ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರೀ ಟೀಕೆಗಳನ್ನು ಎದುರಿಸುತ್ತಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಪಾಕಿಸ್ತಾನ ತಂಡವನ್ನು ಬಾಂಗ್ಲಾದೇಶ ಹೀನಾಯವಾಗಿ ಸೋಲಿಸಿದೆ.
ತವರಿನಲ್ಲಿ ಬಾಂಗ್ಲಾದೇಶವನ್ನು ಮಣಿಸಲು ಸಾಧ್ಯವಾಗದ ಪಾಕಿಸ್ತಾನ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಧ್ಯಮಗಳು ಕೂಡ ಪಾಕ್ ತಂಡಕ್ಕೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಿವೆ. 2024ರ ಟಿ20 ವಿಶ್ವಕಪ್ ಬಳಿಕ ಪಾಕಿಸ್ತಾನ ತಂಡದಲ್ಲಿ ನಾಯಕತ್ವದ ವಿಚಾರವಾಗಿ ಕಚ್ಚಾಟ ಹೆಚ್ಚಾಗಿದೆ.

ಇದು ಆಟಗಾರರ ನಡುವಿನ ಬಾಂದವ್ಯವನ್ನು ಹಾಳು ಮಾಡಿದೆ. ಪಾಕಿಸ್ತಾನ ತಂಡದ ಬೌಲಿಂಗ್ ಬಿಟ್ಟರೆ ಬ್ಯಾಟಿಂಗ್ ವಿಭಾಗ ಸಂಪೂರ್ಣ ತುಕ್ಕು ಹಿಡಿದಂತೆ ಆಗಿದೆ. ಮಾಜಿ ನಾಯಕ ಬಾಬರ್ ಅಜಮ್ ಫಾರ್ಮ್ ಸಮಸ್ಯೆ ತಂಡಕ್ಕೆ ಹಿನ್ನಡೆ ಉಂಟು ಮಾಡುತ್ತಿದೆ.
ರಾವಲ್ಪಿಂಡಿಯಲ್ಲಿ ನಡೆದ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ದ ಪಾಕಿಸ್ತಾನ ಅಮೋಘ ಪ್ರದರ್ಶನ ನೀಡಿತ್ತು. ಈ ಪಂದ್ಯದಲ್ಲಿ ಬಾಬರ್ ದಾಖಲೆ ಸೃಷ್ಟಿಸುವ ಅವಕಾಶವನ್ನು ಹೊಂದಿದ್ದರು. ಆದರೆ ಈ ಅವಕಾಶವನ್ನು ಅವರು ಕೈ ಚೆಲ್ಲಿದರು. ತಂಡಕ್ಕೆ ಆಸರೆಯಾಗಬೇಕಿದ್ದ ಬಾಬರ್ ಕಳಪೆ ಫಾರ್ಮ್, ತಂಡದ ಚಿಂತೆಯನ್ನು ಹೆಚ್ಚಿಸಿದೆ.
ಇದಾದ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ಪರ ಬಾಬರ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಈ ನಿರೀಕ್ಷೆಯ ಸಹ ಹುಸಿ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿಯೂ ಕೇವಲ 22 ರನ್‌ಗಳಿಗೆ ಔಟಾಗುವ ಮೂಲಕ ತಮ್ಮ ಕಳಪೆ ಆಟ ತೋರಿಸಿದರು.
