Axar Patel: ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ 5ನೇ ಕ್ರಿಕೆಟಿಗ ಅಕ್ಷರ್ ಪಟೇಲ್

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತು. ಈ ಮೂಲಕ ಆತಿಥೇಯ ಭಾರತ ತಂಡ ನಾಲ್ಕು ಪಂದ್ಯಗಳ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು.
ಇದೇ ವೇಳೆ ಭಾರತದ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಅಪರೂಪದ ದಾಖಲೆಯನ್ನು ಬರೆದರು. ತಮ್ಮ ವೃತ್ತಿಜೀವನದ ಕೇವಲ 12 ಟೆಸ್ಟ್ ಪಂದ್ಯಗಳನ್ನು ಆಡಿ 500 ರನ್ ಬಾರಿಸಿ ಮತ್ತು 50 ವಿಕೆಟ್ ಪಡೆದ ವಿಶ್ವದ 5ನೇ ಕ್ರಿಕೆಟಿಗ ಎನಿಸಿಕೊಂಡರು.
ಅಕ್ಷರ್ ಪಟೇಲ್ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ 513 ರನ್ ಮತ್ತು 50 ವಿಕೆಟ್‌ಗಳನ್ನು ಗಳಿಸಿದ್ದಾರೆ. ಅನುಭವಿ ರವಿಚಂದ್ರನ್ ಅಶ್ವಿನ್ (596 ರನ್ ಮತ್ತು 63 ವಿಕೆಟ್) ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಅಕ್ಷರ್ ಪಟೇಲ್ ಪಾತ್ರರಾದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಆಬ್ರೆ ಫಾಕ್ನರ್ (682 ರನ್ ಮತ್ತು 52 ವಿಕೆಟ್), ಆಸ್ಟ್ರೇಲಿಯಾದ ಜಾಕ್ ಗ್ರೆಗೊರಿ (744 ರನ್ ಮತ್ತು 57 ವಿಕೆಟ್) ಮತ್ತು ಇಂಗ್ಲೆಂಡ್‌ನ ಇಯಾನ್ ಬಾಥಮ್ (549 ರನ್ ಮತ್ತು 70 ವಿಕೆಟ್), ಭಾರತದ ರವಿಚಂದ್ರನ್ ಅಶ್ವಿನ್ (596 ರನ್ ಮತ್ತು 63 ವಿಕೆಟ್) ನಂತರದ ಸ್ಥಾನದಲ್ಲಿ ಅಕ್ಷರ್ ಪಟೇಲ್ ಇದ್ದಾರೆ.

ಅಕ್ಷರ್ ಪಟೇಲ್ ಅವರು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ 2023ರ ಸರಣಿಯಲ್ಲಿ ಮೂರನೇ ಅರ್ಧಶತಕ ಬಾರಿಸಿದರು. ಈ ಮೂಲಕ 264 ರನ್‌ಗಳೊಂದಿಗೆ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದರು.
ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ (333 ರನ್) ಮತ್ತು ಭಾರತದ ವಿರಾಟ್ ಕೊಹ್ಲಿ (297 ರನ್) ನಂತರದ ಸ್ಥಾನದಲ್ಲಿ ಅಕ್ಷರ್ ಪಟೇಲ್ ಇದ್ದಾರೆ. ಅಲ್ಲದೇ, ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ.
ಭಾರತ ತಂಡದ ಆಲ್‌ರೌಂಡರ್ ಅಕ್ಷರ್ ಪಟೇಲ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿರುವ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್, ಬ್ಯಾಟಿಂಗ್‌ನಲ್ಲಿ ಅಸಾಧಾರಣ ಆಟವಾಡಿದ್ದಾರೆ ಮತ್ತು ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೆಚ್ಚಿನ ಅವಕಾಶ ಪಡೆಯಲಿಲ್ಲ ಎಂದು ಶ್ಲಾಘಿಸಿದ್ದಾರೆ.

"ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಆಸ್ಟ್ರೇಲಿಯಾ ಬ್ಯಾಟರ್‌ಗಳಿಗೆ ಕಾಟ ನೀಡಿದರು. ಅಕ್ಷರ್ ಪಟೇಲ್ ಬ್ಯಾಟಿಂಗ್‌ನಲ್ಲಿ ಅದ್ಭುತವಾಗಿದ್ದರು. 8 ಅಥವಾ 9ನೇ ಕ್ರಮಾಂಕದಲ್ಲಿ ಬಂದು ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದು ಸಾಮಾನ್ಯ ಕೆಲಸವಲ್ಲ," ಎಂದು ಅಕ್ಷರ್ ಪಟೇಲ್ ಬಗ್ಗೆ ಹರ್ಭಜನ್ ಸಿಂಗ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
"ಅಕ್ಷರ್ ಪಟೇಲ್ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯ ಮೂಲಕ ರನ್ ಗಳಿಸಿದರು ಮತ್ತು ಭಾರತ ತಂಡ ಮುನ್ನಡೆ ಪಡೆಯುವಲ್ಲಿ ಸಹಕರಿಸಿದರು. ಅಕ್ಷರ್ ಪಟೇಲ್ ಈಗ ಬ್ಯಾಟ್‌ನೊಂದಿಗೆ ಮಿಂಚಿ ಆಲ್‌ರೌಂಡರ್ ಎಂದು ಸಾಬೀತುಪಡಿಸುವುದನ್ನು ನೋಡಲು ಖುಷಿಯಾಗುತ್ತಿದೆ," ಎಂದು ಹರ್ಭಜನ್ ಸಿಂಗ್ ಅವರು ಅಕ್ಷರ್ ಪಟೇಲ್ ಆಟವನ್ನು ಕೊಂಡಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications