ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ ಏಕದಿನ ಸರಣಿಯನ್ನು 2-1 ರಿಂದ ಗೆದ್ದು ಇತಿಹಾಸವನ್ನು ಸೃಷ್ಟಿಸಿತ್ತು. ಇದೀಗ ವಾರದೊಳಗೆ ಆಸ್ಟ್ರೇಲಿಯಾ ಈ ಸೋಲಿಗೆ ಸೇಡು ತೀರಿಸಿಕೊಂಡಿದೆ. ಪಾಕಿಸ್ತಾನ ವಿರುದ್ಧದ ಟಿ20 ಸರಣಿಯನ್ನು ಕಾಂಗೂರು ವಶಪಡಿಸಿಕೊಂಡಿದೆ. ಸಿಡ್ನಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಪ್ರವಾಸಿ ಪಾಕಿಸ್ತಾನವನ್ನು 13 ರನ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಸೋಲು ಮೊಹಮ್ಮದ್ ರಿಜ್ವಾನ್ ನಾಯಕತ್ವಕ್ಕೂ ಕುತ್ತು ತಂದಿದೆ.
ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 147 ರನ್ ಕಲೆ ಹಾಕಿತು. ಆಸ್ಟ್ರೇಲಿಯಾ ಪರ ಆರಂಭಿಕ ಬ್ಯಾಟರ್ ಮ್ಯಾಥ್ಯೂ ಶಾರ್ಟ್ ಅವರು 38 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್ ಆದರು. ಆರನ್ ಹಾರ್ಡಿ 28 ಹೊಡೆದು ಆಸ್ಟ್ರೇಲಿಯಾಕ್ಕೆ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇನ್ನುಳಿದ ಯಾವುದೇ ಆಸ್ಟ್ರೇಲಿಯಾ ಬ್ಯಾಟರ್ ಪಾಕಿಸ್ತಾನ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲಿಲ್ಲ. ಪಾಕಿಸ್ತಾನ ಪರ ಅದ್ಭುತ ಬೌಲಿಂಗ್ ಪ್ರದರ್ಶನ ಕಂಡು ಬಂತು. ವೇಗದ ಬೌಲರ್ ಹಾರಿಸ್ ರೌಫ್ 4 ವಿಕೆಟ್ ಪಡೆದು ಮಿಂಚಿದರು. ಅಬ್ಬಾಸ್ ಅಫ್ರಿದಿ 3 ಮತ್ತು ಸೂಫಿಯಾನ್ ಮುಖೀಮ್ 2 ವಿಕೆಟ್ ಉರುಳಿಸಿದರು.

ಆಸ್ಟ್ರೇಲಿಯಾ ನೀಡಿದ 148 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ ಕೇವಲ 134 ರನ್‌ಗಳಿಗೆ ಆಲೌಟಾಯಿತು. ಆಸ್ಟ್ರೇಲಿಯಾದ ಸ್ಪೆನ್ಸರ್ ಜಾನ್ಸನ್ ಪಾಕಿಸ್ತಾನದ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.ಸ್ಪೆನ್ಸರ್ ಜಾನ್ಸನ್ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 26 ರನ್ ಬಿಟ್ಟು ಕೊಟ್ಟು 5 ವಿಕೆಟ್ ಪಡೆದು ಆಸ್ಟ್ರೇಲಿಯಾದ ಗೆಲುವಿಗೆ ನೆರವಾದರು.
ಪಾಕಿಸ್ತಾನ ಪರ ಜವಾಬ್ದಾರಿ ಬ್ಯಾಟಿಂಗ್ ಮಾಡಿದ ಉಸ್ಮಾನ್ ಖಾನ್ ಅವರು ಅರ್ಧಶತಕ ಬಾರಿಸಿ ಗೆಲುವು ತಂದುಕೊಡಲು ಹೋರಾಡಿದರು. ಉಸ್ಮಾನ್ ಖಾನ್ 38 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 52 ರನ್ ಗಳಿಸಿ ಔಟಾದರು. ಇದರ ಹೊರತಾಗಿಯೂ ಯಾವುದೇ ಪಾಕ್ ಬ್ಯಾಟರ್ ರನ್ ಗಳಿಸಲು ಸಾಧ್ಯವಾಗಲಿಲ್ಲ.
ಪಾಕಿಸ್ತಾನದ ಸ್ಟಾರ್ ಬ್ಯಾಟರ್‌ಗಳಾದ ಬಾಬರ್ ಅಜಮ್ (3) ಮತ್ತು ನಾಯಕ ಮೊಹಮ್ಮದ್ ರಿಜ್ವಾನ್ (16) ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆದರೆ ಉಸ್ಮಾನ್ ಖಾನ್ ಮತ್ತು ಇರ್ಫಾನ್ ಖಾನ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಶತಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ. ಪಾಕಿಸ್ತಾನ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ 29 ರನ್‌ಗಳಿಂದ ಗೆದ್ದುಕೊಂಡಿತ್ತು. ಇದೀಗ ಸರಣಿಯ ಮೂರನೇ ಪಂದ್ಯ ನವೆಂಬರ್ 18 ರಂದು ಹೋಬರ್ಟ್‌ನಲ್ಲಿ ನಡೆಯಲಿದೆ.
ಮೊಹಮ್ಮದ್ ರಿಜ್ವಾನ್ ನಾಯಕತ್ವದಲ್ಲಿ ಪಾಕಿಸ್ತಾನ ಮೊದಲ ಟಿ20 ಸರಣಿ ಸೋತಿದೆ. ಇದು ಅವೆರ ನಾಯಕತ್ವಕ್ಕೆ ಕಳಂಕ ತಂದಿದೆ. ಈ ಟಿ20 ಸರಣಿಯಲ್ಲಿ ರಿಜ್ವಾನ್‌ಗೆ ವಿಶೇಷ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಮೊದಲ ಪಂದ್ಯದಲ್ಲಿ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಕೇವಲ ಎರಡು ಎಸೆತಗಳನ್ನು ಎದುರಿಸಿದ ಅವರು ಔಟಾಗಿದ್ದರು.