AUS vs SL: 14 ಓವರ್‌ಗೆ 134 ರನ್!; ವಿಕೆಟ್ ಕಳೆದುಕೊಳ್ಳದೇ ಪ್ರಥಮ ಟಿ20 ಗೆದ್ದ ಆಸ್ಟ್ರೇಲಿಯಾ

3 ಪಂದ್ಯಗಳ ಟಿ ಟ್ವೆಂಟಿ ಸರಣಿ, 5 ಪಂದ್ಯಗಳ ಏಕದಿನ ಸರಣಿ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುವ ಸಲುವಾಗಿ ಆಸ್ಟ್ರೇಲಿಯಾ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದ್ದು, ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿಯೇ ಯಾವುದೇ ವಿಕೆಟ್ ಕಳೆದುಕೊಳ್ಳದೇ ಜಯಸಾಧಿಸಿ ಅಬ್ಬರಿಸಿದೆ.
ಹೌದು, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳ ನಡುವೆ ಮೊದಲಿಗೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಆರಂಭವಾಗಿದ್ದು, ಇಂದು ( ಜೂನ್ 7 ) ಕೊಲಂಬೋದ ಆರ್ ಪ್ರೇಮದಾಸ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇತ್ತಂಡಗಳ ನಡುವಿನ ಮೊದಲ ಟಿ ಟ್ವೆಂಟಿ ಪಂದ್ಯ ನಡೆದಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 19.3 ಓವರ್‌ಗಳಲ್ಲಿ 128 ರನ್‌ಗಳಿಗೆ ಆಲ್ ಔಟ್ ಆಗಿ ಆಸ್ಟ್ರೇಲಿಯಾಗೆ 129 ರನ್‌ಗಳ ಸಾಮಾನ್ಯ ಗುರಿಯನ್ನು ನೀಡಿತ್ತು.
ಇನ್ನು ಈ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಆಸ್ಟ್ರೇಲಿಯಾ ಯಾವುದೇ ವಿಕೆಟ್ ಕಳೆದುಕೊಳ್ಳದೇ 14 ಓವರ್‌ಗಳಲ್ಲಿ 134 ರನ್ ಕಲೆಹಾಕಿ ಭರ್ಜರಿ ಜಯ ಸಾಧಿಸಿ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ 1 - 0 ಅಂತರದ ಮುನ್ನಡೆಯನ್ನು ಸಾಧಿಸಿದೆ.

ಆಸ್ಟ್ರೇಲಿಯಾ ಇನ್ನಿಂಗ್ಸ್
ಶ್ರೀಲಂಕಾ ನೀಡಿದ್ದ 129 ರನ್‌ಗಳ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರರಾಗಿ ನಾಯಕ ಆ್ಯರನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಕಣಕ್ಕಿಳಿದರು. ಪಂದ್ಯ ಮುಕ್ತಾಯದವರೆಗೂ ಅಜೇಯರಾಗಿ ಉಳಿದ ಈ ಇಬ್ಬರೂ ಅರ್ಧಶತಕ ಬಾರಿಸಿದರು. ನಾಯಕ ಆ್ಯರನ್ ಫಿಂಚ್ 40 ಎಸೆತಗಳಲ್ಲಿ ಅಜೇಯ 61 ರನ್ ಬಾರಿಸಿದರೆ, ಡೇವಿಡ್ ವಾರ್ನರ್ 44 ಎಸೆತಗಳಲ್ಲಿ ಅಜೇಯ 70 ರನ್ ಚಚ್ಚಿದರು. ಇನ್ನು ಆಸ್ಟ್ರೇಲಿಯಾ ಚೇಸಿಂಗ್ ಮಾಡುವ ವೇಳೆ 12ನೇ ಓವರ್‌ನಲ್ಲಿ ವರುಣನ ಆಗಮನವೂ ಆಗಿತ್ತು ಹಾಗೂ 8.2 ಓವರ್‌ಗಳಲ್ಲಿ ಆಸ್ಟ್ರೇಲಿಯ ಗೆಲ್ಲಲು 28 ರನ್ ಬಾರಿಸಬೇಕಾದ ಅಗತ್ಯವಿತ್ತು. ಕೆಲ ಸಮಯದ ನಂತರ ಮಳೆ ನಿಂತು ಮತ್ತೆ ಪಂದ್ಯ ಮುಂದುವರಿಯಿತು. ಇನ್ನು 7 ಓವರ್‌ಗಳಲ್ಲಿ 14 ರನ್ ಬೇಕಿದ್ದಾಗ ದುಷ್ಮಂತ ಚಮೀರ 14ನೇ ಓವರ್ ಎಸೆದರು. ಈ ಓವರ್‌ನಲ್ಲಿ ಡೇವಿಡ್ ವಾರ್ನರ್ 2 ಬೌಂಡರಿ ಚಚ್ಚಿದರೆ, ನಾಯಕ ಆ್ಯರನ್ ಫಿಂಚ್ ಐದನೇ ಎಸೆತಕ್ಕೆ ಫೋರ್ ಮತ್ತು ಅಂತಿಮ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಫಿನಿಶ್ ಮಾಡಿದರು.

