ಗುರುವಾರ, ಸೆಪ್ಟೆಂಬರ್ 14ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಗೆಲ್ಲಲೇಬೇಕಾದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯಕ್ಕಾಗಿ ಪಾಕಿಸ್ತಾನ ತಂಡವು ತನ್ನ ಆಡುವ 11ರ ಬಳಗದಲ್ಲಿ ಪ್ರಮುಖ 5 ಬದಲಾವಣೆಗಳನ್ನು ಮಾಡಿದೆ.
ಎರಡು ಬಾರಿಯ ಏಷ್ಯಾ ಕಪ್ ಚಾಂಪಿಯನ್ ಪಾಕಿಸ್ತಾನ ತಂಡ ತಮ್ಮ ಪಂದ್ಯದ ಮುನ್ನಾದಿನದಂದು ಆಡುವ 11ರ ಬಳಗವನ್ನು ಪ್ರಕಟಿಸುವ ಅಭ್ಯಾಸವನ್ನು ಮುಂದುವರೆಸಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಭಾರತ ವಿರುದ್ಧ ಭಾರಿ ಸೋಲಿನ ನಂತರ, ಕೆಲವು ಬಲವಂತದ ಬದಲಾವಣೆ ಮಾಡಿದರೆ, ಒಂದೆರಡು ಉದ್ದೇಶಪೂರ್ವಕವಾಗಿ ಹೊರಗಿಟ್ಟಂತೆ ಕಾಣುತ್ತಿದೆ.

ಭುಜದ ಗಾಯದಿಂದಾಗಿ ಏಷ್ಯಾ ಕಪ್ ಪಂದ್ಯಾವಳಿಯ ಉಳಿದ ಪಂದ್ಯಗಳಿಂದ ಹೊರಬಿದ್ದಿರುವ ನಸೀಮ್ ಶಾ ಬದಲಿಗೆ ಜಮಾನ್ ಖಾನ್ ಅವರನ್ನು ಪಾಕಿಸ್ತಾನ ತಂಡಕ್ಕೆ ಸೇರಿಸಿಕೊಂಡಿದೆ.
ಭಾರತ ವಿರುದ್ಧ 228 ರನ್‌ಗಳ ಸೋಲಿನ ವೇಳೆ ಗಾಯಗೊಂಡ ಸ್ಟಾರ್ ವೇಗಿ ಹ್ಯಾರಿಸ್ ರೌಫ್ ಚೇತರಿಸಿಕೊಳ್ಳುತ್ತಿರುವ ಕಾರಣದಿಂದ ಪಾಕಿಸ್ತಾನ ಮುನ್ನೆಚ್ಚರಿಕೆ ಕ್ರಮವಾಗಿ ವಿಶ್ರಾಂತಿ ನೀಡಿದೆ.
ಇನ್ನು ಹ್ಯಾರಿಸ್ ರೌಫ್ ಬದಲಿಗೆ ಮೊಹಮ್ಮದ್ ವಾಸಿಮ್ ಜೂನಿಯರ್ ಅವರನ್ನು ಪಾಕಿಸ್ತಾನದ ಆಡುವ 11ರ ಬಳಗದಲ್ಲಿ ಹೆಸರಿಸಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ತಮ್ಮ ಕಣ್ಣಿಗೆ ಪೆಟ್ಟು ಮಾಡಿಕೊಂಡ ಅಘಾ ಸಲ್ಮಾನ್ ಬದಲಿಗೆ ಸೌದ್ ಶಕೀಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಯ್ಕೆ ಮಾಡಲಾಗಿದೆ.
ಇದೇ ವೇಳೆ ಗುರುವಾರ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಸ್ಪಿನ್ ಸ್ನೇಹಿ ಪಿಚ್‌ಗೆ ಹೊಂದಿಕೊಳ್ಳಲು ಪಾಕಿಸ್ತಾನ ತಂಡವು ಮೊಹಮ್ಮದ್ ನವಾಜ್ ಅವರಲ್ಲಿ ಹೆಚ್ಚುವರಿ ಸ್ಪಿನ್ನರ್‌ನನ್ನು ಹುಡುಕಿಕೊಂಡ ಕಾರಣ, ಫಹೀಮ್ ಅಶ್ರಫ್ ಅವರನ್ನು ಆಡುವ ಬಳಗದಿಂದ ಕೈಬಿಡಲಾಗಿದೆ.
ಗಮನಾರ್ಹವಾಗಿ, ಸತತ ವೈಫಲ್ಯಗಳ ನಂತರ ಆರಂಭಿಕ ಬ್ಯಾಟರ್ ಫಖರ್ ಜಮಾನ್ ಅವರನ್ನು ಕೈಬಿಟ್ಟಿದ್ದು, ಮೊಹಮ್ಮದ್ ಹ್ಯಾರಿಸ್ ಅವರನ್ನು ಪಾಕಿಸ್ತಾನ ಮರಳಿ ಕರೆತಂದಿದೆ.
ಮೊಹಮ್ಮದ್ ಹ್ಯಾರಿಸ್, ಇಮಾಮ್-ಉಲ್-ಹಕ್, ಬಾಬರ್ ಅಜಂ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ನವಾಜ್, ಶಾಹೀನ್ ಶಾ ಆಫ್ರಿದಿ, ಮೊಹಮ್ಮದ್ ವಾಸಿಂ, ಜಮಾನ್ ಖಾನ್.

2023ರ ಏಷ್ಯಾ ಕಪ್‌ನಲ್ಲಿ 4 ಪಂದ್ಯಗಳಲ್ಲಿ ಫಖರ್ ಜಮಾನ್ ಕೇವಲ 61 ರನ್ ಗಳಿಸಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಅವರ ಮೇಲಿಟ್ಟಿದ್ದ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲರಾಗಿದ್ದಾರೆ.
ಬಾಂಗ್ಲಾದೇಶ ತಂಡದ ವಿರುದ್ಧ 7 ವಿಕೆಟ್‌ಗಳ ಗೆಲುವಿನೊಂದಿಗೆ ಸೂಪರ್ 4 ಅಭಿಯಾನವನ್ನು ಆರಂಭಿಸಿದ್ದ ಪಾಕಿಸ್ತಾನ ತಂಡ, ಭಾರತ ವಿರುದ್ಧ 32 ಓವರ್‌ಗಳಲ್ಲಿ ಕೇವಲ 128 ರನ್‌ಗಳಿಗೆ ಆಲೌಟ್ ಆಯಿತು. ಏಕದಿನ ಕ್ರಿಕೆಟ್‌ನಲ್ಲಿ ಭಾರತ ವಿರುದ್ಧ ರನ್‌ಗಳ ಅಂತರದ ವಿಷಯದಲ್ಲಿ ಸಾರ್ವಕಾಲಿಕ ಬೃಹತ್ ಸೋಲು ಅನುಭವಿಸಿತು.
ಇನ್ನು ಸ್ಪಿನ್ ಸ್ನೇಹಿ ಕೊಲಂಬೊ ಪಿಚ್‌ನಲ್ಲಿ ಶ್ರೀಲಂಕಾ ವಿರುದ್ಧ 41 ರನ್‌ಗಳ ಗೆಲುವು ದಾಖಲಿಸಿದ ಬಳಿಕ ಭಾರತ ತಂಡ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಅದೇ ರೀತಿ ಪಾಕಿಸ್ತಾನ ಫೈನಲ್‌ಗೆ ಅರ್ಹತೆ ಪಡೆದು ಭಾರತ ವಿರುದ್ಧ ಮತ್ತೊಂದು ಪೈಪೋಟಿ ನೀಡಲು ಗುರುವಾರದ ಪಂದ್ಯದಲ್ಲಿ ಮಾಡು ಇಲ್ಲವೇ ಮಡಿ ಹೋರಾಟ ನೀಡಬೇಕಿದೆ.
ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ ರದ್ದುಗೊಂಡರೆ ಮತ್ತು ಉಭಯ ತಂಡಗಳು ಅಂಕಗಳನ್ನು ಹಂಚಿಕೊಂಡರೆ, ಶ್ರೀಲಂಕಾ ಅವರ ಉತ್ತಮ ನೆಟ್ ರನ್‌ರೇಟ್ ಆಧಾರದಲ್ಲಿ ಫೈನಲ್‌ಗೆ ಅರ್ಹತೆ ಪಡೆಯಲಿದೆ.