2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯ ನಂತರ, ಟಿ20 ಮಾದರಿಯು ಹೇಗೆ ತಂಡಗಳಿಗೆ ಬಲಿಷ್ಠ ಕ್ರಿಕೆಟ್ ರಾಷ್ಟ್ರಗಳ ವಿರುದ್ಧ ಸ್ಪರ್ಧಿಸುವ ಅವಕಾಶವನ್ನು ಒದಗಿಸುತ್ತದೆ ಎಂಬುದರ ಕುರಿತು ಭಾರತದ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ ಭಾರತದ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಆಟಗಾರರು ತಮ್ಮ ಟ್ರೋಫಿ ಕ್ಯಾಬಿನೆಟ್‌ನಲ್ಲಿ ಒಲಿಂಪಿಕ್ ಪದಕವನ್ನು ಹೊಂದಲು ಬಯಸುತ್ತಾರೆ ಎಂದು ಅತುಲ್ ವಾಸನ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಚೀನಾದ ಹ್ಯಾಂಗ್‌ಝೌನಲ್ಲಿ ಮುಕ್ತಾಯಗೊಂಡ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡವು ತಮ್ಮ ಯುವ ಹಾಗೂ ಅನನುಭವಿ ತಂಡವನ್ನು ಕಳುಹಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.

ಟಿ20 ಮಾದರಿಯಲ್ಲಿ ಅಫ್ಘಾನಿಸ್ತಾನ ಮತ್ತು ನೆದರ್ಲ್ಯಾಂಡ್ಸ್‌ನಂತಹ ತಂಡಗಳ ಪ್ರದರ್ಶನದ ಅಡಿಯಲ್ಲಿ, 2028ರ ಒಲಿಂಪಿಕ್ಸ್‌ಗೆ ಐದು ವರ್ಷಗಳ ಮೊದಲು, ತಂಡಗಳು ಟಿ20 ಸ್ವರೂಪದಲ್ಲಿ ಅಭಿವೃದ್ಧಿಪಡಿಸಲು ಮತ್ತು ಸ್ಪರ್ಧಿಸಲು ಅವಕಾಶವನ್ನು ಹೊಂದಿರುತ್ತದೆ ಎಂದು ಅತುಲ್ ವಾಸನ್ ಅಭಿಪ್ರಾಯಪಟ್ಟರು.
"2028ರ ಒಲಿಂಪಿಕ್ಸ್‌ಗೆ ಇನ್ನೂ ಐದು ವರ್ಷಗಳಿವೆ. ತಂಡಗಳು ಅಭಿವೃದ್ಧಿ ಹೊಂದುತ್ತವೆ ಮತ್ತು ಅವರು ಉತ್ತಮ ಸ್ಪರ್ಧೆಯನ್ನು ನೀಡುತ್ತಾರೆ. ಭಾರತವು ಪದಕವನ್ನು ಬಯಸಿದರೆ, ಅವರು ತಮ್ಮ ಮುಖ್ಯ ತಂಡವನ್ನು ಕಳುಹಿಸಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ".
"ದೊಡ್ಡ ಕ್ರಿಕೆಟಿಗರು ವಿಶ್ವಕಪ್ ಗೆಲ್ಲಬಹುದು. ಆದರೆ, ಅದೇ ದೊಡ್ಡ ಆಟಗಾರರಿಗೆ ಒಲಿಂಪಿಕ್ ಪದಕ ಪಡೆಯಲು ಅವಕಾಶ ಸಿಕ್ಕರೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ಆಟಗಾರರು ಒಲಿಂಪಿಕ್ ಪದಕವನ್ನು ಹೊಂದಲು ಬಯಸುತ್ತಾರೆ," ಎಂದು ಅತುಲ್ ವಾಸನ್ ಅವರು ಎಎನ್‌ಐಗೆ ಹೇಳಿದ್ದಾರೆ.

"ಟಿ20 ಸ್ವರೂಪವು ತುಂಬಾ ಜನಪ್ರಿಯವಾಗಿದೆ ಮತ್ತು ಅದರಿಂದಾಗಿ ನೀವು ಹೆಚ್ಚಿನ ತಂಡಗಳೊಂದಿಗೆ ತ್ವರಿತವಾಗಿ ಪಂದ್ಯಾವಳಿಯನ್ನು ಆಯೋಜಿಸಬಹುದು. ನೀವು ಟಿ20 ಪಂದ್ಯವನ್ನು ನೋಡಿದರೆ ಅಫ್ಘಾನಿಸ್ತಾನ, ನೆದರ್ಲ್ಯಾಂಡ್ಸ್‌ನಂತಹ ತಂಡಗಳಿವೆ. ಅವರು ಟಿ20 ಮಾದರಿಯಲ್ಲಿ ಅಗ್ರ ತಂಡಗಳೊಂದಿಗೆ ಸ್ಪರ್ಧಿಸಬಹುದು," ಭಾರತದ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ತಿಳಿಸಿದರು.
2028ರ ಒಲಿಂಪಿಕ್‌ಗೆ ಕ್ರಿಕೆಟ್ ಜೊತೆಗೆ ಬೇಸ್‌ಬಾಲ್/ಸಾಫ್ಟ್‌ಬಾಲ್, ಲ್ಯಾಕ್ರೋಸ್, ಸ್ಕ್ವಾಷ್ ಮತ್ತು ಫ್ಲ್ಯಾಗ್ ಫುಟ್‌ಬಾಲ್‌ನಂತಹ ಕ್ರೀಡೆಗಳನ್ನು ಸಹ ಸೇರಿಸಲಾಗಿದೆ.
ಒಲಿಂಪಿಕ್ ಗೇಮ್ಸ್ ಲಾಸ್ ಏಂಜಲೀಸ್ 2028ರ ಸಂಘಟನಾ ಸಮಿತಿಯು ಈ ಆಟಗಳನ್ನು ಕ್ರೀಡಾಕೂಟದಲ್ಲಿ ಸೇರಿಸುವ ಪ್ರಸ್ತಾವನೆಯನ್ನು ಮುಂಬೈನಲ್ಲಿ ನಡೆಯುತ್ತಿರುವ 141ನೇ ಐಒಸಿ ಅಧಿವೇಶನದಲ್ಲಿ ಅಂಗೀಕರಿಸಲಾಯಿತು.

1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ತನ್ನ ಮೊದಲ ಹಾಗೂ ಕೊನೆಯ ಪ್ರದರ್ಶನವನ್ನು ನೀಡಿತ್ತು. ಇದರಲ್ಲಿ ಗ್ರೇಟ್ ಬ್ರಿಟನ್ ಫೈನಲ್‌ನಲ್ಲಿ ಫ್ರಾನ್ಸ್ ತಂಡವನ್ನು ಸೋಲಿಸಿತು. ಆದರೆ, ಇತ್ತೀಚಿಗೆ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಕ್ರಿಕೆಟ್ ಆಡಲಾಗುತ್ತಿದೆ.
ಶನಿವಾರ ಮುಂಬೈನಲ್ಲಿ ಆರಂಭವಾದ ಅಂತಾರಾಷ್ಟ್ರೀಯ ಒಲಿಂಪಿಕ್ ಕೌನ್ಸಲ್ (ಐಒಸಿ) ಅಧಿವೇಶನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಅಧಿವೇಶನವು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಯೋಸಿ) ಸದಸ್ಯರ ಪ್ರಮುಖ ಸಭೆಯಾಗಿ ಕಾರ್ಯನಿರ್ವಹಿಸುತ್ತದೆ.
ಒಲಿಂಪಿಕ್ ಕ್ರೀಡಾಕೂಟಗಳ ಭವಿಷ್ಯದ ಬಗ್ಗೆ ಪ್ರಮುಖ ನಿರ್ಧಾರಗಳನ್ನು ಐಒಸಿ ಅಧಿವೇಶನದಲ್ಲಿ ತೆಗೆದುಕೊಳ್ಳಲಾಗುತ್ತದೆ. ಸುಮಾರು 40 ವರ್ಷಗಳ ನಂತರ, ಭಾರತ ಎರಡನೇ ಬಾರಿಗೆ ಐಒಸಿ ಅಧಿವೇಶನವನ್ನು ಆಯೋಜಿಸುತ್ತಿದೆ. ಐಒಸಿಯ 86ನೇ ಅಧಿವೇಶನವು 1983ರಲ್ಲಿ ನವದೆಹಲಿಯಲ್ಲಿ ನಡೆದಿತ್ತು.