ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಅಜಮ್ ತಮ್ಮ ಫಾರ್ಮ್‌ಗೆ ಮರಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 73 ರನ್‌ಗಳನ್ನು ಬಾರಿಸುವ ಮೂಲಕ ಬಾಬರ್ ಅಜಮ್ ಕಳಪೆ ಫಾರ್ಮ್‌ನಿಂದ ಮುಕ್ತಿ ಪಡೆದಿದ್ದಾರೆ. ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಬಾಬರ್ ತಮ್ಮ ನಾಯಕತ್ವವನ್ನು ಕಳೆದುಕೊಂಡಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ 73 ರನ್‌ಗಳನ್ನು ಕಲೆ ಹಾಕಿದ ಬಾಬರ್ ಅಜಮ್ ದೊಡ್ಡ ಸಾಧನೆಯ ಸನಿಹಕ್ಕೆ ಬಂದಿದ್ದಾರೆ. ಭಾರತದ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಅವರಿಂದ ಸಾಧ್ಯವಾಗದ ದಾಖಲೆಯನ್ನು ಮಾಡಲು ಬಾಬರ್ ಅಜಮ್ ಸಜ್ಜಾಗಿದ್ದಾರೆ.
ಬಾಬರ್ ಅಜಮ್ ಏಕದಿನ ಕ್ರಿಕೆಟ್‌ನಲ್ಲಿ ಇದುವರಗೆ 5905 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 95 ರನ್ ಗಳಿಸಿ ಯಶಸ್ವಿಯಾದರೆ ದಾಖಲೆ ಸೃಷ್ಟಿಸಲಿದ್ದಾರೆ. ಇದರೊಂದಿಗೆ ಬಾಬರ್ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 6000 ರನ್‌ಗಳನ್ನು ಪೂರೈಸಿದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

ಪ್ರಸ್ತುತ ಏಕದಿನ ಕ್ರಿಕೆಟ್‌ನಲ್ಲಿ ಈ ದಾಖಲೆಯು 123 ಪಂದ್ಯಗಳಲ್ಲಿ 6000 ರನ್‌ಗಳನ್ನು ಹೊಡೆದಿರುವ ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ ಹೆಸರಿನಲ್ಲಿದೆ. ಬಾಬರ್ ಇದುವರೆಗೆ 119 ಪಂದ್ಯಗಳಲ್ಲಿ 5905 ರನ್ ಗಳಿಸಿದ್ದಾರೆ. ಇದರಲ್ಲಿ 19 ಶತಕಗಳು ಮತ್ತು 33 ಅರ್ಧ ಶತಕಗಳು ಸೇರಿವೆ.
ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 6000 ರನ್ ಪೂರೈಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್‌ರಂತಹ ಸ್ಟಾರ್ ಬ್ಯಾಟರ್‌ಗಳು ಹಿಂದೆ ಉಳಿದಿದ್ದಾರೆ. ಇದೀಗ ಬಾಬರ್ ಅಜಮ್ ಅವರು ಕೊಹ್ಲಿ ಮತ್ತು ವಾರ್ನರ್ ಅನ್ನು ಹಿಂದಿಕ್ಕುವ ಮೂಲಕ ಈ ಸಾಧನೆಯ ಹತ್ತಿರದಲ್ಲಿದ್ದಾರೆ. ವಿರಾಟ್ ಕೊಹ್ಲಿ 136 ಪಂದ್ಯಗಳನ್ನು ಆಡುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 6000 ರನ್ ಕಲೆ ಹಾಕಿದ್ದಾರೆ. ಮತ್ತೊಂದೆಡೆ ಡೇವಿಡ್ ವಾರ್ನರ್ ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ 139 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಶಿಖರ್ ಧವನ್ 140 ಪಂದ್ಯಗಳನ್ನು ಆಡುವ ಮೂಲಕ ತಮ್ಮ ಹೆಸರಿನಲ್ಲಿ ದಾಖಲೆಯನ್ನು ಹೊಂದಿದ್ದಾರೆ.
ಪಾಕಿಸ್ತಾನ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲು ಬಾಬರ್ ಸಜ್ಜಾಗಿದ್ದಾತೆ. ಇದುವರಗೆ ಈ ದಾಖಲೆ ಸಯೀದ್ ಅನ್ವರ್ ಹೆಸರಿನಲ್ಲಿದೆ. ಇದೀಗ ಬಾಬರ್ ಒಂದು ಶತಕ ಸಿಡಿಸಿದರೆ, ಸಯೀದ್ ಅನ್ವರ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಬಾಬರ್ ಇದುವರೆಗೆ ಏಕದಿನ ಕ್ರಿಕೆಟ್‌ನಲ್ಲಿ 19 ಶತಕ ಸಿಡಿಸಿದ್ದರೆ. ಅನ್ವರ್ 20 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.