ಬಾಂಗ್ಲದೇಶ ವಿರುದ್ಧದ ಸರಣಿಗೂ ಮುನ್ನ ಬಾಬರ್ ಅಜಮ್‌ನನ್ನು ಭಾರೀ ಗುಣಗಾನ ಮಾಡಲಾಗಿತ್ತು. ಕೆಲವು ಪಾಕ್ ಆಟಗಾರರು ಮತ್ತು ಮಾಧ್ಯಮಗಳು ಬಾಬರ್ ನನ್ನು ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರೊಂದಿಗೆ ಹೋಲಿಕೆ ಕೂಡ ಮಾಡಲಾಗಿತ್ತು. ಆದರೆ ಕೊಹ್ಲಿಗೆ ಬಾಬರ್ ಯಾವುದರಲ್ಲೂ ಸಾಟಿಯಲ್ಲ ಎಂಬುದನ್ನು ಅವರೇ ಬಹಿರಂಗಪಡಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಪರ ಮೊಹಮ್ಮದ್ ರಿಜ್ವಾನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಬಾಂಗ್ಲಾ ಬೌಲರ್‌ಗಳ ಬೆವರಿಸಿದ ರಿಜ್ಬಾನ್ (171) ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದರು. ಅಲ್ಲದೆ ದ್ವಿ-ಶತಕ ಸನಿಹ ಕೂಡ ತಲುಪಿದ್ದರು. ಆದರೆ ನಾಯಕ ಶಾನ್ ಮಸೂದ್ ಇವರ ಕಸನಿಗೆ ಕೊಳ್ಳೆ ಇಟ್ಟರು. ಆಗಲೇ ಡಿಕ್ಲೇರ್ ಘೋಷಿಸಿಕೊಂಡರು. ಒಲ್ಲದ ಮನಸ್ಸಿಂದ ರಿಜ್ವಾನ್ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಈ ನಿರ್ಧಾರಕ್ಕೂ ಟೀಕೆಗಳು ಕೇಳಿಬಂದವು.
ಮೊದಲ ಇನ್ನಿಂಗ್ಸ್‌ನಲ್ಲಿ ಪಾಕ್ ತಂಡದ ಪರ ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ನೆರವಾಗಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಜ್ವಾನ್, ಎರಡನೇ ಇನಿಂಗ್ಸ್‌ನಲ್ಲೂ ಬಾಂಗ್ಲಾ ಬೌಲರ್‌ಗಳನ್ನು ಕಾಡಿದರು. ಅಲ್ಲದೆ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಶತ ಪ್ರಯತ್ನ ಪಟ್ಟರು. ಆದರೆ ಇವರಿಗೆ ಪಾಕ್ ತಂಡದ ಯಾವೊಬ್ಬ ಆಟಗಾರ ಸಾಥ್ ನೀಡಲಿಲ್ಲ. ಇದೀಗ ಬಾಬಾರ್ ಮತ್ತು ರಿಜ್ವಾನ್ ನಡುವೆ ಪಾಕಿಸ್ತಾನದ ನಂಬರ್ ಒನ್ ಬ್ಯಾಟರ್ ಆಗುವು ಪೈಪೋಟಿ ಹೆಚ್ಚಾಗಿದೆ.
ಅಂಕಿ ಅಂಶಗಳು ಬಾಬರ್ ಅಜಮ್ ಪಾಕಿಸ್ತಾನದ ಬೆಸ್ಟ್ ಬ್ಯಾಟರ್ ಎಂಬುದನ್ನು ಸಾರಿ ಹೇಳಿದರೆ, ಪ್ರಸಕ್ತ ಫಾರ್ಮ್ ಮೊಹಮ್ಮದ್ ರಿಜ್ವಾನ್ ಅವರತ್ತ ಬೊಟ್ಟು ಮಾಡುತ್ತಿವೆ. ಸತತ ವೈಫಲ್ಯ ಅನುಭವಿಸುತ್ತಿರುವ ಬಾಬರ್, ಮುಂದಿನ ಟೆಸ್ಟ್ ಪಂದ್ಯದಲ್ಲಾದರೂ ಅಬ್ಬರದ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಿಂಚುವ ಅವಶ್ಯಕತೆ ಇದೆ. ಇಲ್ಲದಿದ್ದರೆ ಟೀಕೆಗಳಿಗೆ ಆಹಾರವಾಗುತ್ತಲೇ ಹೋಗುತ್ತಾರೆ.