AUS vs SL: 18 ಎಸೆತಕ್ಕೆ 59 ರನ್ ಚೇಸ್ ಮಾಡಿದ ಲಂಕಾ; ಮುನ್ನುಗ್ಗಿ ಪಂದ್ಯ ಗೆಲ್ಲಿಸಿದ ನಾಯಕ ಶನಕ

ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿರುವ ಆಸ್ಟ್ರೇಲಿಯಾ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯನ್ನು ಮುಗಿಸಿದೆ. ಇತ್ತಂಡಗಳ ನಡುವೆ ನಡೆದ ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದ್ದರೆ, ಇಂದು ( ಜೂನ್ 11 ) ನಡೆದ ತೃತೀಯ ಪಂದ್ಯದಲ್ಲಿ ಶ್ರೀಲಂಕಾ ರೋಚಕ ಜಯ ಸಾಧಿಸುವುದರ ಮೂಲಕ ವೈಟ್ ವಾಷ್ ಮುಖಭಂಗದಿಂದ ಪಾರಾಗಿದೆ.
ಹೌದು, ಪಲ್ಲೆಕೆಲೆಯ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿ ಆತಿಥೇಯ ಶ್ರೀಲಂಕಾ ತಂಡಕ್ಕೆ 177 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿತ್ತು. ಇತ್ತ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತು ವೈಟ್ ವಾಶ್ ಮುಖಭಂಗದ ಒತ್ತಡದೊಂದಿಗೆ ಕಣಕ್ಕಿಳಿದ ಶ್ರೀಲಂಕಾ ತಮ್ಮ ತಂಡದ ನಾಯಕ ದಾಸನ್ ಶನಕ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 19.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿ 4 ವಿಕೆಟ್‍ಗಳ ರೋಚಕ ಜಯ ಸಾಧಿಸಿ ಮುಖಭಂಗದಿಂದ ಪಾರಾಗಿದೆ.
ಆಸ್ಟ್ರೇಲಿಯಾ ನೀಡಿದ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ಪರ ಆರಂಭಿಕ ಆಟಗಾರರಾಗಿ ಧನುಷ್ಕಾ ಗುಣತಿಲಕ ಮತ್ತು ಪತುಮ್ ನಿಸ್ಸಾಂಕ ಕಣಕ್ಕಿಳಿದರು. ಗುಣತಿಲಕ 15 ರನ್ ಕಲೆಹಾಕಿದರೆ, ನಿಸ್ಸಾಂಕ 27 ರನ್ ಬಾರಿಸಿದರು. ಇನ್ನುಳಿದಂತೆ ಚರಿತ ಅಸಲಂಕಾ 26, ಭಾನುಕ ರಾಜಪಕ್ಸ 17, ಕುಸಾಲ್ ಮೆಂಡಿಸ್ 6 ರನ್, ವನಿಂದು ಹಸರಂಗ 8 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರೆ, ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ನಾಯಕ ದಾಸನ್ ಶಾನಕ 25 ಎಸೆತಗಳಲ್ಲಿ ಅಜೇಯ 54 ರನ್ ಚಚ್ಚಿ ಮ್ಯಾಚ್ ವಿನ್ನರ್ ಎನಿಸಿಕೊಂಡರು ಹಾಗೂ ಚಮಿಕಾ ಕರುಣರತ್ನೆ ಅಜೇಯ 14 ರನ್ ಕಲೆ ಹಾಕಿದರು.

