ಏಷ್ಯಾಕಪ್: ಭಾರತ-ಪಾಕಿಸ್ತಾನ ಮುಖಾಮುಖಿಯ ಕುತೂಹಲಕಾರಿ ಅಂಶಗಳಿವು!

ನವದೆಹಲಿ, ಸೆಪ್ಟೆಂಬರ್ 17: ಭಾರತ-ಪಾಕಿಸ್ತಾನ ತಂಡಗಳು ಕ್ರೀಡೆಯಲ್ಲಿ ಮುಖಾಮುಖಿಯಾದರೆ ಅಲ್ಲಿ ಇನ್ನಿಲ್ಲದ ರೋಚಕತೆ ತಂತಾನೇ ಸೃಷ್ಟಿಗೊಳ್ಳುತ್ತದೆ. ಏಷ್ಯಾಕಪ್ ಕ್ರಿಕೆಟ್ ನಲ್ಲೂ ಹೀಗೆಯೆ. ಯುಎಇಯಲ್ಲಿ 2018 ಏಷ್ಯಾಕಪ್ ಕ್ರಿಕೆಟ್ ಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಬುಧವಾರ (ಸೆಪ್ಟೆಂಬರ್ 19) ಮೊದಲ ಮುಖಾಮುಖಿಯಾಗಲಿವೆ.
ಈ ಬಾರಿಯ ಏಷ್ಯಾಕಪ್ ನಲ್ಲಿ ಗ್ರೂಪ್ ಎಯಲ್ಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು 5ನೇ ಪಂದ್ಯದಲ್ಲಿ ಮೊದಲು ಸೆಣಸಾಡಲಿದ್ದಾವೆ. ಇಂಗ್ಲೆಂಡ್ ನಲ್ಲಿ 2017ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಕಡೆಯಸಾರಿ ಭಾರತ, ಪಾಕ್ ಎದುರು ಕಾದಾಡಿತ್ತು.

ಏಷ್ಯಾಕಪ್ ಹಾಲಿ ಚಾಂಪಿಯನ್ ಆಗಿರುವ ಭಾರತದ ನಾಯಕತ್ವವನ್ನು ಈ ಸಾರಿ ರೋಹಿತ್ ಶರ್ಮಾ ವಹಿಸಿದ್ದಾರೆ. ಸೆಪ್ಟೆಂಬರ್ 19ರಂದು ಭಾರತ-ಪಾಕಿಸ್ತಾನ ಮೊದಲ ಮುಖಾಮುಖಿಗೂ ಮೊದಲು ಏಷ್ಯಾಕಪ್ ಈ ಹಿಂದಿನ ಇತ್ತಂಡಗಳ ಪರಸ್ಪರ ಕಾದಾಟದೆಡೆಗೆ ಒಂದು ಇಣುಕುನೋಟ ಹರಿಸೋಣ.
ಏಷ್ಯಾಕಪ್ ಕ್ರಿಕೆಟ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಟ್ಟು 11 ಸಾರಿ ಮುಖಾಮುಖಿಯಾಗಿವೆ. ಇದರಲ್ಲಿ ನೀಲಿಕಲಿಗಳ ಬಳಗ 6 ಬಾರಿ ಪಂದ್ಯ ಗೆದ್ದರೆ, ಹಸಿರು ತಂಡ 4 ಸಾರಿ ಗೆಲುವು ತನ್ನದಾಗಿಸಿಕೊಂಡಿದೆ. ಒಂದು ಪಂದ್ಯ ರದ್ದಾಗಿದ್ದ ದಾಖಲೆ ಈ ಹಿಂದಿನದು.
