ಶನಿವಾರ, ಸೆಪ್ಟೆಂಬರ್ 2ರಂದು ಕ್ಯಾಂಡಿಯ ಪಲ್ಲೆಕೆಲ್ಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯಕ್ಕೆ ಮಳೆ ವಿಲನ್ ಆಗಿ ಕಾಡಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಒಂದೂ ಎಸೆತ ಕಾಣದೆ ರದ್ದುಗೊಂಡಿತು.
ಇದು ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಕಾದು ಕುಳಿತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಕೊನೆಗೆ ಉಭಯ ತಂಡಗಳು ತಲಾ ಒಂದೊಂದು ಅಂಕಗಳಿಗೆ ತೃಪ್ತಿಪಟ್ಟವು.

ಇದಕ್ಕೂ ಮುನ್ನ, ಟಾಸ್ ಗೆದ್ದ ಭಾರತ ತಂಡ ಮೊದಲ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ ಸ್ಕೋರ್‌ಬೋರ್ಡ್‌ನಲ್ಲಿ 266 ರನ್‌ಗಳನ್ನು ಕಲೆಹಾಕಿತು. ಇದರಲ್ಲಿ ಇಶಾನ್ ಕಿಶನ್ (82) ಮತ್ತು ಹಾರ್ದಿಕ್ ಪಾಂಡ್ಯ (87) ಕೊಡುಗೆ ಅಪಾರವಾಗಿತ್ತು.
ಇನ್ನು 2023ರ ಏಷ್ಯಾ ಕಪ್‌ನ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡುವ ಮೂಲಕ, ಆರಂಭಿಕ ಕುಸಿತದಿಂದ ಭಾರತ ತಂಡವನ್ನು ರಕ್ಷಿಸಿದ ಇಶಾನ್ ಕಿಶನ್ ಅವರನ್ನು ಮಾಜಿ ಕ್ರಿಕೆಟಿಗರಾದ ರವಿಶಾಸ್ತ್ರಿ ಮತ್ತು ವಾಸಿಂ ಅಕ್ರಮ್ ಶ್ಲಾಘಿಸಿದ್ದಾರೆ.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಇಶಾನ್ ಕಿಶನ್ ಅವರು ಹಾರ್ದಿಕ್ ಪಾಂಡ್ಯ ಜೊತೆಗೆ 5ನೇ ವಿಕೆಟ್‌ಗೆ 138 ರನ್‌ಗಳ ಅತ್ಯುತ್ತಮ ಜೊತೆಯಾಟ ನಿರ್ಮಿಸಿದರು.

ಅಗ್ರ ಕ್ರಮಾಂಕದಲ್ಲಿ ನಾಯಕ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಕಳಪೆಯಾಗಿ ಔಟಾಗಿ ಹಿಂತಿರುಗಿದ ಬಳಿಕ, ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ವಿಕೆಟ್ ಕಾಯ್ದುಕೊಳ್ಳುವುದರ ಜೊತೆಗೆ ಭಾರತದ ಸ್ಕೋರ್ ಬೋರ್ಡ್‌ನಲ್ಲಿ ರನ್ ಹೆಚ್ಚಿಸಿದರು.
5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಇಶಾನ್ ಕಿಶನ್ ನಿಧಾನಗತಿ ಇನ್ನಿಂಗ್ಸ್ ಆರಂಭಿಸಿ 81 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 82 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 90 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 87 ರನ್ ಬಾರಿಸಿದರು.
ಭಾರತೀಯ ಎಡಗೈ ಬ್ಯಾಟರ್ ಬಗ್ಗೆ ಮಾತನಾಡಿದ ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್, ಇಶಾನ್ ಕಿಶನ್ ಈ ಇನ್ನಿಂಗ್ಸ್‌ನಿಂದ ಸಾಕಷ್ಟು ಆತ್ಮವಿಶ್ವಾಸವನ್ನು ಗಳಿಸಿಕೊಂಡಿದ್ದಾರೆ ಎಂದು ಹೇಳಿದರು.
"ಈ ಇನ್ನಿಂಗ್ಸ್ ಇಶಾನ್ ಕಿಶನ್‌ಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಎಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡಬಹುದು ಎಂಬ ಆತ್ಮವಿಶ್ವಾಸವನ್ನು ನೀಡುತ್ತದೆ. ಏಕದಿನ ಕ್ರಿಕೆಟ್‌ನಲ್ಲಿ 4ನೇ ಕ್ರಮಾಂಕವು ಅತ್ಯಂತ ಪ್ರಮುಖವಾಗಿದೆ. ಕಿಶನ್ ವೇಗವನ್ನು ನಿಭಾಯಿಸಿದ ರೀತಿ ಅದ್ಭುತವಾಗಿತ್ತು. ಪಾಕಿಸ್ತಾನ ವಿಶ್ವದ ಅತ್ಯುತ್ತಮ ಬೌಲಿಂಗ್ ದಾಳಿಗಳಲ್ಲಿ ಒಂದಾಗಿದೆ. ಆದರೂ ಇಶಾನ್ ಕಿಶನ್ ಕೆಲವು ಶಾಟ್‌ಗಳನ್ನು ಆಡಿದ ರೀತಿ ಅದ್ಭುತವಾಗಿದೆ," ಎಂದು ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ವಾಸಿಂ ಅಕ್ರಮ್ ತಿಳಿಸಿದರು.
ಇದೇ ವೇಳೆ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ಈ ಹಿಂದೆ ಭಾರತೀಯ ಬ್ಯಾಟಿಂಗ್ ಕ್ರಮಾಂಕದ ಅಗ್ರ 7ರಲ್ಲಿ ಮೂವರು ಎಡಗೈ ಬ್ಯಾಟರ್‌ಗಳನ್ನು ಆಡಿಸುವ ಬಗ್ಗೆ ಸಲಹೆ ನೀಡಿದ್ದೆ. ಇದು 2023ರ ಏಕದಿನ ವಿಶ್ವಕಪ್ ಭಾರತ ತಂಡಕ್ಕೆ ಇಶಾನ್ ಕಿಶನ್ ಅವರ ಒತ್ತಡ ಎಂದು ಹೇಳಿದರು.
"ಇಶಾನ್ ಕಿಶನ್ ಅವರು ಏಕದಿನ ವಿಶ್ವಕಪ್‌ಗಾಗಿ ಭಾರತ ತಂಡಕ್ಕೆ ಒತ್ತಡ ಹೇರುತ್ತಿದ್ದಾರೆ. ಅವರು ಹೊಂದಿಕೊಳ್ಳುವ ಅಗತ್ಯವಿದೆ. ಕೆಲವು ತಂಡಗಳ ವಿರುದ್ಧ ಹೆಚ್ಚುವರಿ ಎಡಗೈ ಆಟಗಾರನ ಅಗತ್ಯವಿರುತ್ತದೆ. ಕೆಎಲ್ ರಾಹುಲ್ ಅವರಂತಹ ಉತ್ತಮ ಆಟಗಾರನನ್ನು ನೀವು ಹೊಂದಿದ್ದರೂ ಸಹ, ಭಾರತ ತಮ್ಮ ಆಯ್ಕೆಗಳನ್ನು ಮುಕ್ತವಾಗಿಟ್ಟುಕೊಳ್ಳಬೇಕು," ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟರು.
ಇನ್ನು ಸತತ ನಾಲ್ಕು ಏಕದಿನ ಪಂದ್ಯಗಳಲ್ಲಿ ಇಶಾನ್ ಕಿಶನ್ ಅವರ ನಾಲ್ಕನೇ ಅರ್ಧಶತಕವಾಗಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೂರು ಅರ್ಧಶತಕಗಳನ್ನು ಬಾರಿಸಿದ್ದರು. ಆಗ ಭಾರತ 2-1 ಅಂತರದಲ್ಲಿ ಸರಣಿ ಗೆಲುವು ಸಾಧಿಸಿತ್ತು.
ಇಶಾನ್ ಕಿಶನ್ ಕಠಿಣ ಪರಿಸ್ಥಿತಿಯಲ್ಲಿ ಬ್ಯಾಟ್‌ನೊಂದಿಗೆ ಭಾರತ ತಂಡಕ್ಕೆ ನೆರವಾಗಿದ್ದಾರೆ. ಅದೇ ರೀತಿ ಪಾಕಿಸ್ತಾನದ ವಿರುದ್ಧ ಕಿಶನ್ ಸಂಪೂರ್ಣವಾಗಿ ವಿಭಿನ್ನ ಪಾತ್ರವನ್ನು ವಹಿಸಿದರು ಮತ್ತು ಕಷ್ಟಕರ ಪರಿಸ್ಥಿತಿಗಳಲ್ಲಿ ಭಾರತವನ್ನು ಸವಾಲಿನ ಮೊತ್ತಕ್ಕೆ ಮಾರ್ಗದರ್ಶನ ಮಾಡಿದರು.