Virat Kohli vs Babar Azam: ವಿರಾಟ್ ಕೊಹ್ಲಿ vs ಬಾಬರ್ ಅಜಂ; ಮ್ಯಾಚ್ ವಿನ್ನರ್ ಯಾರೆಂದು ತಿಳಿಸಿದ ಶಾಹಿದ್ ಅಫ್ರಿದಿ

ವಿಶ್ವ ಕ್ರಿಕೆಟ್‌ನಲ್ಲಿ ಸದ್ಯ ಎರಡು ಹೆಸರುಗಳು ಹೆಚ್ಚು ಚಾಲ್ತಿಯಲ್ಲಿವೆ. ಅವರೆಂದರೆ, ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ. ತಮ್ಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ರನ್ ಶಿಖರ ನಿರ್ಮಿಸುತ್ತಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ.
ಈಗಲೂ ವಿಶ್ವದಾದ್ಯಂತ ಈ ಇಬ್ಬರು ಶ್ರೇಷ್ಠ ಕ್ರಿಕೆಟಿಗರ ನಡುವಿನ ಸಾಮ್ಯತೆ ಮತ್ತು ವ್ಯತ್ಯಾಸಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅದರಲ್ಲಿ ಮಾಜಿ ಕ್ರಿಕೆಟಿಗರೂ ಸೇರಿದ್ದಾರೆ. ಇದೀಗ ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಕೂಡ ಇಬ್ಬರ ನಡುವಿನ ವ್ಯತ್ಯಾಸ ತಿಳಿಸಿದ್ದಾರೆ.
ಬಾಬರ್ ಅಜಂ ಪಾಕಿಸ್ತಾನದಲ್ಲಿ ಭಾರಿ ಜನಪ್ರಿಯ ಕ್ರಿಕೆಟಿಗನಾಗಿದ್ದಾರೆ. ಭವಿಷ್ಯದಲ್ಲಿ ಪಾಕಿಸ್ತಾನದ ಶ್ರೇಷ್ಠ ಬ್ಯಾಟರ್ ಎಂದು ವೃತ್ತಿಜೀವನ ಮುಗಿಸಬಹುದಾದ ಆಟಗಾರ ಎಂದು ನೋಡಲಾಗುತ್ತದೆ. ಆದರೆ, ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಅವರು ಶ್ರೇಷ್ಠ ಕ್ರಿಕೆಟಿಗ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಬಾಬರ್ ಅಜಂ ಇನ್ನೂ ಪ್ರಗತಿಯ ಹಾದಿಯಲ್ಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮ್ಯಾಚ್ ವಿನ್ನರ್‌ಗಳ ಪಟ್ಟಿಯಲ್ಲಿ ಬಾಬರ್ ಅಜಂ ಇಲ್ಲ
ಬಾಬರ್ ಅಜಂ ವಿಶ್ವ ದರ್ಜೆಯ ಸ್ಥಾನಮಾನದ ಹೊರತಾಗಿಯೂ, ಭಾರತದ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರಂತಹ ಮ್ಯಾಚ್ ವಿನ್ನರ್‌ಗಳ ಪಟ್ಟಿಯಲ್ಲಿ ಇನ್ನೂ ಸ್ಥಾನ ಪಡೆದಿಲ್ಲ ಎಂದು ಶಾಹಿದ್ ಅಫ್ರಿದಿ ತಿಳಿಸಿದರು.
ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ತಮ್ಮ ಆಟದ ಉತ್ತುಂಗದಲ್ಲಿದ್ದಾಗ ಗೆಲ್ಲಿಸಿದಷ್ಟು ಪಂದ್ಯಗಳನ್ನು, ಪಾಕಿಸ್ತಾನ ತಂಡಕ್ಕೆ ಗೆಲ್ಲಿಸಲು ಬಾಬರ್ ಅಜಂಗೆ ಇನ್ನೂ ಸಾಧ್ಯವಾಗದಿರುವುದು ಒಂದು ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.

2022ರ ವರ್ಷದ ಐಸಿಸಿ ಏಕದಿನ ತಂಡದ ನಾಯಕ ಬಾಬರ್ ಅಜಂ
"ನಿಸ್ಸಂದೇಹವಾಗಿ, ಬಾಬರ್ ಅಜಂ ವಿಶ್ವದ ನಂಬರ್ ಒನ್ ಆಟಗಾರ. ಆತ ಪಾಕಿಸ್ತಾನ ಕ್ರಿಕೆಟ್ ತಂಡದ ಹೆಮ್ಮೆ. ಆದರೆ, ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರೊಂದಿಗೆ ಹೋಲಿಸುವುದನ್ನು ತಡೆಯಬೇಕಿದೆ. ಏಕೆಂದರೆ, ಬಾಬರ್ ಅಜಂ ತನ್ನನ್ನು ತಾನು ಮ್ಯಾಚ್ ವಿನ್ನರ್ ಎಂದು ಇನ್ನೂ ಸಾಬೀತುಪಡಿಸಿಲ್ಲ," ಎಂದು ಶಾಹಿದ್ ಅಫ್ರಿದಿ ಪಾಕಿಸ್ತಾನದ ಸ್ಥಳೀಯ ಟಿವಿ ಚಾನೆಲ್‌ಗೆ ತಿಳಿಸಿದರು.
2022ರ ಕ್ಯಾಲೆಂಡರ್‌ನ ಕೊನೆಯಲ್ಲಿ ಬಾಬರ್ ಅಜಂ ಎರಡು ದೊಡ್ಡ ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಎಂಬುದನ್ನು ಮರೆಯುವಂತಿಲ್ಲ. ಐಸಿಸಿ ಪುರುಷರ ಏಕದಿನ ವರ್ಷದ ಆಟಗಾರ ಪ್ರಶಸ್ತಿ ಮತ್ತು ಐಸಿಸಿ ಪುರುಷರ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದರು. ಅಲ್ಲದೆ, 2022ರ ವರ್ಷದ ಐಸಿಸಿ ಏಕದಿನ ತಂಡದ ನಾಯಕರಾಗಿಯೂ ಅವರನ್ನು ಆಯ್ಕೆ ಮಾಡಲಾಗಿದೆ.

2023ರ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವ ದೊಡ್ಡ ಗುರಿ
ಬಾಬರ್ ಅಜಂ ಇತ್ತೀಚೆಗೆ ಐಸಿಸಿ ಸಂದರ್ಶನದಲ್ಲಿ ವೈಯಕ್ತಿಕ ಪ್ರಶಸ್ತಿಗಳು ತನಗೆ ಹೆಚ್ಚು ಮುಖ್ಯವಲ್ಲ ಎಂದು ಹೇಳಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ವರೆಗೆ ಪಾಕಿಸ್ತಾನ ತಂಡವನ್ನು ಮುನ್ನಡೆಸಿದರು ಮತ್ತು 2022ರ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ವರೆಗೆ ತಮ್ಮ ತಂಡವನ್ನು ಕೊಂಡೊಯ್ದರು. ಇದೀಗ 2023ರಲ್ಲಿ ನಡೆಯುವ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವ ದೊಡ್ಡ ಗುರಿ ಹೊಂದಿದ್ದಾರೆ.
"ವಿಶ್ವಕಪ್ ತಂಡದ ಭಾಗವಾಗುವುದು ಮತ್ತು ಪಂದ್ಯಾವಳಿಯನ್ನು ಗೆಲ್ಲುವುದು ನನ್ನ ಮಹತ್ವಾಕಾಂಕ್ಷೆಯಾಗಿದೆ. ಏಕದಿನ ವಿಶ್ವಕಪ್ ಹತ್ತಿರವಾಗುತ್ತಿದೆ ಮತ್ತು ನಾವು ಅದನ್ನು ಗೆಲ್ಲಲು ಉತ್ತಮ ಪ್ರದರ್ಶನ ನೀಡಬೇಕಿದೆ. ವೈಯಕ್ತಿಕ ಆಟವನ್ನು ನೋಡಿರುತ್ತೀರಿ, ಆದರೆ ನನ್ನ ಗುರಿ ವಿಶ್ವಕಪ್ ಗೆಲ್ಲುವುದಾಗಿದೆ," ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications