AUS vs SL: ಮೊದಲ ಟಿ20 ಪಂದ್ಯಕ್ಕೆ ಒಂದು ದಿನ ಮುಂಚೆಯೇ ಆಡುವ ಬಳಗ ಪ್ರಕಟಿಸಿದ ಆಸ್ಟ್ರೇಲಿಯಾ

ಬೃಹತ್ ಫ್ರಾಂಚೈಸಿ ಕ್ರಿಕೆಟ್ ಲೀಗ್ ಟೂರ್ನಮೆಂಟ್ ಆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೈದನೇ ಆವೃತ್ತಿ ಮುಕ್ತಾಯಗೊಂಡಿದ್ದು ಇದೀಗ ಕ್ರಿಕೆಟ್ ಪ್ರೇಮಿಗಳ ಚಿತ್ತ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳತ್ತ ನೆಟ್ಟಿದೆ. ಇತ್ತ ಕ್ರಿಕೆಟ್ ಜಗತ್ತಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಕೂಡ ಐಪಿಎಲ್ ಮುಗಿದ ಬೆನ್ನಲ್ಲೇ ಗರಿಗೆದರಿದ್ದು, ಸಾಲು ಸಾಲು ಸರಣಿಗಳು ಆಯೋಜನೆಯಾಗಿವೆ.
ಆ ಹಣಾಹಣಿಗಳ ಪೈಕಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳ ನಡುವಿನ ಸರಣಿಯೂ ಸಹ ಸೇರಿದೆ. ಹೌದು, ಆಸ್ಟ್ರೇಲಿಯಾ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದ್ದು ಸಿಂಹಳೀಯರ ವಿರುದ್ಧ ಕಾಂಗರೂಗಳು 3 ಟಿ ಟ್ವೆಂಟಿ, 5 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳಲ್ಲಿ ಸೆಣಸಾಟ ನಡೆಸಲಿದೆ.
ಇತ್ತಂಡಗಳ ನಡುವೆ ಮೊದಲಿಗೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಆಯೋಜನೆಯಾಗಿದ್ದು, ಜೂನ್ 7ರಿಂದ ಈ ಸರಣಿ ಆರಂಭವಾಗುತ್ತಿದೆ. ನಾಳೆ ( ಜೂನ್ 7 ) ನಡೆಯಲಿರುವ ಮೊದಲನೇ ಟಿ ಟ್ವೆಂಟಿ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿಯೇ ಆಸ್ಟ್ರೇಲಿಯಾ ಪಂದ್ಯದಲ್ಲಿ ಕಣಕ್ಕಿಳಿಯಲಿರುವ 11 ಆಟಗಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಕುರಿತಾದ ವಿವರ ಕೆಳಕಂಡಂತಿದೆ.

ಆಸ್ಟ್ರೇಲಿಯಾ ಪ್ರಕಟಿಸಿದ ಆಡುವ ಬಳಗ
ಪಂದ್ಯ ಆರಂಭವಾಗುವ ದಿನಕ್ಕೂ ಮುನ್ನವೇ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ಆಡುವ ಬಳಗ ಹೀಗಿದೆ: ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್, ಜೋಶ್ ಹ್ಯಾಜಲ್‌ವುಡ್

ಪಂದ್ಯದ ಮಾಹಿತಿ
ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳ ನಡುವಿನ ಮೊದಲನೇ ಟಿ ಟ್ವೆಂಟಿ ಪಂದ್ಯ ಜೂನ್ 7ರ ಮಂಗಳವಾರದಂದು ಕೊಲಂಬೋದ ಆರ್ ಪ್ರೇಮದಾಸ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ. ಈ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಜೂನ್ 8ರ ಬುಧವಾರದಂದು ಇದೇ ಕ್ರೀಡಾಂಗಣದಲ್ಲಿ ಇತ್ತಂಡಗಳ ನಡುವಿನ ಎರಡನೆ ಟಿ ಟ್ವೆಂಟಿ ಪಂದ್ಯ ಜರುಗಲಿದೆ ಹಾಗೂ ಜೂನ್ 11ರ ಶನಿವಾರದಂದು ಮೂರನೇ ಟಿ ಟ್ವೆಂಟಿ ಪಂದ್ಯ ಪಲ್ಲೆಕೆಲೆಯಲ್ಲಿ ನಡೆಯಲಿದೆ.

ಏಕದಿನ ಮತ್ತು ಟೆಸ್ಟ್ ಸರಣಿಗಳು ಯಾವಾಗ?
ಇತ್ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ ಮುಕ್ತಾಯಗೊಂಡ ನಂತರ 5 ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದೆ ಮತ್ತು ಟೆಸ್ಟ್ ಸರಣಿ ಏಕದಿನ ಸರಣಿ ಮುಕ್ತಾಯಗೊಂಡ ನಂತರ ನಡೆಯಲಿದೆ. ಈ ಎರಡೂ ಸರಣಿಗಳ ವೇಳಾಪಟ್ಟಿ ಕೆಳಕಂಡಂತಿದೆ.
ಮೊದಲನೇ ಏಕದಿನ ಪಂದ್ಯ - ಜೂನ್ 14, ಮಂಗಳವಾರ - ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ಎರಡನೇ ಏಕದಿನ ಪಂದ್ಯ - ಜೂನ್ 16, ಗುರುವಾರ - ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣ
ಮೂರನೇ ಏಕದಿನ ಪಂದ್ಯ ಜೂನ್ 19, ಭಾನುವಾರ - ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣ, ಕೊಲಂಬೊ
ನಾಲ್ಕನೇ ಏಕದಿನ ಪಂದ್ಯ - ಜೂನ್ 21, ಮಂಗಳವಾರ - ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣ, ಕೊಲಂಬೊ
ಐದನೇ ಏಕದಿನ ಪಂದ್ಯ - ಜೂನ್ 24, ಶುಕ್ರವಾರ - ಪ್ರೇಮದಾಸ ಕ್ರಿಕೆಟ್ ಕ್ರೀಡಾಂಗಣ, ಕೊಲಂಬೊ
ಪ್ರಥಮ ಟೆಸ್ಟ್ ಪಂದ್ಯ - ಜೂನ್ 29ರಿಂದ ಜುಲೈ 3 - ಗಲ್ಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ದ್ವಿತೀಯ ಟೆಸ್ಟ್ ಪಂದ್ಯ - ಜುಲೈ 8ರಿಂದ ಜುಲೈ 12 - ಗಲ್ಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications