ಗುರುವಾರ, ಸೆಪ್ಟೆಂಬರ್ 14ರಂದು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಮತ್ತೊಂದು ಸೂಪರ್ 4 ರೋಚಕ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸೆಣಸಾಡುತ್ತಿವೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡ ಮೊದಲು ಬೌಲಿಂಗ್ ಮಾಡಲಿದೆ.
ಆದರೆ, ಟಾಸ್ ನಡೆಯುವುದಕ್ಕೂ ಮುನ್ನ ಮಳೆ ಅಡ್ಡಿಪಡಿಸಿದ ಈ ಪಂದ್ಯದಲ್ಲಿ ಕಾರಣ ಓವರ್‌ಗಳನ್ನು ಕಡಿತಗೊಳಿಸಲಾಗಿದ್ದು, ಪ್ರತಿ ಇನ್ನಿಂಗ್ಸ್ 45 ಓವರ್ ಆಟ ನಡೆಯಲಿದೆ. ಮೊದಲ ಪವರ್ ಪ್ಲೇ 9 ಓವರ್ ಆಗಿರಲಿದೆ.

ಗಮನಾರ್ಹವಾಗಿ, ಉಭಯ ತಂಡಗಳಿಗೆ ಇದು ನಿರ್ಣಾಯಕ ಪಂದ್ಯವಾಗಿರುತ್ತದೆ. ಈ ಪಂದ್ಯದಲ್ಲಿ ಗೆದ್ದ ತಂಡ ಸೆಪ್ಟೆಂಬರ್ 17ರಂದು ನಡೆಯುವ ಫೈನಲ್‌ನಲ್ಲಿ ಭಾರತ ತಂಡದೆದುರು ಮುಖಾಮುಖಿಯಾಗಲಿದೆ.
ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಶ್ರೀಲಂಕಾ ತಂಡ 41 ರನ್‌ಗಳ ರೋಚಕ ಸೋಲಿನೊಂದಿಗೆ ಈ ಪಂದ್ಯಕ್ಕೆ ಬರುತ್ತಿದೆ. ಭಾರತವನ್ನು 213 ರನ್‌ಗಳಿಗೆ ಆಲೌಟ್ ಮಾಡಿ ಬೌಲಿಂಗ್‌ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಶ್ರೀಲಂಕಾ, ಬ್ಯಾಟಿಂಗ್‌ನಲ್ಲಿ ಮಕಾಡೆ ಮಲಗಿತು.
ಮತ್ತೊಂದೆಡೆ, ಸೋಮವಾರದಂದು ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ದಾಖಲೆಯ 228 ರನ್‌ಗಳ ಸೋಲಿನ ಹಣೆಪಟ್ಟಿಯೊಂದಿಗೆ ಈ ಪಂದ್ಯಕ್ಕೆ ಬರಲಿದೆ.
ಭಾರತ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ವಿಫಲವಾದ ಪಾಕಿಸ್ತಾನ ತಂಡ, ಇದೀಗ ಗಾಯದ ಹೊಡೆತಕ್ಕೆ ತುತ್ತಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಪ್ರಮುಖ 5 ಬದಲಾವಣೆಗಳನ್ನು ಮಾಡಿದೆ.
ಇನ್ನು ಶ್ರೀಲಂಕಾ ತಂಡದಲ್ಲಿಯೂ ಎರಡು ಪದಲಾವಣೆ ಮಾಡಲಾಗಿದ್ದು, ಕುಸನಾ ರಜಿತ ಬದಲಿಗೆ ಪ್ರಮೋದ್ ಮಧುಶನ್ ಅವಕಾಶ ಪಡೆದಿದ್ದರೆ, ದಿಮುತ್ ಕರುಣಾರತ್ನೆ ಬದಲಿಗೆ ಕುಸಾಲ್ ಜನಿತ್ ಸ್ಥಾನ ಪಡೆದಿದ್ದಾರೆ.
ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಫೈನಲ್‌ನಲ್ಲಿ ಎರಡನೇ ಸ್ಥಾನವನ್ನು ಖಚಿತಪಡಿಸಕೊಳ್ಳಲು ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸಜ್ಜಾಗಿವೆ. ಸೆಪ್ಟೆಂಬರ್ 17ರಂದು 2023ರ ಏಷ್ಯಾ ಕಪ್ ಫೈನಲ್ ಪಂದ್ಯ ನಡೆಯಲಿದೆ.
ಪಾಕಿಸ್ತಾನ: ಮೊಹಮ್ಮದ್ ಹ್ಯಾರಿಸ್, ಫಖರ್ ಜಮಾನ್, ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಬ್ದುಲ್ಲಾ ಶಫಿಕ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ನವಾಜ್, ಶಾಹೀನ್ ಶಾ ಆಫ್ರಿದಿ, ಮೊಹಮ್ಮದ್ ವಾಸಿಂ, ಜಮಾನ್ ಖಾನ್.
ಶ್ರೀಲಂಕಾ: ಪಾಥುಮ್ ನಿಸ್ಸಾಂಕ, ಕುಸಾಲ್ ಪೆರೆರಾ, ಕುಸಾಲ್ ಮೆಂಡೀಸ್ (ವಿಕೆಟ್ ಕೀಪರ್), ಸದೀರ್ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ್ ಡಿ ಸಿಲ್ವಾ, ದಸುನ್ ಶನಕ (ನಾಯಕ), ದುನಿತ್ ವೆಲ್ಲಾಲಗೆ, ಮಹೀಶ್ ತೀಕ್ಷಣ, ಪ್ರಮೋದ್ ಮಧುಶನ್, ಮಹೀಶ ಪತಿರಾಣ, ಕುಸಾಲ್ ಜನಿತ್.