
ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯ ಮುಕ್ತಾಯವಾಗಿದ್ದು ರೋಚಕ ಪಂದ್ಯದಲ್ಲಿ ಶ್ರೀಲಂಕಾ ಗೆಲುವು ಸಾಧಿಸಿದೆ. ಈ ಮೂಲಕ ವೈಟ್‌ವಾಶ್ ಅವಮಾನದಿಂದ ಶ್ರೀಲಂಕಾ ತಪ್ಪಿಸಿಕೊಂಡಿದ್ದು 1-4 ಅಂತರದಿಂದ ಸರಣಿಯನ್ನು ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಒಪ್ಪಿಸಿದೆ.
ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಆಸ್ಟ್ರೇಲಿಯಾ ತಂಡಕ್ಕಿಂತ ಮೇಲುಗೈ ಸಾಧಿಸಿತು. ಇದರ ಪರಿಣಾಮವಾಗಿ ಶ್ರೀಲಂಕಾ 5 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ಅಂತಿಮ ಹಂತದಲ್ಲಿ ರೋಚಕತೆ ಹೆಚ್ಚಿಸಿದರು ಕೂಡ ಶ್ರೀಲಂಕಾ ಒಂದು ಎಸೆತ ಉಳಿದಿರುವಂತೆ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕ ಆಟಗಾರಿರಿಬ್ಬರು ಕೂಡ 12 ರನ್ ಗಳಿಸುವಷ್ಟರಲ್ಲಿ ಫೆವಿಲಿಯನ್ ಸೇರಿಕೊಂಡಿದ್ದರು. ನಂತರ ಜೋಶ್ ಇಂಗ್ಲಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಯಾಟವೊಂದರಲ್ಲಿ ಭಾಗಿಯಾದರು. ಆದರೆ ಆಸ್ಟ್ರೇಲಿಯಾದ ರನ್ ವೇಗ ನಿಧಾನಗತಿಯಲ್ಲಿತ್ತು. ಆದರೆ ಆಸಿಸ್ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ ಈ ಪಂದ್ಯದಲ್ಲಿ ಸ್ಪೋಟಕ ಪ್ರದರ್ಶನ ನೀಡಿದರು.
27 ಎಸೆತ ಎದುರಿಸಿದ ವೇಡ್ 43 ರನ್ ಗಳಿಸುವ ಮೂಲಕ ರನ್ ವೇಗವನ್ನು ಹೆಚ್ಚಿಸಿದರು. ಇದರ ಪರಿಣಾಮವಾಗಿ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್‌ಗಳಿಸಿತು. ಶ್ರೀಲಂಕಾ ತಂಡದ ಪರವಾಗಿ ಲಹಿರು ಕುಮಾರ ಹಾಗೂ ಚಮೀರಾ ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದರು. ಜಯವಿಕ್ರಮ ಹಾಗೂ ಕರುಣರತ್ನ ತಲಾ ಒಂದು ವಿಕೆಟ್ ಪಡೆದರು.
ಇನ್ನು ಆಸ್ಟ್ರೇಲಿಯಾ ನೀಡಿದ 155 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಕೂಡ ಆರಂಭದಲ್ಲಿ ಮುಗ್ಗರಿಸಿತು. ಆದರೆ ಆರಂಭಿಕ ಆಟಗಾರ ಕುಸಾಲ್ ಮೆಂಡಿಸ್ ಅಂತಿಮ ಹಂತದವರೆಗೂ ಹೋರಾಟದ ಪ್ರದರ್ಶನ ನಿಡಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ನಾಯಕ ದಾಸುನ್ ಶನಕ ಕುಸಾಲ್ ಮೆಂಡಿಸ್ ಜೊತೆಗೆ ನಿರ್ಣಾಯಕ ಜೊತೆಯಾಟದಲ್ಲಿ ಭಾಗಿಯಾದ ಕಾರಣ ಲಂಕಾ ಗೆಲುವು ಸಾಧ್ಯವಾಯಿತು. ಈ ಮೂಲಕ ಒಂದು ಎಸೆತ ಬಾಕಿಯಿರುವಂತೆ ಶ್ರೀಲಂಕಾ ಭರ್ಜರಿ ಗೆಲುವು ಸಾಧಿಸಿದೆ.
ಇನ್ನು ಈ ಸರಣಿಯಲ್ಲಿ ಮೊದಲ ನಾಲ್ಕು ಪಂದ್ಯಗಳನ್ನು ಕೂಡ ಆಸ್ಟ್ರೇಲಿಯಾ ಗೆಲುವು ಸಾಧಿಸಿದ ಕಾರಣ ಸರಣಿಯನ್ನು ಈಗಾಗಲೇ ವಶಕ್ಕೆ ಪಡೆದುಕೊಂಡಿತ್ತು. ಈ ಸರಣಿಯ ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಅದ್ಭುತ ಪ್ರದರ್ಶನ ನೀಡಿ ಪಂದ್ಯವನ್ನು ಟೈ ಮಾಡಿಕೊಂಡಿತ್ತಾದರೂ ಸೂಪರ್ ಓವರ್‌ನಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ಈ ತಪ್ಪನ್ನು ಮಾಡದೆ ಭರ್ಜರಿ ಗೆಲುವು ತಮ್ಮದಾಗಿಸಿಕೊಂಡಿದೆ. ಈ ಸರಣಿಯ ಬಳಿಕ ಶ್ರೀಲಂಕಾ ಭಾರತ ಪ್ರವಾಸ ಕೈಗೊಳ್ಳಲಿದ್ದು ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ. ಗುರುವಾರದಿಂದ ಭಾರತ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ.
ಆಸ್ಟ್ರೇಲಿಯಾ ಆಡುವವ ಬಳಗ: ಆರನ್ ಫಿಂಚ್ (ನಾಯಕ), ಬೆನ್ ಮೆಕ್‌ಡರ್ಮಾಟ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಡೇನಿಯಲ್ ಸ್ಯಾಮ್ಸ್, ಆಷ್ಟನ್ ಅಗರ್, ಝೈ ರಿಚರ್ಡ್‌ಸನ್, ಕೇನ್ ರಿಚರ್ಡ್‌ಸನ್, ಆಡಮ್ ಝಂಪಾ
ಬೆಂಚ್: ಮೋಸೆಸ್ ಹೆನ್ರಿಕ್ಸ್, ಜೋಶ್ ಹ್ಯಾಜಲ್ವುಡ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್
ಶ್ರೀಲಂಕಾ ಆಡುವ ಬಳಗ: ಕಮಿಲ್ ಮಿಶ್ರಾ, ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕ, ಕುಸಲ್ ಮೆಂಡಿಸ್, ಜನಿತ್ ಲಿಯಾನಗೆ (ವಿಕೆಟ್ ಕೀಪರ್), ದಸುನ್ ಶನಕ (ನಾಯಕ), ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಪ್ರವೀಣ್ ಜಯವಿಕ್ರಮ, ಮಹೇಶ್ ತೀಕ್ಷಣ, ಲಹಿರು ಕುಮಾರ
ಬೆಂಚ್: ಬಿನೂರ ಫೆರ್ನಾಂಡೊ, ನುವಾನ್ ತುಷಾರ, ಶಿರಾನ್ ಫೆರ್ನಾಂಡೊ, ಅವಿಷ್ಕಾ ಫೆರ್ನಾಂಡೊ, ರಮೇಶ್ ಮೆಂಡಿಸ್, ದನುಷ್ಕಾ ಗುಣತಿಲಕ, ದಿನೇಶ್ ಚಾಂಡಿಮಲ್, ಜೆಫ್ರಿ ವಾಂಡರ್ಸೆ