Asia Cup 2023 Super 4: ಪಾಕಿಸ್ತಾನ ತಂಡದ ಆಲ್ರೌಂಡ್ ಪ್ರದರ್ಶನ; ಗಂಟುಮೂಟೆ ಕಟ್ಟಿದ ಬಾಂಗ್ಲಾ ಹುಲಿಗಳು
ಬುಧವಾರ, ಸೆಪ್ಟೆಂಬರ್ 6ರಂದು ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಹಂತದ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವು ಬಾಂಗ್ಲಾದೇಶ ತಂಡದ ವಿರುದ್ಧ 7 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಬಾಂಗ್ಲಾದೇಶ ತಂಡ 38.4 ಓವರ್‌ಗಳಲ್ಲಿ 193 ರನ್‌ಗಳಿಗೆ ಆಲೌಟ್ ಆಗಿತ್ತು. 194 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 39.3 ಓವರ್‌ಗಳಲ್ಲಿ 3 ಕಳೆದುಕೊಂಡು ಗೆಲುವಿನ ದಡ ತಲುಪಿತು.

ಪಾಕಿಸ್ತಾನ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಫಖರ್ ಜಮಾನ್ 31 ಎಸೆತಗಳಲ್ಲಿ 3 ಬೌಂಡರಿ ಸಮೇತ 20 ರನ್ ಗಳಿಸಿ ಔಟಾದರು. ಇಮಾಮ್-ಉಲ್-ಹಕ್ ಉತ್ತಮವಾಗಿ ಆಡಿ 84 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಮೂಲಕ 78 ರನ್ ಬಾರಿಸಿದರು.
ನಾಯಕ ಬಾಬರ್ ಅಜಂ 22 ಎಸೆತಗಳಲ್ಲಿ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ 79 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 63 ರನ್ ಗಳಿಸಿದರೆ, ಅಘಾ ಸಲ್ಮಾನ್ ಅಜೇಯ 12 ರನ್ ಗಳಿಸಿದರು.

ಬಾಂಗ್ಲಾದೇಶ ತಂಡದ ಪರ ಬೌಲಿಂಗ್‌ನಲ್ಲಿ ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮೆಹಿದಿ ಹಸನ್ ಮಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಆಯ್ಕೆ ಮಾಡಿದ್ದ ಬಾಂಗ್ಲಾದೇಶ ತಂಡ 38.4 ಓವರ್‌ಗಳಲ್ಲಿ 193 ರನ್‌ಗಳಿಗೆ ಸರ್ವಪತನ ಕಂಡಿತು. ಪಾಕಿಸ್ತಾನ ತಂಡದ ಮಾರಕ ಬೌಲಿಂಗ್ ದಾಳಿಗೆ ಪತರುಗುಟ್ಟಿದ ಬಾಂಗ್ಲಾದೇಶ ತಂಡ, ದೊಡ್ಡ ಮೊತ್ತ ಪೇರಿಸುವಲ್ಲಿ ಸಂಕಷ್ಟ ಎದುರಿಸಿತು.
ತಂಡದ ಖಾತೆ ತೆರೆಯುವ ಮುನ್ನವೇ ಮೆಹದಿ ಹಸನ್ ಮಿರಾಜ್ ಅವರನ್ನು ನಸೀಮ್ ಶಾ ಪೆವಿಲಿಯನ್‌ಗೆ ಕಳಿಸಿದರು. ನಂತರ ಬಂದ ಲಿಟ್ಟನ್ ದಾಸ್ ಅಬ್ಬರಿಸುವ ಮುನ್ಸೂಚನೆ ತೋರಿಸಿದರೂ, 16 ರನ್ ಗಳಿಸಿದ್ದಾಗ ಶಾಹೀನ್ ಅಫ್ರಿದಿ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿ ಹೊರನಡೆದರು.

ಮೊಹಮ್ಮದ್ ನಯೀಮ್ 25 ಎಸೆತಗಳಲ್ಲಿ 4 ಬೌಂಡರಿ ಸಮೇತ 20 ರನ್ ಗಳಿಸಿ ಔಟಾದರು. ಇನ್ನು ತೌಹಿದ್ ಹೃದೋಯ್ 2 ರನ್ ನಿರಾಸೆ ಮೂಡಿಸಿದರು. ತಂಡದ ಮೊತ್ತ 9.1 ಓವರ್‌ಗಳಲ್ಲಿ 47 ರನ್ ಗಳಿಸಿದ್ದಾಗ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ನಾಯಕ ಶಕಿಬ್ ಅಲ್ ಹಸನ್ ಮತ್ತು ಮುಶ್ಫಿಕರ್ ರಹೀಂ ಜೊತೆಯಾಗಿ ತಂಡದ ಮೊತ್ತ ಹೆಚ್ಚಿಸಿದರು.
ಈ ಇಬ್ಬರು ಅನುಭವಿಗಳು 5 ವಿಕೆಟ್‌ಗೆ 100 ರನ್‌ಗಳ ಜೊತೆಯಾಟ ನೀಡಿ ಕುಸಿದಿದ್ದ ತಂಡವನ್ನು ಮೇಲೆತ್ತಲು ಪ್ರಯತ್ನಿಸಿದರು. ಈ ಹಾದಿಯಲ್ಲಿ ಶಕಿಬ್ ಅಲ್ ಹಸನ್ 57 ಎಸೆತಗಳಲ್ಲಿ 7 ಬೌಂಡರಿ ಮೂಲಕ 53 ರನ್ ಮತ್ತು ಮುಶ್ಫಿಕರ್ ರಹೀಂ 87 ಎಸೆತಗಳಲ್ಲಿ 5 ಬೌಂಡರಿ ಸಮೇತ 64 ರನ್ ಗಳಿಸಿದರು.
ಇವರಿಬ್ಬರು ಔಟಾಗುತ್ತಿದ್ದಂತೆಯೇ ಬಾಂಗ್ಲಾದೇಶ ತಂಡದ ಕೆಳಕ್ರಮಾಂಕದ ಬ್ಯಾಟರ್‌ಗಳು ಪಾಕಿಸ್ತಾನ ಬೌಲಿಂಗ್ ವಿರುದ್ಧ ಪ್ರತಿರೋಧ ಒಡ್ಡಲು ವಿಫಲರಾದರು. ಶಮೀಮ್ ಹೊಸೈನ್ 16 ರನ್, ಅಫಿಫ್ ಹೊಸೈನ್ 12 ರನ್, ತಸ್ಕಿನ್ ಅಹ್ಮದ್ 0, ಶೋರಿಫುಲ್ ಇಸ್ಲಾಂ 1 ರನ್, ಹಸನ್ ಮಹಮೂದ್ 1 ರನ್ ಗಳಿಸಿದರು.
ಇನ್ನು ಪಾಕಿಸ್ತಾನ ತಂಡದ ಪರ ಬೌಲಿಂಗ್‌ನಲ್ಲಿ ಹ್ಯಾರಿಸ್ ರೌಫ್ 6 ಓವರ್‌ಗಳಲ್ಲಿ 19 ರನ್ ನೀಡಿ 4 ವಿಕೆಟ್ ಪಡೆದರೆ, ನಸೀಮ್ ಶಾ 5.4 ಓವರ್‌ಗಳಲ್ಲಿ 34 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ಶಾಹೀನ್ ಅಫ್ರಿದಿ, ಫಾಹೀಮ್ ಅಶ್ರಫ್ ಮತ್ತು ಇಫ್ತಿಕರ್ ಅಹ್ಮದ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications