ಏಷ್ಯಾಕಪ್ ಟೂರ್ನಿಯ ಆರಂಭಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಮುಂದಿನ ಬುಧವಾರ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಸೆಣಸಾಡುವ ಮೂಲಕ ಈ ಟೂರ್ನಿಗೆ ಚಾಲನೆ ದೊರೆಯಲಿದೆ. ಆದರೆ ಟೂರ್ನಿಯ ಆರಂಭಕ್ಕೆ ಕೇವಲ ಮೂರು ದಿನಗಳಿರುವಾಗ ಪಾಕಿಸ್ತಾನ ತನ್ನ ತಂಡದಲ್ಲಿ ಪ್ರಮುಖ ಬದಲಾವಣೆಯೊಂದನ್ನು ಮಾಡಿದೆ.
ಮಧ್ಯಮ ಕ್ರಮಾಂಕದ ಆಟಗಾರ ಸೌದ್ ಶಕೀಲ್ ಅವರನ್ನು ಪಾಕಿಸ್ತಾನ ತಂಡ 17 ಸದಸ್ಯರ ಬಳಗಕ್ಕೆ ಸೇರ್ಪಡೆಗೊಳಿಸಿದೆ. ಇದಕ್ಕೂ ಹಿಂದೆ ಪ್ರಕಟಿಸಿದ್ದ ತಂಡದಲ್ಲಿ ಸೌದ್ ಶಕೀಲ್ ಸ್ಥಾನವನ್ನು ಪಡೆದುಕೊಂಡಿರಲಿಲ್ಲ. ಇದು ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಆದರೆ ಇದೀಗ ಅವರಿಗೆ ತಂಡದಲ್ಲಿ ಅವಕಾಶ ದೊರೆತಿದೆ.

ಈ ಹಿಂದೆ ಪ್ರಕಟಿಸಿರುವ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದ ತಯ್ಯಬ್ ತಾಹಿರ್ ಸ್ಥಾನಕ್ಕೆ ಸೌದ್ ಶಕೀಲ್ ಸೇರ್ಪಡೆಯಾಗಿದ್ದಾರೆ. ತಯ್ಯಬ್ ತಾಹಿರ್ ಮೀಸಲು ಆಟಗಾರನಾಗಿ ಪಾಕಿಸ್ತಾನ ತಂಡದ ಜೊತೆಗೆ ಪ್ರಯಾಣಿಸಲಿದ್ದಾರೆ. ಈ ಮೂಲಕ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಗಮನಾರ್ಹ ಬದಲಾವಣೆಯೊಂದು ನಡೆದಿದೆ.
27ರ ಹರೆಯದ ಸೌದ್ ಶಕೀಲ್ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಯಾಗಿದ್ದರು. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಅವರು ಮೂರನೇ ಪಂದ್ಯಕ್ಕಾಗಿ ಆಡುವ XI ನಲ್ಲಿ ಸ್ಥಾನ ಪಡೆದಯ ಬ್ಯಾಟಿಂಗ್ ನಡೆಸಿದರಾದರೂ ಕೇವಲ ಒಂಬತ್ತು ರನ್ ಮಾತ್ರವೇ ಗಳಿಸಲು ಶಕ್ತವಾಗಿದ್ದರು. ಇನ್ನು ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದರೂ ಏಕದಿನ ಮಾದರಿಯಲ್ಲಿ ಸೌದ್ ಪ್ರದರ್ಶನ ಗಮನಾರ್ಹವಾಗಿಲ್ಲ. ಕಳೆದ ಆರು ಏಕದಿನ ಪಂದ್ಯಗಳಲ್ಲಿ ಅವರು ಕೇವಲ 76 ರನ್ ಗಳಿಸಿದ್ದಾರೆ.
ಮತ್ತೊಂದೆಡೆ 2023ರ ಏಷ್ಯಾಕಪ್‌ಗಾಗಿ ಪಾಕಿಸ್ತಾನದ ತಂಡದಲ್ಲಿ ತಯ್ಯಬ್ ಅವರಿಗೆ ಸ್ಥಾನ ನೀಡಿದ್ದು ಅಚ್ಚರಿ ಮೂಡಿಸಿತ್ತು. ಅದಕ್ಕೆ ಕಾರಣ ಇದಕ್ಕೂ ಮುನ್ನ ಅವರು ಒಂದೇ ಒಂದು ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ ಅನುಭವ ಹೊಂದಿಲ್ಲ. ಆದರೆ 30 ವರ್ಷ ವಯಸ್ಸಿ ಈ ಮಧ್ಯಮ ಕ್ರಮಾಂಕದ ಬ್ಯಾಟರ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಅಂಕಿಅಂಶವನ್ನು ಹೊಂದಿದ್ದರು. ಅಲ್ಲದೆ ಇತ್ತೀಚೆಗೆ ಎಸಿಸಿ ಎಮರ್ಜಿಂಗ್ ಟೀಮ್ಸ್ ಕಪ್ 2023ರ ಫೈನಲ್‌ನಲ್ಲಿ ಭಾರತದ ವಿರುದ್ಧ ಮ್ಯಾಚ್ ವಿನ್ನಿಂಗ್ ಶತಕವನ್ನು ಕೂಡ ಬಾರಿಸಿ ಗಮನಸೆಳೆದಿದ್ದರು. ಆದರೆ ರಾಷ್ಟ್ರೀಯ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡ ಖುಷಿಯಲ್ಲಿದ್ದ ತಯ್ಯಬ್‌ಗೆ ಈಗ ಶಾಕ್ ದೊರೆತಿದೆ.
ಇತ್ತ ಪಾಕಿಸ್ತಾನ ತಂಡ ಏಷ್ಯಾಕಪ್ ಟೂರ್ನಿಯಲ್ಲಿ ಭಾಗಿಯಾಗಲಿರುವ ಮತ್ತೊಂದು ತಂಡವಾದ ಅಫ್ಘಾನಿಸ್ತಾನದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಿತ್ತು. ಈ ಸರಣಿಯ ಎಲ್ಲಾ ಮೂರು ಪಂದ್ಯಗಳಲ್ಲಿಯೂ ಪಾಕ್ ಗೆಲುವು ಸಾಧಿಸಿದ್ದು ಸರಣಿಯನ್ನು ವೈಟ್‌ವಾಶ್ ಮಾಡಿದೆ. ಈ ಮೂಲಕ ಏಷ್ಯಾಕಪ್ ಟೂರ್ನಿಗೆ ಭರ್ಜರಿಯಾಗಿ ಸಿದ್ದವಾಗಿರುವುದಾಗಿ ಘೋಷಣೆ ಮಾಡಿದೆ. ಇನ್ನು ಇದೇ ಸಂದರ್ಭದಲ್ಲಿ ಪಾಕಿಸ್ತಾನ ಏಕದಿನ ಮಾದರಿಯ ಐಸಿಸಿ ಶ್ರೇಯಾಂಕದಲ್ಲಿಯೂ ನಂಬರ್ 1 ಸ್ಥಾನಕ್ಕೇರಿದೆ.
ಏಷ್ಯಾಕಪ್‌ಗೆ ಆಯ್ಕೆ ಮಾಡಿರುವ ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಹ್ಯಾರಿಸ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಫಹೀಮ್ ಅಶ್ರಫ್ , ಹರಿಸ್ ರೌಫ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಶಾಹೀನ್ ಅಫ್ರಿದಿ, ಸೌದ್ ಶಕೀಲ್
ತಯ್ಯಬ್ ತಾಹಿರ್ (ಮೀಸಲು ಆಟಗಾರ)