
ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿರುವ ಆಸ್ಟ್ರೇಲಿಯಾ 3 ಪಂದ್ಯಗಳ ಟಿ ಟ್ವೆಂಟಿ ಸರಣಿ, 5 ಪಂದ್ಯಗಳ ಏಕದಿನ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದ್ದು, ಮೊದಲಿಗೆ ಇತ್ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ ನಡೆಯುತ್ತಿದೆ.
ಈ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಪೈಕಿ ಈಗಾಗಲೇ ಮೊದಲೆರಡು ಪಂದ್ಯಗಳು ಮುಕ್ತಾಯಗೊಂಡಿದ್ದು, ಈ ಎರಡೂ ಪಂದ್ಯಗಳಲ್ಲಿಯೂ ಆತಿಥೇಯ ಶ್ರೀಲಂಕಾ ವಿರುದ್ಧ ಪ್ರವಾಸಿ ಆಸ್ಟ್ರೇಲಿಯ ಜಯವನ್ನು ಸಾಧಿಸಿ 2-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸುವುದರ ಜತೆಗೆ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಹೀಗಾಗಿ ಇತ್ತಂಡಗಳ ನಡುವೆ ಇಂದು ( ಜೂನ್ 11 ) ನಡೆಯುತ್ತಿರುವ ತೃತೀಯ ಹಾಗೂ ಅಂತಿಮ ಟಿ ಟ್ವೆಂಟಿ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಜಯ ಸಾಧಿಸುವುದರ ಮೂಲಕ ತವರಿನಲ್ಲಿ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.
ಶ್ರೀಲಂಕಾದ ಪಲ್ಲೆಕೆಲೆಯ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಆ್ಯರನ್ ಫಿಂಚ್ ಬ್ಯಾಟಿಂಗ್ ಆಯ್ದುಕೊಂಡಿದ್ದು, ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿ ಎದುರಾಳಿ ಶ್ರೀಲಂಕಾಗೆ 177 ರನ್‌ಗಳ ಪೈಪೋಟಿಯುತ ಗುರಿಯನ್ನು ನೀಡಿದೆ.
ಆಡುವ ಬಳಗಗಳು:
ಆಸ್ಟ್ರೇಲಿಯಾ ಆಡುವ ಬಳಗ: ಆರನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಜೋಶ್ ಇಂಗ್ಲಿಸ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ ( ವಿಕೆಟ್ ಕೀಪರ್ ), ಆಷ್ಟನ್ ಅಗರ್, ಝೈ ರಿಚರ್ಡ್ಸನ್, ಕೇನ್ ರಿಚರ್ಡ್ಸನ್, ಜೋಶ್ ಹ್ಯಾಜಲ್ವುಡ್
ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ದನುಷ್ಕ ಗುಣತಿಲಕ, ಚರಿತ್ ಅಸಲಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಭಾನುಕ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಮಹೇಶ್ ತೀಕ್ಷಣ, ಪ್ರವೀಣ್ ಜಯವಿಕ್ರಮ
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ನಾಯಕ ಆರನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದು 43 ರನ್‌ಗಳ ಜತೆಯಾಟವಾಡಿ ಸಾಮಾನ್ಯ ಆರಂಭವನ್ನು ಕಟ್ಟಿಕೊಟ್ಟರು. ಆ್ಯರನ್ ಫಿಂಚ್ 29 ರನ್ ಗಳಿಸಿ ಔಟ್ ಆದರೆ, ಡೇವಿಡ್ ವಾರ್ನರ್ 39 ರನ್ ಕಲೆ ಹಾಕಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್‌ವೆಲ್ 16 ರನ್ ಕಲೆಹಾಕಿದರೆ, ಜೋಶ್ ಇಂಗ್ಲಿಸ್ ಶೂನ್ಯಕ್ಕೆ ರನ್ ಔಟ್ ಆದರು, ಮಾರ್ಕಸ್ ಸ್ಟೊಯಿನಿಸ್ 23 ಎಸೆತಗಳಲ್ಲಿ 38 ರನ್ ಕಲೆ ಹಾಕಿದರು ಹಾಗೂ ಅಂತಿಮ ಹಂತದಲ್ಲಿ ಬೌಂಡರಿ ಚಚ್ಚಿ ತಂಡದ ರನ್ ಮೊತ್ತ ಹೆಚ್ಚಿಸಿದ ಸ್ಟೀವನ್ ಸ್ಮಿತ್ 27 ಎಸೆತಗಳಲ್ಲಿ 37 ರನ್ ಕಲೆಹಾಕಿ ಅಜೇಯರಾಗಿ ಉಳಿದರೆ, ಮ್ಯಾಥ್ಯೂ ವೇಡ್ 13 ರನ್ ಕಲೆಹಾಕಿ ಅಜೇಯರಾಗಿ ಉಳಿದರು.
ಶ್ರೀಲಂಕಾ ಪರ ಮಹೀಶ್ ತೀಕ್ಷಣ 2 ವಿಕೆಟ್ ಪಡೆದರೆ, ವನಿಂದು ಹಸರಂಗ ಮತ್ತು ಜಯವಿಕ್ರಮ ತಲಾ ಒಂದೊಂದು ವಿಕೆಟ್ ಪಡೆದರು. ವಿಕೆಟ್ ಪಡೆದರೂ ಸಹ ಜಯವಿಕ್ರಮ 4 ಓವರ್ ಬೌಲಿಂಗ್ ಮಾಡಿ 43 ರನ್ ನೀಡಿ ದುಬಾರಿಯಾದರೆ, ಯಾವುದೇ ವಿಕೆಟ್ ಪಡೆಯದ ದುಷ್ಮಂತ ಚಮೀರ 4 ಓವರ್ ಬೌಲಿಂಗ್ ಮಾಡಿ 46 ರನ್ ನೀಡಿ ದೊಡ್ಡ ಮಟ್ಟದಲ್ಲಿ ದುಬಾರಿಯಾದರು.