ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ (ಎಸಿಬಿ) ಆಯ್ಕೆ ಸಮಿತಿಯು ಬುಧವಾರ, ಜೂನ್ 14ರಂದು ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ 15 ಸದಸ್ಯರ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಿದೆ. ಗಮನಾರ್ಹವಾಗಿ, ಸ್ಟಾರ್ ಸ್ಪಿನ್ನರ್ ರಶೀದ್ ಖಾನ್‌ಗೆ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ.
ಐಪಿಎಲ್ 2023ರ ಮುಕ್ತಾಯದ ನಂತರ ರಶೀದ್ ಖಾನ್ ಸ್ವಲ್ಪ ಬೆನ್ನು ನೋವು ಅನುಭವಿಸಿದರು ಮತ್ತು ಶ್ರೀಲಂಕಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದರು. ರಶೀದ್ ಖಾನ್ ಜೂನ್ 7ರಂದು ಹಂಬಂಟೋಟಾದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಡಿದರು.

ಆದರೆ ಹಶ್ಮತುಲ್ಲಾ ಶಾಹಿದಿ ನೇತೃತ್ವದ ಅಫ್ಘಾನಿಸ್ತಾನ ತಂಡವು 2-1 ಅಂತರದಿಂದ ಸರಣಿಯನ್ನು ಸೋತಿದ್ದರಿಂದ ತಮ್ಮ ತಂಡವನ್ನು ಗೆಲುವಿನ ಹಳಿಗೆ ತರಲು ಅತ್ಯುತ್ತಮ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ.
ಅಫ್ಘಾನಿಸ್ತಾನದ ಸಹಾಯಕ ಕೋಚ್ ರಯೀಸ್ ಅಹ್ಮದ್‌ಜೈ ಅವರು ಕ್ರಿಕ್‌ಬಜ್‌ನೊಂದಿಗೆ ಮಾತನಾಡಿ, ರಶೀದ್ ಖಾನ್ ಅವರ ಕೆಲಸದ ಹೊರೆ ನಿರ್ವಹಣೆಯ ಭಾಗವಾಗಿ ವಿಶ್ರಾಂತಿ ಪಡೆದಿದ್ದಾರೆ. ರಶೀದ್ ಖಾನ್ ಅವರ ಇತ್ತೀಚಿನ ಬೆನ್ನಿನ ನೋವು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ದೃಢಪಡಿಸಿದ್ದಾರೆ.
"ರಶೀದ್ ಖಾನ್ ಬಾಂಗ್ಲಾದೇಶದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದಾರೆ. ಏಕೆಂದರೆ ಅವರು ಹೆಚ್ಚು ತಡೆರಹಿತ ಕ್ರಿಕೆಟ್ ಆಡಿದ್ದಾರೆ ಮತ್ತು ಅವರ ಬೆನ್ನುನೋವು ಪರಿಗಣನೆಗೆ ತೆಗೆದುಕೊಂಡಿದ್ದು, ನಾವು ಹೆಚ್ಚಿನ ಅಪಾಯವನ್ನು ತೆಗೆದುಕೊಳ್ಳಲು ಬಯಸುವುದಿಲ್ಲ," ಎಂದು ಸಹಾಯಕ ಕೋಚ್ ರಯೀಸ್ ಅಹ್ಮದ್‌ಜೈ ಹೇಳಿದ್ದಾರೆ.

ಹಶ್ಮತುಲ್ಲಾ ಶಾಹಿದಿ ಅಫ್ಘಾನಿಸ್ತಾನ ತಂಡದ ನಾಯಕರಾಗಿ, ಉಪನಾಯಕರಾಗಿ ರಹಮತ್ ಶಾ ಅವರನ್ನು ನೇಮಿಸಲಾಗಿದೆ. ಬಾಂಗ್ಲಾ ಹುಲಿಗಳ ವಿರುದ್ಧ ವಿರುದ್ಧದ ಕೆಂಪು ಚೆಂಡಿನ ಪಂದ್ಯಕ್ಕೆ ಇಬ್ರಾಹಿಂ ಅಬ್ದುಲ್‌ರಹೀಂಝೈ, ನಿಜತ್ ಮಸೂದ್ ಮತ್ತು ಲೆಗ್ಗಿ ಇಝರುಲ್ಹಕ್ ನವೀದ್ ಅವರನ್ನು ಕರೆಯಲಾಗಿದೆ.
ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ (ಉಪ ನಾಯಕ), ಅಫ್ಸರ್ ಝಜೈ (ವಿಕೆಟ್ ಕೀಪರ್), ಇಕ್ರಾಮ್ ಅಲಿಖೈಲ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ಅಬ್ದುಲ್ ಮಲಿಕ್, ಬಹೀರ್ ಶಾ, ನಾಸಿರ್ ಜಮಾಲ್, ಕರೀಂ ಜನತ್, ಜಹೀರ್ ಖಾನ್, ಇಝರುಲ್ಹಕ್ ನವೀದ್, ಹಮ್ಜಾ ಹೊತಕ್, ಇಬ್ರಾಹಿಂ ಅಬ್ದುಲ್ರಾಹ್, ಯಾಮಿನ್ ಅಹ್ಮದ್ಝೈ, ನಿಜತ್ ಮಸೂದ್.
ಮೀಸಲು ಆಟಗಾರರ ಪಟ್ಟಿ: ಜಿಯಾ ಉರ್ ರೆಹಮಾನ್ ಅಕ್ಬರ್, ನೂರ್ ಅಲಿ ಝದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ಸಯ್ಯದ್ ಅಹ್ಮದ್ ಶಿರ್ಜಾದ್
ಬಾಂಗ್ಲಾದೇಶ ಟೆಸ್ಟ್ ತಂಡದ ಬಗ್ಗೆ ಹೇಳುವುದಾದರೆ, ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ತಂಡವನ್ನು ಲಿಟ್ಟನ್ ದಾಸ್ ಮುನ್ನಡೆಸಲಿದ್ದಾರೆ. ಖಾಯಂ ನಾಯಕ ಶಕೀಬ್ ಅಲ್ ಹಸನ್ ಬೆರಳಿನ ಗಾಯದ ಕಾರಣ ಲಿಟ್ಟನ್ ದಾಸ್ ತಂಡವನ್ನು ಮುನ್ನಡೆಸುವ ನಿರ್ಧಾರವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.

ಇದೇ ವೇಳೆ ಬಾಂಗ್ಲಾದೇಶ ಆಯ್ಕೆ ಸಮಿತಿಯು ಅನ್‌ಕ್ಯಾಪ್ಡ್ ಬ್ಯಾಟರ್ ಶಹದತ್ ಹೊಸೈನ್, ವೇಗಿ ಮುಸ್ಫಿಕ್ ಹಸನ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಶ್ರೀಲಂಕಾ ವಿರುದ್ಧ 2-1 ಅಂತರದಲ್ಲಿ ಏಕದಿನ ಸರಣಿ ಸೋತ ಹಿನ್ನಲೆಯಿಂದ ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಲಿದೆ. ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ತಮ್ಮ ಹೆಡ್-ಟು-ಹೆಡ್ ದಾಖಲೆಗಳ ಪ್ರಕಾರ, ಟೆಸ್ಟ್ ಸ್ವರೂಪದಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿವೆ.
ಇನ್ನು ಟೆಸ್ಟ್ ಪಂದ್ಯದ ಮುಕ್ತಾಯದ ನಂತರ, ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಆ ಬಳಿಕ ಎರಡು ಟಿ20 ಪಂದ್ಯಗಳನ್ನು ಆಡಲಿವೆ. ಮುಂಬರುವ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್‌ನ ಸಮಯಕ್ಕೆ ತಂಡಗಳು ಉತ್ತಮ ತಂಡವನ್ನು ಕಟ್ಟಲು ಎದುರು ನೋಡುತ್ತವೆ.