BAN vs AFG: ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ; ಶಕೀಬ್ ಅಲ್ ಹಸನ್ ವಾಪಸ್
ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಏಕದಿನ ಅಂತಾರಾಷ್ಟ್ರೀಯ ಸರಣಿಗೆ 15 ಸದಸ್ಯರ ಬಾಂಗ್ಲಾದೇಶ ತಂಡವನ್ನು ಶನಿವಾರ, ಜೂನ್ 17ರಂದು ಪ್ರಕಟಿಸಿದೆ.
ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 5ರಂದು ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಗಮನಾರ್ಹ ವಿಷಯವೆಂದರೆ, ಇದೇ ಮೈದಾನದಲ್ಲಿ ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳನ್ನು ಆಯೋಜಿಸಲಾಗಿದೆ.

ಇನ್ನು ಬಾಂಗ್ಲಾದೇಶ ತಂಡದ ಸ್ಟಾರ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಗೆ ತಂಡಕ್ಕೆ ಮರಳಿದ್ದಾರೆ.
36ರ ವರ್ಷದ ಶಕೀಬ್ ಅಲ್ ಹಸನ್ ಮೇನಲ್ಲಿ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಬೆರಳಿನ ಗಾಯದಿಂದಾಗಿ, ಶನಿವಾರವಷ್ಟೇ ಮುಕ್ತಾಯಗೊಂಡ ಮಿರ್‌ಪುರದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.
ಆತಿಥೇಯ ಬಾಂಗ್ಲಾದೇಶ ಇತ್ತೀಚೆಗೆ ಭಾರತ ಮತ್ತು ಐರ್ಲೆಂಡ್ ತಂಡಗಳ ವಿರುದ್ಧ ಮಾಡಿದಂತೆ, 50 ಓವರ್‌ಗಳ ಸ್ವರೂಪದಲ್ಲಿ ತಮ್ಮ ಗೆಲುವಿನ ನಾಗಾಲೋಟವನ್ನು ವಿಸ್ತರಿಸಲು ಎದುರು ನೋಡುತ್ತಿದ್ದಾರೆ.
ಬಾಂಗ್ಲಾದೇಶ ತಂಡ ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಸರಣಿಗೂ ಮುನ್ನ ಐರ್ಲೆಂಡ್ ತಂಡದ ವಿರುದ್ಧ ಟಿ20 ಸರಣಿ, ಏಕೈಕ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಆಡಿದೆ.

ಟಿ20 ಸರಣಿಯನ್ನು ಬಾಂಗ್ಲಾದೇಶ ಆಯೋಜಿಸಿದ್ದರೆ, ಏಕೈಕ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಆಡಲಾಯಿತು. ತಮೀಮ್ ಇಕ್ಬಾಲ್ ನಾಯಕತ್ವದ ಬಾಂಗ್ಲಾದೇಶ ತಂಡವು ಐರ್ಲೆಂಡ್ ವಿರುದ್ಧ ಸಂಪೂರ್ಣ ಸರಣಿಯನ್ನು ಗೆದ್ದು ಬೀಗಿತು.
ಅಫ್ಘಾನಿಸ್ತಾನ ವಿರುದ್ಧ 21ನೇ ಶತಮಾನದ ಅತಿದೊಡ್ಡ ಗೆಲುವು ದಾಖಲಿಸಿದ ಬಾಂಗ್ಲಾದೇಶ
ಅಫ್ಘಾನಿಸ್ತಾನ ತಂಡದ ಪ್ರವಾಸವು ಬಾಂಗ್ಲಾದೇಶ ತಂಡದ ವಿರುದ್ಧ ಏಕೈಕ ಟೆಸ್ಟ್ ಪಂದ್ಯದೊಂದಿಗೆ ಪ್ರಾರಂಭವಾಗಿದೆ. ಲಿಟ್ಟನ್ ದಾಸ್ ನಾಯಕತ್ವದ ತಂಡವು 21ನೇ ಶತಮಾನದ ದಾಖಲೆಯ ಅತಿದೊಡ್ಡ 546 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.
ನಜ್ಮುಲ್ ಹೊಸೈನ್ ಶಾಂಟೊ ಅವರ ಶತಕದ ನೆರವಿನಿಂದ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 382 ರನ್ ಕಲೆಹಾಕಿತು. ಪ್ರತ್ಯುತ್ತರವಾಗಿ ಪ್ರವಾಸಿ ತಂಡ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು. ಈ ವೇಳೆ ಬಾಂಗ್ಲಾದ ಎಬಾಡೋಟ್ ಹೊಸೈನ್ ನಾಲ್ಕು ವಿಕೆಟ್ ಪಡೆದು ಮಿಂಚಿದರು.
ಬಾಂಗ್ಲಾದೇಶದ ಎರಡನೇ ಇನ್ನಿಂಗ್ಸ್‌ನಲ್ಲಿ ನಜ್ಮುಲ್ ಹೊಸೈನ್ ಶಾಂಟೊ ಮತ್ತೊಮ್ಮೆ ಶತಕ ಬಾರಿಸಿದರು. ಇದೇ ವೇಳೆ ಮೊಮಿನುಲ್ ಹಕ್ ಕೂಡ ಶತಕ ಗಳಿಸಿದಾಗ ಆತಿಥೇಯ ತಂಡ 3ನೇ ದಿನದಂದು 425 ರನ್ ಗಳಿಸಿ, ಅಫ್ಘಾನಿಸ್ತಾನ ತಂಡಕ್ಕೆ ಒಟ್ಟು 662 ರನ್ ಗುರಿಯನ್ನು ನಿಗದಿಪಡಿಸಿತು.

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡಕ್ಕೆ ತಸ್ಕಿನ್ ಅಹ್ಮದ್ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಆಘಾತ ನೀಡಿದರು. ಹಶ್ಮತುಲ್ಲಾ ಶಾಹಿದಿ ನಾಯಕತ್ವದ ಪ್ರವಾಸಿ ತಂಡವನ್ನು 115 ರನ್‌ಗಳಿಗೆ ಆಲೌಟ್ ಮಾಡಿ 546 ರನ್‌ಗಳಿಂದ ಪಂದ್ಯವನ್ನು ಗೆದ್ದರು.
ಈ ಗೆಲುವು ಆಟದ ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ ಒಟ್ಟಾರೆ ಮೂರನೇ ಅತಿ ದೊಡ್ಡ ಗೆಲುವು ಎಂಬ ದಾಖಲೆಗೆ ಕಾರಣವಾಯಿತು. ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ನಂತರ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಬಾಂಗ್ಲಾದೇಶ ತಂಡ
ತಮೀಮ್ ಇಕ್ಬಾಲ್ (ನಾಯಕ), ಲಿಟ್ಟನ್ ದಾಸ್, ನಜ್ಮುಲ್ ಹೊಸೈನ್ ಶಾಂಟೊ, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ತೌಹಿದ್ ಹೃದಯೋಯ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಎಬಾಡೋಟ್ ಹೊಸೈನ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮೂದ್, ಶೋರಿಫುಲ್ ಇಸ್ಲಾಂ, ಅಫೀಫ್ ಹೊಸೈನ್, ಮೊಹಮ್ಮದ್ ನಯಿಮ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications