
ನವದೆಹಲಿ, ಜುಲೈ 9: ಈ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಯಲಿದ್ದ ಏಷ್ಯಾ ಕಪ್ ಕ್ರಿಕೆಟ್ ಟೂರ್ನಮೆಂಟ್ ಮುಂದೂಡಲ್ಪಟ್ಟಿದೆ. ಕೊರೊನಾವೈರಸ್ ಕಾರಣದಿಂದಾಗಿ ಈ ವರ್ಷದ ಏಷ್ಯಾಕಪ್, 2021ರ ಜೂನ್ ವರೆಗೆ ಮುಂದೂಡಲಾಗಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಗುರುವಾರ ಘೋಷಿಸಿದೆ.
ಏಷ್ಯಾ ಕಪ್ ಪಂದ್ಯಾವಳಿಗೆ ಕೊರೊನಾವೈರಸ್ ಸಾಂಕ್ರಾಮಿಕದ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಎಸಿಸಿಯ ಕಾರ್ಯನಿರ್ವಾಹಕ ಮಂಡಳಿ ಅನೇಕ ಸಂದರ್ಭಗಳಲ್ಲಿ ಸಭೆ ಸೇರಿ ಚರ್ಚಿಸಿತ್ತು. ಕೊನೆಗೆ ಪಂದ್ಯಾವಳಿಯನ್ನು ಮುಂದೂಡಲು ನಿರ್ಧರಿಸಿದೆ ಎನ್ನಲಾಗಿದೆ.
ನಿಜವಾಗಿ ಪಾಕಿಸ್ತಾನ ಈ ಬಾರಿಯ ಏಷ್ಯಾಕಪ್ ಆತಿಥ್ಯವನ್ನು ವಹಿಸಿಕೊಂಡಿತ್ತು. ಆದರೆ ಸುರಕ್ಷತೆ ದೃಷ್ಟಿಯಿಂದ ಟೂರ್ನಿಯನ್ನು ಮುಂದೂಡಲಾಗಿರುವುದರಿಂದ ಮುಂದಿನ ಬಾರಿಯ ಏಷ್ಯಾಕಪ್ ಆತಿಥ್ಯ ಶ್ರೀಲಂಕಾ ವಹಿಸಿಕೊಳ್ಳುವ ಆಸಕ್ತಿ ತೋರಿದೆ ಎಂದು ತಿಳಿದುಬಂದಿದೆ.
ಮರು ವೇಳಾಪಟ್ಟಿಯಂತೆ ನಡೆಯಲಿರುವ ಜೂನ್ 2021ರ ಏಷ್ಯಾಕಪ್ ಆತಿಥ್ಯವನ್ನು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ವಹಿಸಿಕೊಳ್ಳಲಿದೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ 2022ರ ಏಷ್ಯಾಕಪ್ ಆಯೋಜನೆಯ ಜವಾಬ್ದಾರಿ ಹೊತ್ತುಕೊಂಡಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಾಹಿತಿ ನೀಡಿದೆ.