ಗಾಯದಿಂದಾಗಿ ಕಳೆದ ಎರಡು ತಿಂಗಳಿನಿಂದ ಮೈದಾನದಿಂದ ದೂರವಾಗಿದ್ದ ಅಕ್ಷರ್ ಪಟೇಲ್ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಅಕ್ಷರ್ ಪಟೇಲ್ ಆಯ್ಕೆಯಾಗುವ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಸಜ್ಜಾಗುತ್ತಿದ್ದಾರೆ. ಮುಂದಿನ ಜೂನ್‌ನಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್ ಟೂರ್ನಿಯ ದೃಷ್ಟಿಯಿಂದ ಅಕ್ಷರ್ ಈ ಸರಣಿಯ ಮೂಲಕ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವತ್ತ ಚಿತ್ತ ನೆಡಲಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯ ಆರಂಭಕ್ಕೆ ಕೆಲವೇ ದಿನಗಳಿರುವಾಗ ಅಕ್ಷರ್ ಪಟೇಲ್ ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಿಂದ ಅಕ್ಷರ್ ಅನಿವಾರ್ಯವಾಗಿ ಹೊರಗುಳಿಯುವಂತಾಯಿತು. ಗಾಯದಿಂದ ಅಕ್ಷರ್ ಪಟೇಲ್ ಈಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾದ ಭಾಗವಾಗಿದ್ದು ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಇನ್ನು ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುತ್ತಿರುವ ವಿಚಾರವಾಗಿ ಅಕ್ಷರ್ ಪಟೇಲ್ ಜಿಯೋ ಸಿನಿಮಾ ಜೊತೆಗೆ ಮಾತನಾಡಿದ್ದಾರೆ. "ವಿಶ್ವಕಪ್ ಟೂರ್ನಿಯಲ್ಲಿ ಅವಕಾಶ ಕಳೆದುಕೊಂಡಿದ್ದಕ್ಕೆ ನಾಣು ಬಹಳ ಬೇಸರಗೊಂಡಿದ್ದೇನೆ. ಆದರೆ ಈಗ ಕಾರ್ಯಾರಂಭ ಮಾಡಲು ಇದು ಅದ್ಭುತವಾದ ಅವಕಾಶ" ಎಂದಿದ್ದಾರೆ ಅಕ್ಷರ್ ಪಟೇಲ್.
ಎಲ್ಲಾ ಮಾದರಿಯಲ್ಲಿಯೂ ಭಾರತ ತಂಡದ ಭಾಗವಾಗಿರುವ ಅಕ್ಷರ್ ಪಟೇಲ್ T20 ಮಾದರಿಯಲ್ಲಿ ಭಾರತದ ಪರವಾಗಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನಸೆಳೆದಿದ್ದಾರೆ. ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಕೌಶಲ್ಯಗಳನ್ನು ಪ್ರದರ್ಶಿಸುತ್ತಾರೆ. ತಿಲಕ್ ವರ್ಮಾ, ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ಸೇರಿದಂತೆ ನಾಲ್ವರು ಆಲ್‌ರೌಂಡರ್‌ಗಳ ಜೊತೆಗೆ 29 ವರ್ಷ ವಯಸ್ಸಿನ ಆಟಗಾರ ಈ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ನವೆಂಬರ್ 23 ಗುರುವಾರದಂದು ವಿಶಾಖಪಟ್ಟಣಂನ ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ಆಯೋಜನೆಯಾಗಲಿದೆ. ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು ಅದಕ್ಕೂ ಅರ್ಧ ಗಂಟೆ ಮುನ್ನ ಅಂದರೆ 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಪೋರ್ಟ್ಸ್ 18-1 ಹಾಗೂ ಸ್ಪೋರ್ಟ್ಸ 18-1 HDಯಲ್ಲಿ ಈ ಪಂದ್ಯ ನೇರಪ್ರಸಾರವಾಗಲಿದೆ. ಇನ್ನು ಜಿಯೋ ಸಿನಿಮಾದಲ್ಲಿ ಈ ಪಂದ್ಯದ ಲೈವ್‌ಸ್ಟ್ರೀಮಿಂಗ್ ಆಗಲಿದೆ.
ಟೀಮ್ ಇಂಡಿಯಾ ಸಂಭಾವ್ಯ XI: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್/ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್, ಶಿವಂ ದುಬೆ/ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಮುಖೇಶ್ ಕುಮಾರ್
ಆಸ್ಟ್ರೇಲಿಯಾ ಸಂಭಾವ್ಯ XI: ಮ್ಯಾಥ್ಯೂ ವೇಡ್, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್, ಆರನ್ ಹಾರ್ಡಿ, ನಾಥನ್ ಎಲ್ಲಿಸ್, ಕೇನ್ ರಿಚರ್ಡ್ಸನ್ / ಶಾನ್ ಅಬಾಟ್, ಜೇಸನ್ ಬೆಹ್ರೆನ್ಡಾರ್ಫ್, ಆಡಮ್ ಝಂಪಾ