1984 ರಲ್ಲಿ ಮೊದಲ ಏಷ್ಯಾಕಪ್ ಪಂದ್ಯದಲ್ಲಿ ಭಾರತ ತಂಡ ಪಾಕ್ ಎದುರು 54 ರನ್ ಜಯ ಗಳಿಸಿತ್ತು. ಮುಂದಿನ 1988ರ ಮುಖಾಮುಖಿಯಲ್ಲೂ ಭಾರತ, ಪಾಕ್ ತಂಡವನ್ನು 4 ವಿಕೆಟ್ ನಿಂದ ಮಣಿಸಿತ್ತು. ಆದರೆ 1995ರ ಹಣಾಹಣಿಯಲ್ಲಿ ಪಾಕಿಸ್ತಾನ 97 ರನ್ ಭರ್ಜರಿ ಜಯ ಗಳಿಸುವ ಮೂಲಕ ಮುಯ್ಯಿ ತೀರಿಸಿಕೊಂಡಿತ್ತು.
ಮುಂದೆ 1997ರಲ್ಲಿ ನಡೆದಿದ್ದ ಪಂದ್ಯ ಮಳೆಯ ಕಾರಣಕ್ಕೆ ರದ್ದಾಗಿತ್ತು. ಅದಾಗಿ 2000ನೇ ಇಸವಿಯಲ್ಲಿ ನಡೆದಿದ್ದ ಪಂದ್ಯ 44 ರನ್ ಗಳಿಂದ ಪಾಕಿಸ್ತಾನದ ವಶವಾಗಿತ್ತು. 2004ರಲ್ಲೂ ಭಾರತ ತಂಡ ಪಾಕ್ ಎದುರು 59 ರನ್ ನಿಂದ ಸೋಲನುಭವಿಸಿತ್ತು.
ಮತ್ತೆ ಗೆಲುವಿನ ಹಾದಿ ಹಿಡಿದ ಭಾರತ 2008ರ ಏಷ್ಯಾಕಪ್ ನಲ್ಲಿ 6 ವಿಕೆಟ್ ಜಯ ಸಾಧಿಸಿತ್ತು. 2010ರಲ್ಲೂ ಪಾಕ್ ತಂಡವನ್ನು 3 ವಿಕೆಟ್ ನಿಂದ ಸೋಲಿಸಿತ್ತು. 2012ರ ಪಂದ್ಯವೂ 6 ವಿಕೆಟ್ ನಿಂದ ಭಾರತದ ವಶವಾಗಿತ್ತು. 2014ರಲ್ಲಿ ಪಾಕಿಸ್ತಾನಕ್ಕೆ 1 ವಿಕೆಟ್ ರೋಚಕ ಗೆಲುವು ಲಭಿಸಿದ್ದರೆ, 2016ರ ಟಿ-20 ಪಂದ್ಯದಲ್ಲಿ ಭಾರತ ಮತ್ತೆ 5 ವಿಕೆಟ್ ಜಯ ತನ್ನದಾಗಿಸಿತ್ತು.
ಬ್ಯಾಟಿಂಗ್, ಬೌಲಿಂಗ್ ಪ್ರಾಬಲ್ಯವೂ ಕುತೂಹಲಕಾರಿಯೇ. ಭಾರತದ ವಿರಾಟ್ ಕೊಹ್ಲಿ ಅವರು ಪಾಕ್ ಎದುರು 2012ರಲ್ಲಿ 183 ರನ್ ಸಿಡಿಸಿದ್ದರೆ, ಪಾಕ್ ಆಟಗಾರ ಶೋಯೆಬ್ ಮಲ್ಲಿಕ್ ಭಾರತದೆದುರು 2004ರಲ್ಲಿ 143 ರನ್ ಚಚ್ಚಿದ್ದರು. ಪಾಕ್ ಕ್ರಿಕೆಟಿಗ ಆಕೀಬ್ ಜಾವೆದ್ 1995ರಲ್ಲಿ 19 ರನ್ನಿಗೆ 5 ವಿಕೆಟ್ ಕಬಳಿಸಿದ್ದರೆ, ಭಾರತದ ಪರ ಅರ್ಷದ್ ಆಯೂಬ್ 1988 ರಲ್ಲಿ 21 ರನ್ನಿಗೆ 5 ವಿಕೆಟ್ ಕೆಡವಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications