ರುವಾರ, ಸೆಪ್ಟೆಂಬರ್ 14ರಂದು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಮತ್ತೊಂದು ಸೂಪರ್ 4 ರೋಚಕ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾ ತಂಡದ ವಿರುದ್ಧ ಸವಾಲಿನ ಮೊತ್ತ ಕಲೆಹಾಕಿದೆ.
ಈ ಪಂದ್ಯದಲ್ಲಿ ಟಾಸ್ ನಡೆಯುವುದಕ್ಕೂ ಮುನ್ನ ಮತ್ತು ಆಟದ ಮಧ್ಯದಲ್ಲಿ ಮಳೆ ಅಡ್ಡಿಪಡಿಸಿದ ಕಾರಣ, ಓವರ್‌ಗಳನ್ನು ಕಡಿತಗೊಳಿಸಿ, ಪ್ರತಿ ಇನ್ನಿಂಗ್ಸ್‌ಗೆ 42 ಓವರ್‌ಗಳನ್ನು ನಿಗದಿಪಡಿಸಲಾಯಿತು.

ಮಳೆ-ಬಾಧಿತ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 42 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್‌ಗಳನ್ನು ಗಳಿಸಿದ್ದು, ಶ್ರೀಲಂಕಾ ತಂಡಕ್ಕೆ 253 ರನ್‌ಗಳ ಗೆಲುವಿನ ಗುರಿ ನೀಡಿದೆ.
ಒಂದು ಹಂತದಲ್ಲಿ 130 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಆಸರೆಯಾಗಿದ್ದು, ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಕರ್ ಅಹ್ಮದ್. ಈ ಜೋಡಿ 6ನೇ ವಿಕೆಟ್‌ಗೆ 108 ರನ್‌ಗಳ ಜೊತೆಯಾಟ ನೀಡಿ ತಂಡದ ಮೊತ್ತ 250ರ ಗಡಿ ದಾಟಲು ನೆರವಾದರು.
ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಅಬ್ದುಲ್ಲಾ ಶಫಿಕ್ 69 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 52 ರನ್ ಗಳಿಸಿದರೆ, ಫಖರ್ ಜಮಾನ್ ಕೇವಲ 4 ರನ್ ಗಳಿಸಿ ಔಟಾದರು.
ನಂತರ ಬಂದ ನಾಯಕ ಬಾಬರ್ ಅಜಂ 35 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಾಯದಿಂದ 29 ರನ್ ಗಳಿಸಿದರೆ, ಮೊಹಮ್ದ ಹ್ಯಾರಿಸ್ ಕೇವಲ 3 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಮೊಹಮ್ಮದ್ ನವಾಜ್ 12 ರನ್ ಮಾತ್ರ ಗಳಿಸಿದರು.

ಇನ್ನು ಮೊಹಮ್ಮದ್ ರಿಜ್ವಾನ್ 73 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಮೇತ 86 ರನ್ ಬಾರಿಸಿದರು. ಇವರಿಗೆ ಸಾಥ್ ನೀಡಿದ ಇಫ್ತಿಕರ್ ಅಹ್ಮದ್ 40 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 47 ರನ್ ಒಟ್ಟುಗೂಡಿಸಿದರು.
ಇನ್ನು ಬೌಲಿಂಗ್‌ನಲ್ಲಿ ಶ್ರೀಲಂಕಾ ತಂಡದ ಪರ ಮತೀಶ ಪತಿರಾಣ 8 ಓವರ್‌ಗಳಲ್ಲಿ 65 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಪ್ರಮೋದ್ ಮಧುಶನ್ 7 ಓವರ್‌ಗಳಲ್ಲಿ 58 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಮಹೀಶ್ ತೀಕ್ಷಣ ಮತ್ತು ದುನಿತ್ ವೆಲ್ಲಾಲಗೆ ತಲಾ ಒಂದೊಂದು ವಿಕೆಟ್ ಪಡೆದರು.