ಭಾನುವಾರ, ಜುಲೈ 16ರಂದು ಸಿಲ್ಹೆಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಪ್ರವಾಸಿ ಅಫ್ಘಾನಿಸ್ತಾನ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಆತಿಥೇಯ ಬಾಂಗ್ಲಾದೇಶ ತಂಡ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು.
ಮಳೆ-ಬಾಧಿತ ಪಂದ್ಯವನ್ನು ತಲಾ ಎರಡೂ ತಂಡಗಳಿಗೂ 17 ಓವರ್‌ಗಳಿಗೆ ಇಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 7 ವಿಕೆಟ್ ನಷ್ಟಕ್ಕೆ 116 ರನ್ ಕಲೆಹಾಕಿತು. 117 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ 16.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 119 ರನ್ ಬಾರಿಸಿ ಗೆಲುವು ಸಾಧಿಸಿತು.

ಶುಕ್ರವಾರ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 2 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಇದನ್ನೇ ಭಾನುವಾರದ ಪಂದ್ಯದಲ್ಲೂ ಮುಂದುವರೆಸಿತು. ಈಶಾನ್ಯ ನಗರ ಸಿಲ್ಹೆಟ್‌ನಲ್ಲಿ ಆತಿಥೇಯ ತಂಡಕ್ಕೆ ಸತತ ಮೂರನೇ ಟಿ20 ಸರಣಿ ಗೆಲುವು ತಂದುಕೊಟ್ಟಿತು. ಇನ್ನು ಮೂರು ಪ್ರಯತ್ನಗಳಲ್ಲಿ ಅಫ್ಘಾನಿಸ್ತಾನ ವಿರುದ್ಧ ಮೊದಲ ಟಿ20 ಸರಣಿ ಜಯ ಗಳಿಸಿತು.
ಬಾಂಗ್ಲಾದೇಶ ತಂಡ ಈ ವರ್ಷದ ಆರಂಭದಲ್ಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 3-0 ಮತ್ತು ಸ್ಕಾಟ್ಲೆಂಡ್ ತಂಡವನ್ನು 2-1 ಅಂತರದಿಂದ ಸೋಲಿಸಿದ್ದರು.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡದ ಪರ ಇಬ್ರಾಹಿಂ ಝದ್ರಾನ್ 22 ರನ್, ಅಜ್ಮತುಲ್ಲಾ ಒಮರ್ಜಾಯ್ 25 ರನ್ ಮತ್ತು ಕರೀಮ್ ಜನತ್ 20 ರನ್ ಗಳಿಸಿದರೆ, ಮೊಹಮ್ಮದ್ ನಬಿ 16 ರನ್ ಗಳಿಸಿದ್ದು ಬಿಟ್ಟರೆ, ಉಳಿದವರಾರು ಎರಡಂಕಿ ಮೊತ್ತ ದಾಟಲು ವಿಫಲರಾದರು.
ಬಾಂಗ್ಲಾದೇಶ ತಂಡದ ಪರ ಬೌಲಿಂಗ್‌ನಲ್ಲಿ ತಸ್ಕಿನ್ ಅಹ್ಮದ್ 4 ಓವರ್‌ಗಳಲ್ಲಿ 33 ರನ್ ನೀಡಿ 3 ವಿಕೆಟ್ ಪಡೆದರೆ, ಮುಸ್ತಾಫಿಜುರ್ ರೆಹ್ಮನ್ 3 ಓವರ್‌ಗಳಲ್ಲಿ 30 ರನ್ ನೀಡಿ 2 ವಿಕೆಟ್ ಮತ್ತು ಶಕೀಬ್ ಅಲ್ ಹಸನ್ 3 ಓವರ್‌ಗಳಲ್ಲಿ 15 ರನ್ ನೀಡಿ 2 ವಿಕೆಟ್ ಕಬಳಿಸಿದರು.
ಬ್ಯಾಟಿಂಗ್‌ನಲ್ಲಿ ಬಾಂಗ್ಲಾದೇಶ ತಂಡದ ಪರ ಲಿಟ್ಟನ್ ದಾಸ್ 35 ರನ್, ಅಫೀಫ್ ಹೊಸೈನ್ 24 ರನ್, ಟೌಹಿದ್ ಹೃದಯೋಯ್ 19 ರನ್, ನಾಯಕ ಶಕೀಬ್ ಅಲ್ ಹಸನ್ 18 ರನ್, ಶಮಿಮ್ ಹೊಸೈನ್ 7 ರನ್‌ಗಳ ನೆರವಿನಿಂದ ಬಾಂಗ್ಲಾದೇಶ ಅನಾಯಾಸವಾಗಿ ಗೆಲುವು ಸಾಧಿಸಿತು.
ಅಫ್ಘಾನಿಸ್ತಾನ ತಂಡದ ಪರ ಬೌಲಿಂಗ್‌ನಲ್ಲಿ ಮುಜೀಬ್ ಉರ್ ರೆಹ್ಮನ್ 4 ಓವರ್‌ಗಳಲ್ಲಿ 28 ರನ್ ನೀಡಿ 2 ವಿಕೆಟ್ ಪಡೆದರೆ, ಅಜ್ಮತುಲ್ಲಾ ಒಮರ್ಜಾಯ್ 3 ಓವರ್‌ಗಳಲ್ಲಿ 17 ರನ್ ನೀಡಿ 2 ವಿಕೆಟ್ ಪಡೆದರು.
ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ 18 ರನ್ ಮತ್ತು 2 ವಿಕೆಟ್ ಮೂಲಕ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರಲ್ಲದೆ, ಎಡಗೈ ಆಲ್‌ರೌಂಡರ್ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.