ಶ್ರೀಲಂಕಾ ಇನ್ನಿಂಗ್ಸ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರ ಆರಂಭಿಕರಾಗಿ ಕಣಕ್ಕಿಳಿದ ಪತುಮ್ ನಿಸ್ಸಾಂಕ ಮತ್ತು ಧನುಷ್ಕಾ ಗುಣತಿಲಕ ಸಾಮಾನ್ಯ ಆರಂಭವನ್ನು ಕಟ್ಟಿಕೊಟ್ಟರು. ಧನುಷ್ಕಾ ಗುಣತಿಲಕ 26 ರನ್ ಗಳಿಸಿ ಔಟ್ ಆದರೆ, ಪತುಮ್ ನಿಸ್ಸಾಂಕ 36 ರನ್ ಕಲೆಹಾಕಿ ಔಟ್ ಆದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಚರಿತ್ ಅಸಲಂಕಾ 34 ರನ್ ಗಳಿಸಿ ರನ್ ಔಟ್ ಆದರು. ಹೀಗೆ ಈ ಮೂವರನ್ನು ಹೊರತುಪಡಿಸಿ ಲಂಕಾದ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ಕೂಡ 20 ರನ್ ಗಡಿ ದಾಟಲಿಲ್ಲ. ಇನ್ನುಳಿದಂತೆ ಕುಸಾಲ್ ಮೆಂಡಿಸ್ 1 ರನ್, ಭಾನುಕಾ ರಾಜಪಕ್ಸ 0 ರನ್, ನಾಯಕ ದಸುನ್ ಶನಕ 0 ರನ್, ವನಿಂದು ಹಸರಂಗ 17 ರನ್, ಚಾಮಿಕ ಕರುಣಾರತ್ನೆ 1 ರನ್, ದುಷ್ಮಂತ ಚಮೀರ 1 ರನ್, ಮಹೀಶ್ ತೀಕ್ಷಣ 1 ರನ್ ಮತ್ತು ನುವಾನ್ ತುಷಾರ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು. ಆಸ್ಟ್ರೇಲಿಯಾ ಪರ ಜೋಶ್ ಹೇಜಲ್ ವುಡ್ 4 ವಿಕೆಟ್, ಮಿಚೆಲ್ ಸ್ಟಾರ್ಕ್ 3 ವಿಕೆಟ್ ಮತ್ತು ಕೇನ್ ರಿಚರ್ಡ್ ಸನ್ 1 ವಿಕೆಟ್ ಪಡೆದರು.
ಪಂದ್ಯದಲ್ಲಿ ಪ್ರಮುಖ ವಿಕೆಟ್ ಪಡೆದು ಮಿಂಚಿದ ಆಸ್ಟ್ರೇಲಿಯದ ಜೋಶ್ ಹೇಜಲ್ ವುಡ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಆಡುವ ಬಳಗಗಳು
ಶ್ರೀಲಂಕಾ ಆಡುವ ಬಳಗ: ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಭಾನುಕಾ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಮಹೀಶ್ ತೀಕ್ಷಣ, ನುವಾನ್ ತುಷಾರ
ಆಸ್ಟ್ರೇಲಿಯಾ ಆಡುವ ಬಳಗ: ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್, ಜೋಶ್ ಹ್ಯಾಜಲ್‌ವುಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications