ಪಾಕಿಸ್ತಾನ ತಂಡದ ಅಭಿಮಾನಿಗಳಿಗೆ ಖುಷಿಯ ಸುದ್ದಿ. ಪಾಕ್ ತಂಡದ ಸ್ಟಾರ್ ಆಟಗಾರ ಬಾಬರ್ ಅಜಮ್ ಲಯ ಕಂಡುಕೊಂಡಿದ್ದಾರೆ. ಶ್ರೀಲಂಕಾ ವಿರುದ್ದದ ಎರಡನೇ ಏಕದಿನ ಪಂದ್ಯದಲ್ಲಿ ಬಾಬರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ. ಬಾಬರ್ ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಅಬ್ಬರಿಸಿದರು. ಇವರ ಸೊಗಸಾದ ಆಟದ ನೆರವಿನಿಂದ ಪಾಕ್ 8 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
289 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಪಾಕ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಫಖರ್ ಜಮಾನ್ ಹಾಗೂ ಸೈಮ್ ಅಯೂಬ್ (33) ಜೋಡಿ ಮೊದಲ ವಿಕೆಟ್‌ಗೆ 9.4 ಓವರ್‌ಗಳಲ್ಲಿ 77 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಇನ್ನು ಎರಡನೇ ವಿಕೆಟ್‌ಗೆ ಫಕರ್ ಜಮಾನ್ ಹಾಗೂ ಭರವಸೆಯ ಬ್ಯಾಟರ್ ಬಾಬರ್ ಅಜಮ್ ಜೋಡಿ ಸಮಯೋಚಿತ ಆಟವನ್ನು ಆಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಶ್ರೀಲಂಕಾ ತಂಡ ವಿಫಲವಾಯಿತು. ಈ ಜೋಡಿ ಸಹ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿತು. ಈ ವೇಳೆ ಫಖರ್ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 78 ರನ್ ಬಾರಿಸಿದ್ದಾಗ ಔಟ್ ಆದರು.

177 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಬಾಬರ್ ಅಜಮ್ ಜೊತೆಗೂಡಿದ ಭರವಸೆಯ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಜೋಡಿ ಸಹ ಲಂಕಾ ಬೌಲರ್‌ಗಳನ್ನು ಕಾಡಿತು. ಈ ಜೋಡಿ 105 ಎಸೆತಗಳಲ್ಲಿ ಅಜೇಯ 112 ರನ್ ಸೇರಿಸಿತು. ರಿಜ್ವಾನ್ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 51 ರನ್ ಬಾರಿಸಿದರು.
ಕಳೆದ ಕೆಲವು ತಿಂಗಳುಗಳಿಂದ ರನ್ ಕಲೆ ಹಾಕುವಲ್ಲಿ ಪರದಾಟ ನಡೆಸುತ್ತಿದ್ದ ಬಾಬರ್ ಅಜಮ್ ಅಂತಿಮವಾಗಿ ಲಯಕ್ಕೆ ಮರಳಿದರು. ಇವರು ಆಗಸ್ಟ್ 30, 2023ರಂದು ನೇಪಾಳ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅಂತಿಮವಾಗಿ ಶತಕ ಬಾರಿಸಿದ್ದರು. ಅಲ್ಲಿಂದ ಈ ವರೆಗೆ ಶತಕ ಬಾರಿಸಿರಲಿಲ್ಲ. ಇವರು 119 ಎಸೆತಗಳಲ್ಲಿ 8 ಎಸೆತಗಳಲ್ಲಿ ಅಜೇಯ 102 ರನ್ ಬಾರಿಸಿದರು. ಇದು ಇವರ ಏಕದಿನ ಕ್ರಿಕೆಟ್ ವೃತ್ತಿಜೀವನದ 20ನೇ ಶತಕವಾಗಿದೆ. ಅಂತಿಮವಾಗಿ ಪಾಕ್ 48.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 289 ರನ್ ಸೇರಿಸಿ ಜಯ ಸಾಧಿಸಿತು.
ಪತನು ನಿಸ್ಸಂಕಾ (24), ಕಮಿಲ್ ಮಿಶ್ರಾ (27), ಕುಸಾಲ್ ಮೆಂಡೀಸ್ (20), ಸದೀರ್ ಸಮರವೀಕ್ರಮ್ (42), ವನಿಂದು ಹಸರಂಗ್ (37), ಕಮಿಂದು ಮೆಂಡೀಸ್ (44) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಜನಿತ್ ಲಿಯಾನಗೆ 63 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 54 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಲಂಕಾ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 288 ರನ್ ಸೇರಿಸಿತು.