನೇ ಕ್ರಮಾಂಕದಲ್ಲಿ ಯಾಔ ಆಟಗಾರ ಕೂಡ ಸ್ಥಾನವನ್ನು ಭದ್ರಪಡಿಸಿಕೊಂಡಿಲ್ಲ ಎಂಬುದು ತಂಡಕ್ಕೆ ತಲೆನೋವಾಗಿರುವ ಸಂಗತಿ.