ನಾಯಕನ ಆಟವಾಡಿದ ಶನಕ
ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದಾಸನ್ ಶನಕ ಹೇಜಲ್ ವುಡ್ ಎಸೆದ 18ನೇ ಓವರ್‌ನಲ್ಲಿ 2 ಸಿಕ್ಸರ್ ಮತ್ತು 2 ಬೌಂಡರಿ ಚಚ್ಚುವುದರ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿಬಿಟ್ಟರು. ಆ ಒಂದು ಓವರ್‌ನಲ್ಲಿಯೇ 22 ರನ್ ಹರಿದು ಬಂದ ಕಾರಣ ಆಸ್ಟ್ರೇಲಿಯಾ ಪರ ಇದ್ದ ಪಂದ್ಯ ತಿರುವು ಪಡೆದುಕೊಂಡಿತು ಎಂದೇ ಹೇಳಬಹುದು. ಆ ಓವರ್‌ಗೂ ಮುನ್ನ 18 ಎಸೆತಗಳಿಗೆ 59 ರನ್ ಅಗತ್ಯವಿತ್ತು ಆದರೆ ಓವರ್ ಮುಕ್ತಾಯದ ನಂತರ 12 ಎಸೆತಗಳಿಗೆ 37 ರನ್ ಬಾರಿಸಬೇಕಾದ ಅಗತ್ಯ ಎದುರಾಯಿತು. ನಂತರ 19ನೇ ಓವರ್‌ನಲ್ಲಿಯೂ ಅಬ್ಬರಿಸಿದ ಶನಕ ಜೇ ರಿಚರ್ಡ್ ಸನ್ ಎಸೆತಗಳಿಗೆ 1 ಸಿಕ್ಸರ್ ಮತ್ತು 1 ಬೌಂಡರಿ ಚಚ್ಚಿದ್ದರು ಹಾಗೂ ಕರುಣರತ್ನೆ ಸಹ 1 ಬೌಂಡರಿ ಚಚ್ಚಿದ್ದರು. ಈ ಮೂಲಕ ಅಂತಿಮ 6 ಎಸೆತಗಳಲ್ಲಿ ತಂಡಕ್ಕೆ ಗೆಲ್ಲಲು 19 ರನ್ ಬೇಕಿದ್ದಾಗ ಕೇನ್ ರಿಚರ್ಡ್ಸನ್ 2 ವೈಡ್ ಹಾಕಿದರು ಹಾಗೂ ನಂತರ ಮೊದಲೆರಡು ಎಸೆತಕ್ಕೆ ತಲಾ ಒಂದೊಂದು ರನ್ ಬಂದ ಕಾರಣ 4 ಎಸೆತಗಳಲ್ಲಿ 15 ರನ್ ಅಗತ್ಯವಿತ್ತು.
ಈ ಸಂದರ್ಭದಲ್ಲಿ ಶನಕ ಓವರ್‌ನ ಮೂರನೇ ಎಸೆತಕ್ಕೆ ಬೌಂಡರಿ, ನಾಲ್ಕನೇ ಎಸೆತಕ್ಕೆ ಬೌಂಡರಿ ಮತ್ತು 5ನೇ ಎಸೆತಕ್ಕೆ ಸಿಕ್ಸರ್ ಚಚ್ಚಿದರು. ಈ ಮೂಲಕ ಲಂಕಾಗೆ ಕೊನೆಯ ಎಸೆತದಲ್ಲಿ ಗೆಲ್ಲಲು 1 ರನ್ ಬೇಕಿತ್ತು ಹಾಗೂ ಕೇನ್ ರಿಚರ್ಡ್ಸನ್ ವೈಡ್ ಎಸೆದ ತರುವಾಯ ಲಂಕಾ ಜಯದ ನಗೆ ಬೀರಿತು. ಹೀಗೆ ವೀರನಂತೆ ಮುಂದೆ ನಿಂತು ಹೋರಾಡಿದ ಲಂಕಾ ನಾಯಕ ದಾಸನ್ ಶನಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ, ಸರಣಿಯಲ್ಲಿ ಉತ್ತಮ ಆಟವಾಡಿದ ಆಸ್ಟ್ರೇಲಿಯದ ನಾಯಕ ಆ್ಯರನ್ ಫಿಂಚ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಆಸ್ಟ್ರೇಲಿಯಾ ಇನ್ನಿಂಗ್ಸ್
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಆರನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದು 43 ರನ್‌ಗಳ ಜತೆಯಾಟವಾಡಿ ಸಾಮಾನ್ಯ ಆರಂಭವನ್ನು ಕಟ್ಟಿಕೊಟ್ಟರು. ಆ್ಯರನ್ ಫಿಂಚ್ 29 ರನ್ ಗಳಿಸಿ ಔಟ್ ಆದರೆ, ಡೇವಿಡ್ ವಾರ್ನರ್ 39 ರನ್ ಕಲೆ ಹಾಕಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ 16 ರನ್ ಕಲೆಹಾಕಿದರೆ, ಜೋಶ್ ಇಂಗ್ಲಿಸ್ ಶೂನ್ಯಕ್ಕೆ ರನ್ ಔಟ್ ಆದರು, ಮಾರ್ಕಸ್ ಸ್ಟೊಯಿನಿಸ್ 23 ಎಸೆತಗಳಲ್ಲಿ 38 ರನ್ ಕಲೆ ಹಾಕಿದರು ಹಾಗೂ ಸ್ಟೀವನ್ ಸ್ಮಿತ್ 27 ಎಸೆತಗಳಲ್ಲಿ 37 ರನ್ ಕಲೆಹಾಕಿ ಅಜೇಯರಾಗಿ ಉಳಿದರೆ, ಮ್ಯಾಥ್ಯೂ ವೇಡ್ 13 ರನ್ ಕಲೆಹಾಕಿ ಅಜೇಯರಾಗಿ ಉಳಿದರು.

ದುಬಾರಿಯಾದ ಬೌಲರ್‌ಗಳು
ಇನ್ನು ಈ ಪಂದ್ಯದಲ್ಲಿ ಎರಡೂ ತಂಡಗಳ ಬೌಲರ್‌ಗಳು ದುಬಾರಿಯಾದರು. ಯಾವುದೇ ವಿಕೆಟ್ ಪಡೆಯದ ಶ್ರೀಲಂಕಾದ ದುಷ್ಮಂತ ಚಮೀರ 4 ಓವರ್ ಬೌಲಿಂಗ್ ಮಾಡಿ 46 ರನ್ ನೀಡಿ ದೊಡ್ಡ ಮಟ್ಟದಲ್ಲಿ ದುಬಾರಿಯಾದರೆ, 2.5 ಓವರ್ ಬೌಲಿಂಗ್ ಮಾಡಿದ ಕೇನ್ ರಿಚರ್ಡ್ ಸನ್ 15.5ರ ಎಕಾನಮಿಯಲ್ಲಿ 44 ರನ್ ನೀಡಿ ಸಿಕ್ಕಾಪಟ್ಟೆ ದುಬಾರಿಯಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications