ಏಷ್ಯಾಕಪ್‌ಗೆ ಸೋಮವಾರ ಮಧ್ಯಾಹ್ನ ಟೀಮ್ ಇಂಡಿಯಾದ 17 ಆಟಗಾರರ ಪಡೆಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ತಂಡದಲ್ಲಿ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರನ್ನು ಆಡುವ ಬಳಗದಿಂದ ಕೈಬಿಟ್ಟಿರುವುದು ಈಗ ಭಾರತೀಯ ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರ ಸರಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ ಇನ್ನೂ ಕೆಲವರು ನಿರ್ಧಾರವನ್ನು ಟೀಕಿಸಿದ್ದಾರೆ.
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿರುವಾಗ 17 ಆಟಗಾರರ ಪಡೆಯನ್ನು ಆಯ್ಕೆ ಮಾಡಲಾಗಿದೆ. ನಾಯಕ ನಾಯಕ ರೋಹಿತ್ ಶರ್ಮಾ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ತಂಡವನ್ನು ಘೋಷಣೆ ಮಾಡಿದರು. ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ಇಬ್ಬರು ಕೂಡ ಕಮ್‌ಬ್ಯಾಕ್ ಮಾಡಿದ್ದರೆ ಚಾಹಲ್‌ಗೆ ಅವಕಾಶ ದೊರೆತಿಲ್ಲ. ಆದರೆ ಕುಲ್‌ದೀಪ್ ಯಾದವ್‌ಗೆ ಅವಕಾಶ ದೊರೆತಿದೆ. ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೆ ಕ್ರಿಕೆಟ್ ದಿಗ್ಗಜರು ಕೂಡ ಈ ವಿಚಾರವಾಗಿ ತಮ್ಮ ತಮ್ಮ ಅನಿಸಿಕಯನ್ನು ಹಂಚಿಕೊಳ್ಳುತ್ತಿದ್ದಾರೆ.

ಚಾಹಲ್ ಅವರನ್ನು ತಂಡದಿಂದ ಹೊರಗಿಟ್ಟ ನಿರ್ಧಾರದ ಬಗ್ಗೆ ಭಾರತದ ದಿಗ್ಗಜ ಆಟಗಾರರಾದ ಸುನಿಲ್ ಗವಾಸ್ಕರ್, ಸೌರವ್ ಗಂಗೂಲಿ ಹಾಗೂ ಇರ್ಫಾನ್ ಪಠಾಣ್ ತಮ್ಮ ಅನಿಕೆಯನ್ನು ವ್ಯಕ್ತಪಡಿಸಿದ್ದಾರೆ. ಚಾಹಲ್ ಅವರನ್ನು ಆಯ್ಕೆ ಮಾಡದ ಬಗ್ಗೆ ಸೌರವ್ ಗಂಗೂಲಿ ಹಾಗೂ ಇರ್ಫಾನ್ ಪಠಾಣ್ ಇಬ್ಬರು ಕೂಡ ಪ್ರಶ್ನೆ ಮಾಡಿದ್ದರೆ ಸುನಿಲ್ ಗವಾಸ್ಕರ್ ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.
ಹಿಂದೂಸ್ತಾನ್ ಟೈಮ್ಸ್‌ಗೆ ಸಂದರ್ಶನ ನೀಡಿದ್ದ ಸೌರವ್ ಗಂಗೂಲಿ ಈ ಸಂದರ್ಭದಲ್ಲಿ "ನಾನಾಗಿದ್ದರೆ ಯುಜುವೇಂದ್ರ ಚಾಹಲ್ ಅವರನ್ನು ಆಯ್ಕೆ ಮಾಡಿರುತ್ತಿದ್ದೆ. ರಿಸ್ಟ್ ಸ್ಪಿನ್ನರ್‌ಗಳನ್ನೇ ನಾನು ಆಯ್ಕೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಚಾಹಲ್ ಹೊರಗಿಟ್ಟ ನಿರ್ಧಾರಕ್ಕೆ ಅಸಮ್ಮತಿ ಸೂಚಿಸಿದ್ದಾರೆ.
ಇನ್ನು ಇರ್ಫಾನ್ ಪಠಾಣ್ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ದು ಅಭಿಮಾನಿಗಳ ಅಭಿಪ್ರಾಯ ಕೇಳಿದ್ದಾರೆ. ಈ ತಂಡದಲಲ್ಇ ಬ್ಯಾಟಿಂಗ್‌ನಲ್ಲಿಯೂ ಕೊಡುಗೆ ನೀಡಬಲ್ಲ ಹೆಚ್ಚಿನ ಬೌಲರ್‌ಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಪಠಾಣ್ ಅಭಿಪ್ರಾಯ ಪಟ್ಟಿದ್ದಾರೆ.
"ಬೂಮ್ರಾ ಹಾಗೂ ಪ್ರಸಿದ್ಧ್ ಕೃಷ್ಣ ಸುದೀರ್ಘ ಕಾಲದ ಬಳಿಕ ವಾಪಸ್ ಆಗುತ್ತಿರುವುದು ಆಯ್ಕೆಗಾರರ ಆತಂಕಕ್ಕೆ ಕಾರಣವಾಗಿದೆ. ಅದೇ ಕಾರಣದಿಂದಾಗಿ ಭಾರತ ತಂಡದಲ್ಲಿ ಬ್ಯಾಟಿಂಗ್‌ನಲ್ಲಿಯೂ ಕೊಡುಗೆ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಹೆಚ್ಚಿನ ಬೌಲರ್‌ಗಳು ಇದ್ದಾರೆ. ನಾನಾಗಿದ್ದರೆ ನನ್ನ ಸ್ಕ್ವಾಡ್‌ನಲ್ಲಿ ಚಾಹಲ್ ಅವರನ್ನು ಹೊಂದಲು ಬಯಸುತ್ತಿದ್ದೆ. ನಿಮಗೇನನಿಸುತ್ತದೆ?" ಎಂದು ಇರ್ಫಾನ್ ಪಠಾಣ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಆದರೆ ಚಾಹಲ್ ಅವರನ್ನು ಕೈಬಿಡುವ ನಿರ್ಧಾರವನ್ನು ಸುನಿಲ್ ಗವಾಸ್ಕರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಕುಲ್‌ದೀಪ್ ಯಾದವ್ ಬ್ಯಾಟಿಂಗ್‌ನಲ್ಲಿಯೂ ಕೊಡುಗೆ ನೀಡಬಲ್ಲ ಸಾಮರ್ಥ್ಯಹೊಂದಿರುವ ಕಾರಣ ಅವರಿಗೆ ಅವಕಾಶ ದೊರೆತಿದೆ ಎಂದಿದ್ದಾರೆ. "ಕೆಲ ಸಂದರ್ಭಗಳಲ್ಲಿ ತಂಡದ ಹೊಂದಾಣಿಕೆಯನ್ನು ಗಮನಿಸಿಕೊಳ್ಳಬೇಕಾಗುತ್ತದೆ. ಕುಲ್‌ದೀಪ್ ಯಾದವ್ ಕೆಳ ಕ್ರಮಾಂಕದಲ್ಲಿ ಸಮರ್ಥವಾಗಿ ಬ್ಯಾಟಿಂಗ್ ನಡೆಸಬಲ್ಲ ಆಟಗಾರ ಎನ್ನುವುದನ್ನು ನೀವು ಹೇಳಬಹುದು. ಹಾಗಾಗಿಯೇ ಚಾಹಲ್ ಅವರಿಗಿಂತ ಕುಲ್‌ದೀಪ್ ಸೂಕ್ತ ಎನಿಸಿರಬಹುದು. ಅಲ್ಲದೆ ಕುಲ್‌ದೀಪ್ ಎಡಗೈ ಆಟಗಾರ ಆಗಿರುವ ಕಾರಣ ಅದು ಕೂಡ ಭಿನ್ನತೆ ನೀಡಲಿದೆ" ಎಂದಿದ್ದಾರೆ.
ಇನ್ನು ರೋಹಿತ್ ಶರ್ಮಾ ಮಾಧ್ಯಮ ಗೋಷ್ಠಿಯಲ್ಲಿ ಚಾಹಲ್ ಸೇರಿದಂತೆ ಕೆಲ ಆಟಗಾರರಿಗೆ ವಿಶ್ವಕಪ್‌ನ ಬಾಗಿಲು ಇನ್ನೂ ಮುಚ್ಚಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. "ಈ ಹಂತದಲ್ಲಿ ಯಾರಿಗೂ ಕೂಡ ಅವಕಾಶ ಮುಚ್ಚಿಲ್ಲ. ಯಾರು ಯಾವಾಗ ಬೇಕಾದರೂ ಅವಕಾಶ ಗಿಟ್ಟಿಸಿಕೊಳ್ಳಬಹುದು. ಚಾಹಲ್ ಸಾಕಷ್ಟು ವೈಟ್ ಬಾಲ್ ಕ್ರಿಕೆಟ್ ಆಡಿರುವ ಆಟಗಾರ. ವಿಶ್ವಕಪ್‌ಗೆ ಅವರ ಅಗತ್ಯ ನಮಗಿದೆ ಎಂದು ಅನಿಸಿದರೆ ಅವರನ್ನು ತಂಡದೊಳಗೆ ಸೇರಿಸಿಕೊಳ್ಳುವ ಪ್ರಯತ್ನ ನಡೆಸುತ್ತೇವೆ. ಇದು ಅಶ್ವಿನ್ ಹಾಗೂ ವಾಶಿಂಗ್ಟನ್ ಸುಂದರ್ ವಿಚಾರದಲ್ಲಿಯೂ ಆಗುತ್ತದೆ" ಎಂದಿದ್ದಾರೆ ರೋಹಿತ್ ಶರ್ಮಾ.