ಭಾನುವಾರ, ಜೂನ್ 9ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ 2024ರ ಎ ಗುಂಪಿನ ಪಂದ್ಯದಲ್ಲಿ ಭಾರತ ವಿರುದ್ಧ 6 ರನ್‌ಗಳಿಂದ ಸೋತ ನಂತರ, ತನ್ನ ಅಭಿಯಾನವನ್ನು ಅತ್ಯಂತ ಕಳೆಪೆಯಾಗಿ ಆರಂಭಿಸಿದೆ.
ಇದಕ್ಕೂ ಮುನ್ನ ಟೆಸ್ಟ್ ಆಡದಿರುವ ಅಮೆರಿಕ ವಿರುದ್ಧ ಇತ್ತೀಚಿನ ಆಘಾತಕಾರಿ ಸೋಲಿಗೆ ಶರಣಾಗುವ ಮೂಲಕ ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಪಯಣ ಕಳೆಗುಂದಿದೆ. ಈ ಆರಂಭಿಕ ಹಿನ್ನಡೆಯು ಒತ್ತಡದಲ್ಲಿ ತಂಡದ ದುರ್ಬಲತೆಯನ್ನು ಸಂಪೂರ್ಣವಾಗಿ ಒತ್ತಿಹೇಳುತ್ತದೆ.

ಪ್ರಬಲ ಸ್ಪರ್ಧಿಗಳಲ್ಲೊಬ್ಬರೆಂದು ಪರಿಗಣಿಸಲ್ಪಟ್ಟಿದ್ದರೂ, ಪಾಕಿಸ್ತಾನ ತಂಡ ಟೀಮ್ ಇಂಡಿಯಾ ವಿರುದ್ಧ ಮತ್ತೊಮ್ಮೆ ಮುಗ್ಗರಿಸಿತು. ಕಡಿಮೆ ಸ್ಕೋರಿಂಗ್ ರೋಚಕ ಪಂದ್ಯವನ್ನು ಕೇವಲ 6 ರನ್‌ಗಳಿಂದ ಸೋತಿತು.
2024ರ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ, ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರಿಂದ ಭಾರೀ ಟೀಕೆಗಳನ್ನು ಎದುರಿಸುತ್ತಿದೆ.
ಇದೇ ವೇಳೆ ಬಾಬರ್ ಅಜಂ ಜನರನ್ನು ಮೂರ್ಖರನ್ನಾಗಿಸಿದ್ದಾರೆ ಮತ್ತ ತನ್ನ ಸ್ನೇಹಿತರೊಂದಿಗೆ ಪಾಕಿಸ್ತಾನ ತಂಡವನ್ನು ರಚಿಸಿದ್ದಾರೆ ಎಂದು ಪಾಕಿಸ್ತಾನದ ಹೀನಾಯ ಸೋಲಿನ ನಂತರ ಮಾಜಿ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಹೇಳಿದ್ದಾರೆ.

ಪಾಕಿಸ್ತಾನದ ಮಾಜಿ ಆಟಗಾರರು ಬಾಬರ್ ಅಜಂ ಅವರ ನಾಯಕತ್ವ ಮತ್ತು ಪಿಸಿಬಿ ವಿರುದ್ಧ ತೀವ್ರವಾಗಿ ಟೀಕಿಸಿದ್ದಾರೆ. ತಂಡದ ಅವನತಿಗೆ ವಿವರಣೆಯನ್ನು ಕೇಳಿದ್ದಾರೆ.
ಮಾಜಿ ಆರಂಭಿಕ ಬ್ಯಾಟರ್ ಅಹ್ಮದ್ ಶೆಹಜಾದ್ ಮಾತನಾಡಿ, ಜನರನ್ನು ಮೂರ್ಖರನ್ನಾಗಿಸಿದ್ದಕ್ಕಾಗಿ ಬಾಬರ್ ಅಜಂ ಅವರನ್ನು ಟೀಕಿಸಿದರು. ತಂಡದೊಳಗೆ ಪಕ್ಷಪಾತ ಸೃಷ್ಟಿಸುತ್ತಿದ್ದಾರೆ ಮತ್ತು ತಮ್ಮ ಸ್ನೇಹಿತರೇ ತುಂಬಿದ ತಂಡವನ್ನು ಹೊಂದಿದ್ದಾರೆ ಎಂದು ಆರೋಪಿಸಿದರು.
ಬಾಬರ್ ಅಜಂ ನಾಯಕತ್ವದಲ್ಲಿ ಯುಎಸ್ಎನಂತಹ ಸಹವರ್ತಿ ರಾಷ್ಟ್ರಗಳು ಮತ್ತು ತಂಡಗಳ ವಿರುದ್ಧ ಸೋಲುತ್ತಿರುವುದಕ್ಕಾಗಿ ಪಾಕಿಸ್ತಾನ ತಂಡವನ್ನು ಅಹ್ಮದ್ ಶೆಹಜಾದ್ ಟೀಕಿಸಿದರು.
ಪಾಕಿಸ್ತಾನ ತಂಡದ ಫಾರ್ಮ್‌ನಲ್ಲಿನ ಕುಸಿತದ ಪರಿಣಾಮಗಳು ಕೆಟ್ಟದಾಗಿವೆ. ಏಕೆಂದರೆ ಬಾಬರ್ ಅಜಂ ಅವರ ನಾಯಕತ್ವದ ಶೈಲಿ ಮತ್ತು ಬ್ಯಾಟ್‌ನೊಂದಿಗೆ ಅವರು ಮುನ್ನಡೆಸುತ್ತಿರುವ ರೀತಿಯಿಂದಾಗಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.
"ಬಾಬರ್ ಅಜಂ ಪಾಕಿಸ್ತಾನ ತಂಡದ ನಾಯಕನಾದ ನಂತರ, ನಾವು ಸಾಧಾರಣ ತಂಡಗಳ ವಿರುದ್ಧ ಸೋತಿದ್ದೇವೆ," ಎಂದು ಅಹ್ಮದ್ ಶೆಹಜಾದ್ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದರು. ಅದರ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬಾಬರ್ ಅಜಂ ವಿರುದ್ಧ ವಾಗ್ದಾಳಿ ನಡೆಸಿದ ಅಹ್ಮದ್ ಶಹಜಾದ್
ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ ಅವರು ಪಾಕಿಸ್ತಾನ ತಂಡವನ್ನು ಭಾರತ ವಿರುದ್ಧದ ಗೆಲುವಿನ ಗೆರೆ ದಾಟಿಸಲು ಸಹಾಯ ಮಾಡಲು ವಿಫಲರಾದ ಕಾರಣ ಮಾಜಿ ಕ್ರಿಕೆಟಿಗ ಅಹ್ಮದ್ ಶಹಜಾದ್ ಅವರು ಸಿಡಿದೆದ್ದರು.
"ಕಳೆದ 4-5 ವರ್ಷಗಳಿಂದ ತಂಡವನ್ನು ನೋಡಿಕೊಳ್ಳುತ್ತಿರುವ ಆಟಗಾರರು ಇದ್ದಾರೆ. ಅವರು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ, ಭಾರತದ ವಿರುದ್ಧ ಮಹತ್ವದ ಪಂದ್ಯವನ್ನು ಗೆಲ್ಲಲು 120 ರನ್ ಬೆನ್ನಟ್ಟುವ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಅವರ ಕರ್ತವ್ಯವಲ್ಲವೇ?," ಅಹ್ಮದ್ ಶೆಹಜಾದ್ ಪ್ರಶ್ನಿಸಿದರು.
ಪಾಕಿಸ್ತಾನದ ಆರಂಭಿಕ ಜೋಡಿ ರಿಜ್ವಾನ್ ಮತ್ತು ಬಾಬರ್ ಭಾರತ ವಿರುದ್ಧ 120 ರನ್ ಚೇಸ್ ಮಾಡುವಾಗ 26 ರನ್ ಜೊತೆಯಾಟವನ್ನು ಹಂಚಿಕೊಂಡರು. ಪಾಕಿಸ್ತಾನವು 6 ರನ್‌ಗಳ ಅಂತರದಿಂದ ಗುರಿ ತಲುಪಿದಾಗ ಇಬ್ಬರೂ ಆಟಗಾರರು ತಮ್ಮ ವಿಕೆಟ್‌ಗಳನ್ನು ಬಿಟ್ಟುಕೊಟ್ಟರು.
ಅಹ್ಮದ್ ಶೆಹಜಾದ್ ತನ್ನ ಟೀಕೆಗಳನ್ನು ಬಾಬರ್ ಅಜಂ ಕಡೆಗೆ ತಿರುಗಿಸಿದನು. ದೊಡ್ಡ ಪಂದ್ಯಾವಳಿಗಳಲ್ಲಿ ಬಾಬರ್ ಅಜಂ ಅವರ ಅಂಕಿಅಂಶಗಳನ್ನು ಹೊತ್ತ ಕಾಗದದ ತುಂಡನ್ನು ಫ್ಲ್ಯಾಷ್ ಮಾಡುವಾಗ 'ಕಿಂಗ್' ಎಂಬ ಪದವನ್ನು ಉಲ್ಲೇಖಿಸಿ ಪಾಕಿಸ್ತಾನ ತಂಡದ ನಾಯಕನನ್ನು ಬಹುತೇಕ ಅಪಹಾಸ್ಯ ಮಾಡಿದರು.
"ದೊಡ್ಡ ಪಂದ್ಯಾವಳಿಗಳಲ್ಲಿ ಬಾಬರ್ ಅಜಂ ಸ್ಕೋರ್‌ಗಳು ಹೇಗಿದೆ? ಅವರ ಸರಾಸರಿ 27 ಮತ್ತು ಸ್ಟ್ರೈಕ್ ರೇಟ್ 112. ಇದೇ ವೇಳೆ 1400 ರನ್‌ಗಳು ಸೋಲಿನ ಕಾರಣದಿಂದ ಬಂದಿವೆ, ಅದು ಆ ಪಟ್ಟಿಯಲ್ಲಿ ವಿಶ್ವದ 3ನೇ ಸ್ಥಾನದಲ್ಲಿದೆ. ಹಾಗಾದರೆ ಈ ಅಂಕಿಅಂಶಗಳು ಯಾವ ಕಿಂಗ್‌ದು ಹೇಳಿ? ಪಂದ್ಯವನ್ನು ಗೆಲ್ಲಲಾಗದ ಈ ಕಿಂಗ್‌ನನ್ನು ನಾನು ಏನು ಮಾಡಬೇಕು?," ಎಂದು ಅಹ್ಮದ್ ಶೆಹಜಾದ್ ತಿಳಿಸಿದರು.
ಜೂನ್ 11ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಗೆಲ್ಲಲೇಬೇಕಾದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಕೆನಡಾ ತಂಡವನ್ನು ಎದುರಿಸಲಿದೆ.