2024ರ ಟಿ20 ವಿಶ್ವಕಪ್ ಒಂದು ವರ್ಷಕ್ಕಿಂತ ಕಡಿಮೆ ಸಮಯವಿರುವ ವೇಳೆಯೇ, ಮಿಚೆಲ್ ಮಾರ್ಷ್ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಸ್ಟ್ರೇಲಿಯಾ ತಂಡದ ಟಿ20 ನಾಯಕರನ್ನಾಗಿ ನೇಮಿಸಲಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗಾಗಿ ಮಿಚೆಲ್ ಮಾರ್ಷ್ ನಾಯಕತ್ವದ 14 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಮೂವರು ಯುವ ಆಟಗಾರರಿಗೆ ಚೊಚ್ಚಲ ಬಾರಿಗೆ ರಾಷ್ಟ್ರೀಯ ತಂಡದ ಕರೆ ಸ್ವೀಕರಿಸಿದ್ದಾರೆ.
ದಕ್ಷಿಣ ಆಸ್ಟ್ರೇಲಿಯಾದ ಎಡಗೈ ವೇಗಿ ಸ್ಪೆನ್ಸರ್ ಜಾನ್ಸನ್, ವೆಸ್ಟರ್ನ್ ಆಸ್ಟ್ರೇಲಿಯಾದ ಆರನ್ ಹಾರ್ಡಿ ಮತ್ತು ಅಡಿಲೇಡ್ ಸ್ಟ್ರೈಕರ್ಸ್‌ನ ಮ್ಯಾಥ್ಯೂ ಶಾರ್ಟ್ ಅವರು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪ್ರವೇಶಕ್ಕಾಗಿ ಆಯ್ಕೆಯಾಗಿದ್ದಾರೆ.

ಸ್ಟಾರ್ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪುರುಷರ ತಂಡವನ್ನು ಮುನ್ನಡೆಸುತ್ತಿರುವ 12ನೇ ಆಟಗಾರನಾದರು. ಸರಣಿಯಲ್ಲಿ ತಮ್ಮ ನಾಯಕತ್ವದ ಕೌಶಲ್ಯದೊಂದಿಗೆ ಆಯ್ಕೆಗಾರರನ್ನು ಮೆಚ್ಚಿಸಲು ಎದುರು ನೋಡುತ್ತಿದ್ದಾರೆ.
31 ವರ್ಷದ ಮಿಚೆಲ್ ಮಾರ್ಷ್ ಅವರು ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರು. ಆಡಿದ ಮೂರು ಪಂದ್ಯಗಳಲ್ಲಿ 50ರ ಸರಾಸರಿಯಲ್ಲಿ 250 ರನ್ ಗಳಿಸಿದರು.
ಮಿಚೆಲ್ ಮಾರ್ಷ್ ಲೀಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಶತಕವನ್ನು ಗಳಿಸಿದರು. ಇದೇ ವೇಳೆ ಏಡೆನ್ ಮಾರ್ಕ್ರಾಮ್ ನಾಯಕತ್ವದ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಫಾರ್ಮ್ ಮುಂದುವರೆಸಲು ಪ್ರಯತ್ನಿಸಲಿದ್ದಾರೆ.
ಆಶಸ್ ಟೆಸ್ಟ್ ಸರಣಿಯ ನಂತರ, ಆಸ್ಟ್ರೇಲಿಯಾ ತಂಡವು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವಾಗ ಕ್ರಿಕೆಟ್‌ನ ಚುಟಕು ಸ್ವರೂಪಕ್ಕೆ ತಿರುಗಲಿದೆ. ಎಲ್ಲಾ ಮೂರು ಪಂದ್ಯಗಳನ್ನು ಡರ್ಬನ್‌ನಲ್ಲಿ ನಡೆಸಲು ನಿರ್ಧರಿಸಲಾಗಿದ್ದು, ಆಗಸ್ಟ್ 30ರಂದು ಮೊದಲ ಟಿ20 ಪಂದ್ಯ ನಡೆಯಲಿದೆ.
ಕುತೂಹಲಕಾರಿ ಅಂಶದಲ್ಲಿ, ಆಲ್‌ರೌಂಡರ್ ಆರನ್ ಹಾರ್ಡಿ ಅವರು ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾದ ಪ್ರಾಥಮಿಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮೇಜರ್ ಲೀಗ್ ಕ್ರಿಕೆಟ್‌ನ ಉದ್ಘಾಟನಾ ಋತುವಿನಲ್ಲಿ ಸ್ಪೆನ್ಸರ್ ಜಾನ್ಸನ್ ಉತ್ತಮ ಪ್ರದರ್ಶನ ನೀಡಿದರು. ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ತಾರೆಗಳಲ್ಲಿ ಒಬ್ಬರಾಗಿದ್ದರು. ವೇಗವಾಗಿ ಬೌಲಿಂಗ್ ಮಾಡುತ್ತಾನೆ ಮತ್ತು ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾನೆ.
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡ
ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಜೇಸನ್ ಬೆಹ್ರೆನ್‌ಡಾರ್ಫ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ಶಾರ್ಟ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೋನಿಸ್, ಆಡಮ್ ಝಂಪಾ.
ಇನ್ನು ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ ಮುಂಬರುವ 2023ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಪಂದ್ಯಾವಳಿಗಾಗಿ ತಮ್ಮ ಪ್ರಾಥಮಿಕ ತಂಡವನ್ನು ಆಸ್ಟ್ರೇಲಿಯಾ ಘೋಷಿಸಿದೆ.
ಭಾರತ ಮೂಲದ ಲೆಗ್ ಸ್ಪಿನ್ನರ್ ತನ್ವೀರ್ ಸಂಘ ಮತ್ತು ವೆಸ್ಟರ್ನ್ ಆಸ್ಟ್ರೇಲಿಯನ್ ಆಲ್‌ರೌಂಡರ್ ಆರನ್ ಹಾರ್ಡಿ ಅವರಂತಹ ಯುವ ಆಟಗಾರರಿಗೆ ಮೊದಲ ಬಾರಿಗೆ ರಾಷ್ಟ್ರೀಯ ತಂಡದಿಂದ ಕರೆಬಂದಿದೆ ಮತ್ತು ತಂಡದಲ್ಲಿ ಅಗ್ರ ಟೆಸ್ಟ್ ಬ್ಯಾಟರ್ ಮಾರ್ನಸ್ ಲ್ಯಾಬುಸ್ಚಾಗ್ನೆ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
2023ರ ಏಕದಿನ ವಿಶ್ವಕಪ್‌ಗೆ 18 ಸದಸ್ಯರ ದೊಡ್ಡ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ. ಬಳಿಕ ಈ ತಂಡವನ್ನು 15 ಸದಸ್ಯರಿಗೆ ಇಳಿಸಲಾಗುತ್ತದೆ.
2023ರ ಏಕದಿನ ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ ಪ್ರಕಟ
ಪ್ಯಾಟ್ ಕಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಸೀನ್ ಅಬಾಟ್, ಆಶ್ಟನ್ ಅಗರ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಆರನ್ ಹಾರ್ಡಿ, ಜೋಶ್ ಹ್ಯಾಝಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಮಾರ್ಕಸ್ ಸ್ಟೊಯಿನಿಸ್, ಆಡಮ್ ಝಂಪಾ, ಟ್ರಾವಿಸ್ ಹೆಡ್.