ಶನಿವಾರ, ಜುಲೈ 22ರಂದು ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ಮಹಿಳಾ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡ ಕಾರಣ, ಸರಣಿ 1-1 ಅಂತರದಲ್ಲಿ ಸಮಬಲಗೊಂಡಿತು.
ರೋಚಕವಾಗಿ ಟೈನಲ್ಲಿ ಮುಕ್ತಾಯಗೊಂಡಿದ್ದರಿಂದ ಉಭಯ ದೇಶಗಳ ಪ್ರೇಕ್ಷಕರಿಗೆ ಮೂರನೇ ಪಂದ್ಯ ನಿರಾಶೆಗೊಳಿಸಲಿಲ್ಲ. ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-1 ಅಂತರದಲ್ಲಿ ಹಂಚಿಕೊಂಡವು. ಆದರೆ ಕೊನೆಯ ಪಂದ್ಯದಲ್ಲಿ ನಡೆದ ಕೆಲವು ಘಟನೆಗಳು ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿವೆ.

ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ವೀಪ್ ಮಾಡಲು ಪ್ರಯತ್ನಿಸುತ್ತಿದ್ದಾಗ ಎಲ್‌ಬಿಡಬ್ಲ್ಯೂ ತೀರ್ಪಿಗೆ ಔಟಾದರು. ಆದರೆ, ಅಂಪೈರ್ ತೀರ್ಪನ್ನು ಭಾರತ ತಂಡದ ನಾಯಕಿ ವಿರೋಧಿಸಿದರು ಮತ್ತು ತನ್ನ ಬ್ಯಾಟ್‌ನಿಂದ ಸ್ಟಂಪ್‌ಗಳನ್ನು ಹೊಡೆಯುವ ಮೂಲಕ ತನ್ನ ಆಕ್ರೋಶವನ್ನು ಹೊರಹಾಕಿದರು.
ಕೋಪದಿಂದ ಪೆವಿಲಿಯನ್‌ಗೆ ಮರಳುವಾಗ 34 ವರ್ಷದ ಹರ್ಮನ್‌ಪ್ರೀತ್ ಕೌರ್ ಅವರು ಅಂಪೈರ್‌ರನ್ನು ತೆಗಳುತ್ತಿರುವುದು ಕಂಡುಬಂತು. ಪಂದ್ಯದ ನಂತರ ಅಂಪೈರಿಂಗ್ ಮಟ್ಟವನ್ನು ಕರುಣಾಜನಕ ಎಂದು ಹರ್ಮನ್‌ಪ್ರೀತ್ ಕೌರ್ ಬಹಿರಂಗವಾಗಿ ಟೀಕಿಸಿದರು.
ಬಳಿಕ, ಪ್ರಶಸ್ತಿ ವಿತರಣಾ ಸಮಾರಂಭದ ಫೋಟೋ ಸೆಷನ್‌ಗೆ ಬಾಂಗ್ಲಾದೇಶ ಮಹಿಳಾ ತಂಡವನ್ನು ಸೇರಲು ಅಂಪೈರ್‌ಗಳನ್ನು ಕರೆಯುವಂತೆ ಹರ್ಮನ್‌ಪ್ರೀತ್ ಕೌರ್ ವ್ಯಂಗ್ಯವಾಗಿ ಹೇಳಿದಳು.
ಭಾರತೀಯ ನಾಯಕಿಯ ವರ್ತನೆಗೆ ಬೇಸತ್ತ ಬಾಂಗ್ಲಾದೇಶ ತಂಡದ ನಾಯಕಿ ನಿಗರ್ ಸುಲ್ತಾನಾ ಅವರು ತನ್ನ ತಂಡದೊಂದಿಗೆ ಹೊರನಡೆಯಲು ನಿರ್ಧರಿಸಿದರು. ಕೆಲವು ಉತ್ತಮ ನಡತೆಯನ್ನು ಪ್ರದರ್ಶಿಸಲು ಭಾರತೀಯ ತಂಡವನ್ನು ಒತ್ತಾಯಿಸಿದರು.
ಹರ್ಮನ್‌ಪ್ರೀತ್ ಕೌರ್ ಅವರ ಈ ಕೆಟ್ಟ ನಡವಳಿಕೆಯು ಬಿಸಿಸಿಐ ಮತ್ತು ಭಾರತ ತಲೆ ತಗ್ಗಿಸುವಂತಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭಾರತೀಯ ನಾಯಕಿಯ ಮೇಲೆ ನಿಷೇಧದ ತೂಗುಗತ್ತಿ ನೇತಾಡುತ್ತಿದೆ.
ಹೀಗಾಗಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಬ್ಯಾಟ್‌ನಿಂದ ಸ್ಟಂಪ್‌ಗೆ ಹೊಡೆದ ಮತ್ತು ಅಂಪೈರ್ ವಿರುದ್ಧ ಬಹಿರಂಗ ಟೀಕೆಗಳ ಕಾರಣ, ಮುಂಬರುವ 2023ರ ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಎರಡು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಚೀನಾದ ಹ್ಯಾಂಗ್‌ಝೌನಲ್ಲಿ 2023ರ ಏಷ್ಯನ್ ಗೇಮ್ಸ್ ನಡೆಯಲಿದೆ.
ಹರ್ಮನ್‌ಪ್ರೀತ್ ಕೌರ್ 3 ಡಿಮೆರಿಟ್ ಅಂಕಗಳನ್ನು ಪಡೆಯಬೇಕೇ ಅಥವಾ 4 ಡಿಮೆರಿಟ್ ಅಂಕಗಳನ್ನು ಪಡೆಯಬೇಕೇ ಎಂಬ ಎರಡು ಚರ್ಚೆಗಳು ಐಸಿಸಿ ಮಟ್ಟದಲ್ಲಿ ನಡೆಯುತ್ತಿವೆ.
"24 ತಿಂಗಳ ಅವಧಿಯಲ್ಲಿ ನಾಲ್ಕು ಡಿಮೆರಿಟ್ ಅಂಕಗಳಿದ್ದರೆ, ಒಂದು ಟೆಸ್ಟ್ ಅಥವಾ ಎರಡು ಸೀಮಿತ ಓವರ್‌ಗಳ ಪಂದ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ಏಷ್ಯನ್ ಕ್ರೀಡಾಕೂಟದ ಮೊದಲ ಎರಡು ಪಂದ್ಯಗಳು ತಪ್ಪಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ, ಮೂರು ಡಿಮೆರಿಟ್ ಅಂಕಗಳಿದ್ದರೆ, ಹರ್ಮನ್‌ಪ್ರೀತ್ ಆರ್ಥಿಕ ದಂಡವನ್ನು ಮಾತ್ರ ಕಟ್ಟಬೇಕಾಗುತ್ತದೆ," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇನ್ನು ಹರ್ಮನ್‌ಪ್ರೀತ್ ಕೌರ್ ತನ್ನ ತಪ್ಪನ್ನು ತಾತ್ವಿಕವಾಗಿ ಒಪ್ಪಿಕೊಂಡಿದ್ದಾಳೆ ಎಂದು ಕ್ರಿಕ್‌ಬಜ್ ವರದಿ ಹೇಳಿದೆ. ಆದರೆ, ಆಕೆ ನಿಜವಾಗಿ ಸಹಿ ಮಾಡಿದ್ದಾಳೆಯೇ ಎಂಬುದು ತಿಳಿದಿಲ್ಲ. ನಿರ್ಬಂಧಗಳನ್ನು ಘೋಷಿಸಿದ ನಂತರ, ಭಾರತೀಯ ನಾಯಕಿಗೆ ಮೇಲ್ಮನವಿ ಸಲ್ಲಿಸುವ ಹಕ್ಕಿದೆ, ಈ ಸಂದರ್ಭದಲ್ಲಿ ಐಸಿಸಿ ಮ್ಯಾಚ್ ರೆಫರಿ ವಿಚಾರಣೆಯನ್ನು ನಡೆಸುತ್ತಾರೆ.
ಇದೇ ವೇಳೆ ಹರ್ಮನ್‌ಪ್ರೀತ್ ಕೌರ್ ವಿರುದ್ಧದ ಆರೋಪವನ್ನು ಬಾಂಗ್ಲಾದೇಶದ ಐಸಿಸಿ ಅಂತಾರಾಷ್ಟ್ರೀಯ ಪ್ಯಾನೆಲ್ ಮ್ಯಾಚ್ ರೆಫರಿ ಅಕ್ಟರ್ ಅಹ್ಮದ್ ಅವರು ಒತ್ತಾಯಿಸಿದ್ದಾರೆ.