ಚೆನ್ನೈ: ಯುವ ಆಟಗಾರ ಆಯುಷ್ ಮಾತ್ರೆ ಬಾರಿಸಿದ ಅರ್ಧಶತಕ ಹಾಗೂ ಭರವಸೆಯ ಬ್ಯಾಟರ್ ಸರ್ಫರಾಜ್ ಖಾನ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ನೀಡಿದೆ.
ಪಂಜಾಬ್ ವಿರುದ್ದ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಚೆನ್ನೈ ತಂಡದ ಆರಂಭ ಕಳಪೆಯಾಗಿತ್ತು. ಟಿ20 ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ್ದ ಸಂಜು ಸ್ಯಾಮ್ಸನ್ ಈ ಲೀಗ್‌ನ ಎರಡನೇ ಪಂದ್ಯದಲ್ಲೂ ನಿರಾಸೆಯನ್ನು ಅನುಭವಿಸಿದರು. ಸಿಎಸ್‌ಕೆ 14 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಸಂಕಷ್ಟದಲ್ಲಿದ್ದ ತಂಡಕ್ಕೆ ಆಯುಷ್ ಮಾತ್ರೆ ಹಾಗೂ ನಾಯಕ ರುತುರಾಜ್ ಗಾಯಕ್ವಾಡ್ ಜೋಡಿ ಸೊಗಸಾದ ಪ್ರದರ್ಶನ ನೀಡಿತು. ಈ ಜೋಡಿ ಎರಡನೇ ವಿಕೆಟ್‌ಗೆ 55 ಎಸೆತಗಳಲ್ಲಿ 96 ರನ್ ಸಿಡಿಸಿತು. ಈ ಹಂತದಲ್ಲಿ ನಾಯಕ ರುತುರಾಜ್ ಗಾಯಕ್ವಾಡ್ (28) ತಾಳ್ಮೆಯನ್ನು ಕಳೆದುಕೊಂಡರು. ಇವರು ಚಾಹಲ್ ತೋಡಿದ ಖೆಡ್ಡಾಗೆ ಬಲಿಯಾದರು. 18 ವರ್ಷದ ಆಯುಷ್ ಮಾತ್ರೆ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಇವರು 43 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ಸಹಾಯದಿಂದ 73 ರನ್ ಸಿಡಿಸಿ ತಂಡಕ್ಕೆ ನೆರವಾದರು.
ದುಬಾರಿ ಯುವ ಆಟಗಾರ ಕಾರ್ತಿಕ್ ಶರ್ಮಾ (1) ಮಾರ್ಕೊ ಜಾನ್ಸನ್ ತೋಡಿದ ಖೆಡ್ಡಾಗೆ ಬಲಿಯಾದರು. ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ಭರವಸೆಯ ಬ್ಯಾಟರ್ ಸರ್ಫರಾಜ್ ಖಾನ್ ಅಬ್ಬರಿಸಿದರು. ಇವರು 12 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 2 ರನ್ ಬಾರಿಸಿ ಮಿಂಚಿದರು. ಇವರ ಉತ್ತಮ ಆಟದ ನೆರವಿನಿಂದ ಚೆನ್ನೈ ಸ್ಪರ್ಧಾತ್ಮಕ ಕಲೆ ಹಾಕುವಲ್ಲಿ ಸಫಲವಾಯಿತು.
ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್ ಶಿವಂ ದುಬೆ ಆರ್ಭಟಿಸಿದರು. ಇವರು ಕೇವಲ 27 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 45 ರನ್ ಸಿಡಿಸಿದರು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 209 ರನ್ ಸಿಡಿಸಿತು. ಪಂಜಾಬ್ ಪರ ಕನ್ನಡಿಗ ವೈಶಾಖ್ ವಿಜಾಯ್‌ಕುಮಾರ್ 2 ವಿಕೆಟ್ ಪಡೆದರೆ, ಜೇವಿಯರ್ ಬಾರ್ಟ್ಲೆಟ್, ಮಾರ್ಕೊ ಜಾನ್ಸನ್, ಯುಜುವೇಂದ್ರ ಚಾಹಲ್ ತಲಾ ಒಂದು ವಿಕೆಟ್ ಪಡೆದರು.