
ಒಂದೆಡೆ ಜನಪ್ರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿದ್ದು ವಿಶ್ವ ಕ್ರಿಕೆಟ್ ಅಭಿಮಾನಿಗಳನ್ನು ತನ್ನತ್ತ ಸೆಳೆದಿದ್ದರೆ, ಮತ್ತೊಂದೆಡೆ ಬೇರೆ ದೇಶಗಳಲ್ಲಿ ವಿವಿಧ ದ್ವಿಪಕ್ಷೀಯ ಸರಣಿಗಳು ಜರುಗುತ್ತಿವೆ. ನ್ಯೂಜಿಲೆಂಡ್ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದು, 5 ಟಿ 20 ಹಾಗೂ 5 ಏಕದಿನ ಪಂದ್ಯಗಳನ್ನಾಡುತ್ತಿದೆ.
ಮೊದಲಿಗೆ ಏಪ್ರಿಲ್ 14ರಿಂದ 24ರವರೆಗೆ 5 ಪಂದ್ಯಗಳ ಟಿ ಟ್ವೆಂಟಿ ಸರಣಿ ನಡೆದಿದ್ದು, ಸರಣಿ ಡ್ರಾನಲ್ಲಿ ಅಂತ್ಯಗೊಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡು ಗೆಲ್ಲುವ ಭರವಸೆ ಹುಟ್ಟುಹಾಕಿದ್ದ ಪಾಕಿಸ್ತಾನ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ವಿಫಲಗೊಂಡಿದೆ.
ಹೌದು, ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದಿದ್ದು, ನಾಲ್ಕನೇ ಟಿ ಟ್ವೆಂಟಿ ಪಂದ್ಯದಲ್ಲಿ ಫಲಿತಾಂಶ ಹೊರಬಿದ್ದಿಲ್ಲ ಹಾಗೂ ಐದನೇ ಟಿ ಟ್ವೆಂಟಿ ಪಂದ್ಯದಲ್ಲಿ ಮತ್ತೆ ನ್ಯೂಜಿಲೆಂಡ್ ತಂಡ ಗೆದ್ದು ಬೀಗಿದೆ. ಹೀಗಾಗಿ ಪಾಕಿಸ್ತಾನ ತವರಿನಲ್ಲಿಯೇ ಎದುರಾಳಿ ನ್ಯೂಜಿಲೆಂಡ್ ವಿರುದ್ಧ ಗೆಲ್ಲಬಹುದಾಗಿದ್ದ ಸರಣಿಯನ್ನು ಕೈಚೆಲ್ಲಿರುವುದು ಸದ್ಯ ಸಾಕಷ್ಟು ಚರ್ಚೆಗೆ ಒಳಗಾಗಿದೆ.
ಕ್ರಿಕೆಟ್ ಪ್ರೇಮಿಗಳು ಪಾಕಿಸ್ತಾನವನ್ನು ಟೀಕಿಸುತ್ತಿದ್ದರೆ, ಪಾಕಿಸ್ತಾನ ತಂಡದ ಅಭಿಮಾನಿಗಳು ತಂಡದ ವಿರುದ್ಧ ಬೇಸರ ಹೊರಹಾಕುತ್ತಿದ್ದಾರೆ. ಅಲ್ಲದೇ ಹಲವು ಮಾಜಿ ಕ್ರಿಕೆಟಿಗರು ಈ ಸರಣಿಯ ಫಲಿತಾಂಶದ ಕುರಿತು ಮಾತನಾಡಿದ್ದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಪಾಕಿಸ್ತಾನದ ಮಾಜಿ ಆಟಗಾರ ಕಮ್ರಾನ್ ಅಕ್ಮಲ್ ಸಹ ಈ ಸರಣಿಯ ಕುರಿತು ಪ್ರತಿಕ್ರಿಯಿಸಿದ್ದು, ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ವಿರುದ್ಧ ವ್ಯಾಪಕ ಟೀಕೆ ಮಾಡಿದ್ದಾರೆ.
ಹೌದು, ಏಪ್ರಿಲ್ 24ರಂದು ರಾವಲ್ಪಿಂಡಿಯಲ್ಲಿ ನಡೆದ ಐದನೇ ಟಿ ಟ್ವೆಂಟಿ ಪಂದ್ಯದಲ್ಲಿ ನ್ಯೂಜಿಲೆಂಡ್ ಪಾಕಿಸ್ತಾನ್ ನೀಡಿದ್ದ 194 ರನ್‌ಗಳ ಗುರಿಯನ್ನು ಬೆನ್ನತ್ತಿ 6 ವಿಕೆಟ್‌ಗಳ ಗೆಲುವನ್ನು ಕಂಡಿತ್ತು. ಈ ಮೂಲಕ ಪಾಕಿಸ್ತಾನಕ್ಕೆ ಇದ್ದ ಸರಣಿ ಗೆಲ್ಲುವ ಕೊನೆಯ ಅವಕಾಶವೂ ಸಹ ನಶಿಸಿಹೋಗಿತ್ತು. ಪಾಕಿಸ್ತಾನ ಬೌಲರ್‌ಗಳು ಸಿಕ್ಕಾಪಟ್ಟೆ ರನ್ ತೆತ್ತು ಕಳಪೆ ಪ್ರದರ್ಶನ ನೀಡಿದ್ದರು.

ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕಮ್ರಾನ್ ಅಕ್ಮಲ್ "ಬಾಬರ್ ಅಜಮ್ ನಾಯಕತ್ವ ಮಾಡಲು ಶುರು ಮಾಡಿ ನಾಲ್ಕು ವರ್ಷಗಳು ಕಳೆದಿದ್ದರೂ ಸಹ ಆತನಿಗೆ ಕ್ಯಾಪ್ಟನ್ಸಿ ಹೇಗೆ ಮಾಡಬೇಕೆಂಬುದೇ ತಿಳಿದಿಲ್ಲ. ಯಾವ ಸಮಯದಲ್ಲಿ ಯಾವ ಬೌಲರ್‌ಗೆ ಬೌಲಿಂಗ್ ಮಾಡಲು ಅವಕಾಶ ನೀಡಬೇಕು ಎಂಬುದೇ ಆತನಿಗೆ ತಿಳಿದಿಲ್ಲ ಇಂತಹ ತಪ್ಪುಗಳನ್ನು ಪದೇ ಪದೇ ಮಾಡುತ್ತಿರುವುದರಿಂದ ಸೋಲನ್ನು ಅನುಭವಿಸಿದರು ಎಂಬುದರಲ್ಲಿ ಯಾವುದೇ ಆಶ್ಚರ್ಯವಿಲ್ಲ" ಎಂದು ಹೇಳಿಕೆ ನೀಡಿದರು.
ಈ ಮೂಲಕ ಬಾಬರ್ ಅಜಮ್‌ಗೆ ನಾಯಕತ್ವ ತಿಳಿದಿಲ್ಲ ಎಂದು ಕಮ್ರಾನ್ ಅಕ್ಮಲ್ ನೇರವಾಗಿ ಮುಖಕ್ಕೆ ಹೊಡೆದ ಹಾಗೆ ಹೇಳಿದ್ದಾರೆ. ಅಕ್ಮಲ್ ನೀಡಿದ ಈ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ವಿವಾದಕ್ಕೂ ಸಹ ಎಡೆಮಾಡಿಕೊಟ್ಟಿದೆ.
ಇನ್ನು ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವೆ ನಡೆದ ಐದು ಟಿ ಟ್ವೆಂಟಿ ಪಂದ್ಯಗಳ ಫಲಿತಾಂಶ ಇಲ್ಲಿದೆ..
* ಪ್ರಥಮ ಪಂದ್ಯದಲ್ಲಿ 182 ರನ್ ಬಾರಿಸಿದ್ದ ಪಾಕ್ ನ್ಯೂಜಿಲೆಂಡ್ ತಂಡವನ್ನು 94 ರನ್‌ಗಳಿಗೆ ಆಲ್‌ಔಟ್ ಮಾಡಿ 88 ರನ್‌ಗಳ ಭರ್ಜರಿ ಗೆಲುವು ಕಂಡಿತ್ತು.
* ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ 192 ರನ್ ಬಾರಿಸಿತ್ತು. ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 154 ರನ್ ಗಳಿಸಿತ್ತು. ಈ ಮೂಲಕ ಪಾಕ್ 38 ರನ್‌ಗಳ ಗೆಲುವನ್ನು ಕಂಡಿತ್ತು.
* ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 163 ರನ್ ಗಳಿಸಿತ್ತು. ಪಾಕ್ 159 ರನ್‌ಗೆ ಆಲ್ ಔಟ್ ಆದ ಕಾರಣ ನ್ಯೂಜಿಲೆಂಡ್ 4 ರನ್‌ಗಳ ಗೆಲುವನ್ನು ಕಂಡಿತ್ತು.
* ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ್ದ ನ್ಯೂಜಿಲೆಂಡ್ 18.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು. ಅಷ್ಟರಲ್ಲಿ ಮಳೆ ಆರಂಭವಾಗಿ ಪಂದ್ಯ ರದ್ದಾಯಿತು.
* ಐದನೇ ಪಂದ್ಯದಲ್ಲಿ ಪಾಕ್ 193 ರನ್ ಗಳಿಸಿತ್ತು. ನ್ಯೂಜಿಲೆಂಡ್ 19.2 ಓವರ್‌ಗಳಲ್ಲಿ 194 ರನ್ ಕಲೆಹಾಕಿ 6 ವಿಕೆಟ್‌ಗಳ ಗೆಲುವನ್ನು ಕಂಡಿದೆ.