ಎಸ್‌ಜಿ ಬಾಲ್ ಟೀಕಿಸಿದ ಆಟಗಾರರ ತರಾಟೆಗೆ ತೆಗೆದುಕೊಂಡ ಅಜರುದ್ದೀನ್

ನವದೆಹಲಿ, ಅಕ್ಟೋಬರ್ 16: ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಯಾನ್ಸ್ಪರೆಲ್ಸ್ ಗ್ರೀನ್‌ಲ್ಯಾಂಡ್ಸ್ (ಎಸ್‌ಜಿ) ಬಾಲ್ ಗಳ ಬದಲಿಗೆ ಡ್ಯೂಕ್ಸ್ ಬಾಲ್ ಗಳನ್ನು ಬಳಸಬೇಕು ಎಂಬ ಭಾರತದ ಆಟಗಾರರ ಆಗ್ರಹಕ್ಕೆ ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ತಿರುಗೇಟು ನೀಡಿದ್ದಾರೆ.
ತಾನು ನಾಯಕನಾಗಿದ್ದಾಗ ತಂಡದ ಸ್ಪಿನ್ನರ್ ಗಳಿಗೆ ಎಸ್‌ಜಿ ಬಾಲ್ ಉತ್ತಮ ಹಿಡಿತ ಸಾಧಿಸುವಲ್ಲಿ ನೆರವಾಗಿದ್ದನ್ನು ಅಜರ್ ಗಮನಿಸಿದ್ದರು. ಹೀಗಾಗಿ ತವರು ನೆಲದಲ್ಲಿ ಪಾರಮ್ಯ ಮೆರೆಯಲು ತಂಡಕ್ಕೆ ಎಸ್‌ಜಿ ಬಾಲ್ ಗಳೇ ನೆರವಾಗೋದು ಎಂದವರು ಹೇಳಿದ್ದಾರೆ.
ಭಾರತದಲ್ಲಿ ಎಸ್‌ಜಿ ಬಾಲ್ ಗಳು ಮೊದಲ ಬಾರಿಗೆ ಪರಿಚಯಿಸಲ್ಪಟ್ಟಿದ್ದು 1993ರಲ್ಲಿ. ಆ ವೇಳೆ ಅಜರುದ್ದೀನ್ ಭಾರತ ತಂಡದ ನಾಯಕರಾಗಿದ್ದರು. ಆ ಸಂದರ್ಭ ಎಸ್‌ಜಿ ಬಾಲ್ ಗಳು ತವರು ನೆಲದ ಪರಿಸ್ಥಿತಿಗಳಿಗೆ ಹೊಂದಿಕೊಂಡು ತಂಡಕ್ಕೆ ನೆರವಾಗುವುದನ್ನು ಅವರು ಮನಗಂಡಿದ್ದರು.

ಡ್ಯೂಕ್ಸ್ ಕೆಲಸಕ್ಕೆ ಬರೋಲ್ಲ
'ಡ್ಯೂಕ್ಸ್ ಬಾಲ್ ಗಳು ಬಳಕೆ ಬಂದ 1984-85ರ ದಿನಗಳಿಂದಲೂ ನಾನು ನೆನಪಿಸಿಕೊಳ್ಳಬಲ್ಲೆ. ಡ್ಯೂಕ್ಸ್ ಬಾಲ್ ಗಳು ಬಳಸಿದಂತೆ ಇನ್ನಷ್ಟು ಒಟರಾಗುತ್ತ ಹೋಗುತ್ತೆ. ಇದರಿಂದ ಒಂದಂತೂ ಸ್ಪಷ್ಟ; ಏನೆಂದರೆ ಡ್ಯೂಕ್ಸ್ ಬಾಲ್ ಗಳು ಭಾರತದ ಪರಿಸ್ಥಿತಿಗೆ ಕೆಲಸಕ್ಕೆ ಬರೋಲ್ಲ' ಎಂದು ಅಜರುದ್ದೀನ್ ತಿಳಿಸಿದರು.

ಉಳಿದ ದೇಶಗಳನ್ನೇ ಗಮನಿಸಿ ನೋಡಿ
ಸಂದರ್ಶನವೊಂದರಲ್ಲಿ ಮಾತನಾಡುತ್ತ ಅಜರ್, '1993ರಲ್ಲಿ ಎಸ್‌ಜಿ ಬಾಲ್ ಗಳು ಪರಿಚಯಿಸಲ್ಪಟ್ಟಾಗಿನಿಂದಲೂ ನಾನು ಗಮನಿಸಿದ್ದೇನೆ. ತವರಿನಲ್ಲಿ ಪಂದ್ಯಗಳು ನಡೆಯುವಾಗ ಎಸ್‌ಜಿ ಬಾಲ್ ಗಳು ಭಾರತ ಪಾರಮ್ಯ ಮೆರೆಯಲು ನೆರವಾಗುತ್ತವೆ. ಹಾಗಂತ ನಾವಷ್ಟೆ ಹೀಗೆ ಮಾಡುತ್ತೇವಂತಲ್ಲ. ಉಳಿದೆಲ್ಲ ದೇಶಗಳನ್ನು ಒಮ್ಮೆ ಗಮನಿಸಿ ನೋಡಿ; ವಿಭಿನ್ನ ಪರಿಸ್ಥಿತಿಗಳಿಗೆ ತಕ್ಕಂತೆ ಸರಾಸರಿ ಬೌಲರ್ ಗಳು ವಿಭಿನ್ನ ಬಾಲ್ ಗಳನ್ನು ಬಳಸೋದಿದೆ. ಇದೇ ನಿಮಗೆ ಉತ್ತರ ನೀಡುತ್ತೆ' ಎಂದರು.

ಕೊಹ್ಲಿಯೂ ಅಸಮಾಧಾನ
ಭಾರತ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಎಸ್‌ಜಿ ಬಾಲ್ ಗಳನ್ನು ಬಳಸಿದ್ದಕ್ಕಾಗಿ ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್ ಮತ್ತು ನಾಯಕ ವಿರಾಟ್ ಕೊಹ್ಲಿ ತಕರಾರು ತೆಗೆದಿದ್ದರು. ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಇದೇ ಟೆಸ್ಟ್ ಸರಣಿ ವೇಳೆ ಭಾರತದ ಬೌಲರ್ ಗಳಾದ ಉಮೇಶ್ ಯಾದವ್ ಮತ್ತು ಕುಲದೀಪ್ ಯಾದವ್ ಭರ್ಜರಿ ಪಾರಮ್ಯ ಮೆರೆದಿದ್ದೂ ಕಂಡು ಬಂದಿತ್ತು.

ಅಂಕಿ ಅಂಶಗಳೇ ಎಲ್ಲಾ ಹೇಳ್ತವೆ
ವಿಂಡೀಸ್ ಟೆಸ್ಟ್ ಸರಣಿ ವೇಳೆ ಭಾರತದ ಆಟಗಾರರು ಎಸ್‌ಜಿ ಬಾಲ್ ಗಳಿಗೆ ಅಸಮಾಧಾನ ತೋರ್ಪಡಿಸಿ, ಡ್ಯೂಕ್ಸ್ ಬಾಲ್ ಗಳು ಬೇಕೆಂದಿದ್ದನ್ನು ಉಲ್ಲೇಖಿಸಿದ ಅಜರುದ್ದೀನ್, 'ಅವರ (ತಂಡದ) ಗೊಂದಲ ಏನೆಂಬುದೇ ನನಗೆ ಅರ್ಧವಾಗುತ್ತಿಲ್ಲ. ತವರಿನಲ್ಲಿ ಎಸ್‌ಜಿ ಬಾಲ್ ಗಳ ಪ್ರಾಮುಖ್ಯತೆ ಏನೆಂಬುದನ್ನು ಇತ್ತೀಚಿನ ವಿಂಡೀಸ್ ವಿರುದ್ಧದ ಪಂದ್ಯದಲ್ಲಿನ ಅಂಕಿ ಅಂಶಗಳು ಹೇಳುತ್ತವೆ' ಎಂದು ಉಮೇಶ್ ಯಾದವ್, ಕುಲದೀಪ್ ಯಾದವ್ ಅವರನ್ನು ಉದಾಹರಿಸಿದರು.ದ್ವಿತೀಯ ಟೆಸ್ಟ್ ನಲ್ಲಿ ಉಮೇಶ್ 6+4, ಕುಲದೀಪ್ 3+1 ವಿಕೆಟ್ ಕೆಡವಿ ವಿಂಡೀಸ್ ತಂಡವನ್ನು ಕಾಡಿದ್ದರು.

ಇಂಗ್ಲೆಂಡ್ ನಲ್ಲಿ ಏನಾಯಿತು?
'ಆಸ್ಟ್ರೇಲಿಯಾಕ್ಕೆ ಹೋದಾಗ ಭಾರತದ ಸ್ಪಿನ್ನರ್ ಗಳು ಕೂಕಬುರ ಮೇಲೆ ಹಿಡಿತ ಸಾಧಿಸಲು ಹೆಣಗಾಡುತ್ತಾರೆ. ಅದೇ ಇಂಗ್ಲೆಂಡ್ ನಲ್ಲಿ ಡ್ಯೂಕ್ಸ್ ಬಾಲ್ ಬಳಸಿದ್ದಾಗ ಅಶ್ವಿನ್ ಮತ್ತು ಮೋಯೀನ್ ಆಲಿ ಹೇಗೆ ಬೌಲಿಂಗ್ ಮಾಡಿದ್ದರು ಯೋಚಿಸಿ ನೋಡಿ. ಆಯಾ ದೇಶದ ಪರಿಸ್ಥಿತಿಗೆ ಹೊಂದಿಕೊಳ್ಳೋ ಬಾಲ್ ಗಳನ್ನು ಅವರವರು ಬಳಸುತ್ತಿದ್ದಾರೆ' ಎಂದು ಅಜರುದ್ದೀನ್ ನೆನಪಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications